ಈ ದಿನ ಸಂಪಾದಕೀಯ | ಏರುತ್ತಿರುವ ಬೆಲೆ ಮತ್ತು ಬದುಕಲು ಕಲಿಸುತ್ತಿರುವ ಮೋದಿ

Date:

ಬೆಲೆ ಏರಿಕೆ ಎನ್ನುವುದು ಸದ್ಯದ ಸಮಸ್ಯೆಯಲ್ಲ; ಅದು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಬದುಕನ್ನು ಕಾಡುತ್ತಿರುವ ಶಾಶ್ವತ ಸಂಕಟ. ಆದಾಯ ಹೆಚ್ಚಾಗುವ ವೇಗಕ್ಕಿಂತ ಮನೆ ನಿಭಾವಣೆಯ ವೆಚ್ಚದ ವೇಗ ನಿಯಂತ್ರಣಕ್ಕೆ ಸಿಗದಾಗಿದೆ. ಆದರೆ, ಮೋದಿಯವರು ದೇಶದ ಜನಗಳಿಗೆ ಬದುಕಲು ಕಲಿಯಿರಿ ಎನ್ನುತ್ತಿದ್ದಾರೆ...

2014ರ ಹಿಂದೆ ದೇಶದಲ್ಲಿ ‘ಗುಜರಾತ್ ಮಾಡೆಲ್’ ಭಾರೀ ಪ್ರಚಾರದಲ್ಲಿತ್ತು. 2014ರ ನಂತರ, ‘ಗುಜರಾತ್ ಮಾಡೆಲ್’ನೇ ಮುಂದಿಟ್ಟು ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು, ಸಾಮಾನ್ಯವಾಗಿ ಭಾರತದ ಜಾಗತಿಕ ಪ್ರಗತಿ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಡಿಜಿಟಲ್ ಕ್ರಾಂತಿ, ಮೂಲಸೌಕರ್ಯ ಅಭಿವೃದ್ಧಿ, ವಿಕಸಿತ ಭಾರತ ಮತ್ತು ಅಮೃತಕಾಲದ ಕನಸಿನ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಅವರ ಭಾಷಣಗಳಲ್ಲಿ ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಚಿತ್ರಣ ಕಾಣಿಸುತ್ತಿತ್ತು.

- Advertisement -

ಗುಜರಾತ್ ಮಾಡೆಲ್ ಮತ್ತು ವಿಕಸಿತ ಭಾರತಕ್ಕೆ ಬಣ್ಣ ಕಟ್ಟಿ ಬಿತ್ತರಿಸಿದ ಮಾಧ್ಯಮಗಳ ಕೃಪೆಯಿಂದ ಭಾರತ ಆರ್ಥಿಕಾಭಿವೃದ್ಧಿಯ ನಾಗಾಲೋಟದಲ್ಲಿರುವಂತೆ ಭಾಸವಾಗುತ್ತಿತ್ತು. ಭಾರತದ ಪ್ರಜೆಗಳು ಅಚ್ಛೇ ದಿನಗಳಲ್ಲಿ ಬದುಕುತ್ತಿರುವಂತೆ ಕಾಣುತ್ತಿತ್ತು. ಕಾಲಾನಂತರ ಗುಜರಾತ್ ಮಾಡೆಲ್, ಗುಜರಿ ಎಂದು ತಿಳಿಯಿತು. ಈಗ ಬೆಲೆ ಏರಿಕೆ, ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ, ಆರ್ಥಿಕ ಏರುಪೇರುಗಳಿಂದಾಗಿ ವಿಕಸಿತ ಭಾರತ, ವಿದ್ವೇಷ ಭಾರತ ಎನ್ನುವುದು ಎಲ್ಲರ ಅರಿವಿಗೂ ಬಂದಿದೆ.    

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಆದರೆ, ಪ್ರಧಾನಿ ಮೋದಿಯವರು ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುತ್ತಿದ್ದಾರೆ. ದೇಶದ ಜನಗಳಿಗೆ ಬದುಕಲು ಕಲಿಯಿರಿ ಎಂದು ತಾಳ್ಮೆ, ತ್ಯಾಗ, ಆತ್ಮನಿರ್ಭರತೆಯ ಪಾಠ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗಲು ತಿಳಿಹೇಳುತ್ತಿದ್ದಾರೆ.

ದೇಶದ ಆರ್ಥಿಕತೆಯ ಬಗ್ಗೆ ಸರ್ಕಾರ ಎಷ್ಟೇ ಹೇಳಿಕೊಂಡರೂ, ಮಾಧ್ಯಮಗಳು ಬಣ್ಣಕಟ್ಟಿ ಬಿತ್ತರಿಸಿದರೂ, ಅಡುಗೆ ಮನೆಯ ಅಸಲಿಯತ್ತೇ ಆರ್ಥಿಕತೆಯ ನಿಜಸ್ಥಿತಿಯನ್ನು ತೋರಿಸುತ್ತದೆ. ಷೇರು ಮಾರುಕಟ್ಟೆ ಹೊಸ ದಾಖಲೆ ಬರೆಯಬಹುದು, ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳು ಸರ್ಕಾರದ ಭಾಷಣಗಳಿಗೆ ಮೆರುಗು ನೀಡಬಹುದು. ಆದರೆ ಅಕ್ಕಿ, ಬೇಳೆ, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಮತ್ತು ಸಾರಿಗೆ ವೆಚ್ಚಗಳು ದಿನದಿಂದ ದಿನಕ್ಕೆ ಏರುತ್ತಿದ್ದರೆ, ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಅವರ ಆದಾಯ ಏರದೆ, ಬೆಲೆಗಳು ನಿರಂತರವಾಗಿ ಏರುತ್ತಲೇ ಇದ್ದರೆ, ಬದುಕು ನರಕವಾಗುತ್ತದೆ.

ಇದನ್ನು ಓದಿದ್ದೀರಾ?: ದೇಶದ ಜನತೆಗೆ ಮತ್ತೆ ಆಘಾತ: ಉಜ್ವಲ ಸಬ್ಸಿಡಿ ಸಿಲಿಂಡರ್ ಕೋಟಾ 9ರಿಂದ 4ಕ್ಕೆ ಇಳಿಕೆ

ಕಳೆದ ಕೆಲವು ವರ್ಷಗಳಿಂದ ದೇಶದ ಲಕ್ಷಾಂತರ ಕುಟುಂಬಗಳು ಅರೆಹೊಟ್ಟೆಯಲ್ಲಿ ದಿನದೂಡುತ್ತಿವೆ. ಬೆಲೆ ಏರಿಕೆ ಎನ್ನುವುದು ಸದ್ಯದ ಸಮಸ್ಯೆಯಲ್ಲ; ಅದು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಬದುಕನ್ನು ಕಾಡುತ್ತಿರುವ ಶಾಶ್ವತ ಸಂಕಟವಾಗಿದೆ. ಆದಾಯ ಹೆಚ್ಚಾಗುವ ವೇಗಕ್ಕಿಂತ ಮನೆ ನಿಭಾವಣೆಯ ವೆಚ್ಚದ ವೇಗ ನಿಯಂತ್ರಣಕ್ಕೆ ಸಿಗದಾಗಿದೆ.

ವಿಪರ್ಯಾಸಕರ ಸಂಗತಿ ಎಂದರೆ, ಬೆಲೆ ಏರಿಕೆಯ ಹೊರೆ ಎಲ್ಲರ ಮೇಲೂ ಸಮಾನವಾಗಿ ಬೀಳುವುದಿಲ್ಲ. ಶ್ರೀಮಂತರಿಗೆ ಇದು ಚಿಲ್ಲರೆ ಕಾಸಿಗೆ ಸಮ. ಆದರೆ ದಿನಗೂಲಿ ಕಾರ್ಮಿಕರಿಗೆ, ಸಣ್ಣ ರೈತರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ನಿರುದ್ಯೋಗಿ ಯುವಜನತೆಗೆ, ನಿವೃತ್ತರಿಗೆ, ಹಿರಿಯ ನಾಗರಿಕರಿಗೆ ಇದು ಬದುಕಿನ ಪ್ರಶ್ನೆ. ಅಡುಗೆ ಗ್ಯಾಸ್ ದರ ಏರಿದರೆ ಶ್ರೀಮಂತ ಕುಟುಂಬಕ್ಕೆ ಅದು ಏರಿಕೆಯೇ ಅಲ್ಲ. ಆದರೆ ಬಡ ಕುಟುಂಬದಲ್ಲಿ ಅದು ಒಂದು ಹೊತ್ತಿನ ಊಟವನ್ನೇ ಕಿತ್ತುಕೊಳ್ಳಬಹುದು.

ಬೆಲೆ ಏರಿಕೆಗೆ ಸರ್ಕಾರ ಪದೆ ಪದೇ ಜಾಗತಿಕ ಪರಿಸ್ಥಿತಿಗಳನ್ನು ಕಾರಣವಾಗಿ ಮುಂದಿಡುತ್ತದೆ. ಇಸ್ರೇಲ್-ಇರಾನ್ ಯುದ್ಧ, ಕೋವಿಡ್ ಪರಿಣಾಮ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಎನ್ನುವುದು ಸತ್ಯ. ಆದರೆ ಇದೇ ಅವಧಿಯಲ್ಲಿ ಅನೇಕ ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸಲು ಬೆಲೆ ನಿಯಂತ್ರಣ, ತೆರಿಗೆ ಕಡಿತ ಮತ್ತು ನೇರ ಆರ್ಥಿಕ ನೆರವಿನಂತಹ ಕ್ರಮಗಳನ್ನು ಕೈಗೊಂಡಿವೆ. ನಮ್ಮ ದೇಶದಲ್ಲಿ ಮಾತ್ರ ಜನರ ಸಹನೆಯನ್ನೇ ಪ್ರಮುಖ ಆರ್ಥಿಕ ನೀತಿಯಾಗಿ ಪರಿಗಣಿಸಿದಂತೆ ಕಾಣುತ್ತದೆ. ಅಷ್ಟೇ ಅಲ್ಲ, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಬೆಲೆ ಏರಿಕೆಯಾಗಿರುವುದನ್ನು ಹೋಲಿಕೆ ಮಾಡಿ, ನಮ್ಮಲ್ಲಿಯೇ ಕಡಿಮೆ ಎಂದು ಸಮರ್ಥಿಸಿಕೊಳ್ಳುವ ನೀಚತನಕ್ಕೆ ಇಳಿಯುವುದನ್ನು ಕಾಣುತ್ತಿದ್ದೇವೆ.  

ಇನ್ನೊಂದು ಆತಂಕಕಾರಿ ಸಂಗತಿ ಎಂದರೆ, ಬೆಲೆ ಏರಿಕೆ ಕುರಿತು ಪ್ರಶ್ನೆ ಮಾಡುವವರನ್ನು ರಾಷ್ಟ್ರದ ಪ್ರಗತಿ ವಿರೋಧಿಗಳಂತೆ ಚಿತ್ರಿಸಲಾಗುತ್ತದೆ. ಮೋದಿ ಸಾಧನೆಗಳನ್ನು ಹೊಗಳುವುದು ದೇಶಭಕ್ತಿಯಾದರೆ, ಅಡುಗೆ ಮನೆಯ ಕಷ್ಟವನ್ನು ಹೇಳಿಕೊಳ್ಳುವುದು ದೇಶದ್ರೋಹ ಎಂಬ ವಾತಾವರಣ ದೇಶದಲ್ಲಿ ಬೆಳೆಯುತ್ತಿದೆ. ಇದು ಯಾವ ಪ್ರಜೆಗಳಿಂದ ಅಧಿಕಾರಕ್ಕೇರಿದರೋ, ಅದೇ ಪ್ರಜೆಗಳನ್ನು ಅಪಹಾಸ್ಯ ಮಾಡುವ ಕಿಡಿಗೇಡಿ ಕೃತ್ಯ. ಪ್ರಜಾಪ್ರಭುತ್ವಕ್ಕೇ ಮಸಿಬಳಿಯುವ ಮೊಂಡಾಟ.

ಒಂದು ರಾಷ್ಟ್ರದ ಶಕ್ತಿ ಅದರ ಗಗನಚುಂಬಿ ಕಟ್ಟಡಗಳಲ್ಲಿ ಅಥವಾ ವಿಶ್ವದ ವೇದಿಕೆಗಳ ಮೇಲೆ ನಿಂತು ಮಾಡುವ ಭಾಷಣಗಳಲ್ಲಿ ಇರುವುದಿಲ್ಲ. ಆ ರಾಷ್ಟ್ರದ ಅತ್ಯಂತ ದುರ್ಬಲ ನಾಗರಿಕ ಕೂಡ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತಿದೆಯೇ ಎಂಬುದರಲ್ಲಿ ಅದರ ನಿಜವಾದ ಶಕ್ತಿ ಅಡಗಿದೆ. ಇಂದು ಭಾರತದಲ್ಲಿ ಲಕ್ಷಾಂತರ ಕುಟುಂಬಗಳು ಏರುತ್ತಿರುವ ಬೆಲೆಗಳ ಒತ್ತಡಕ್ಕೆ ಸಿಲುಕಿ ನರಳುತ್ತಿರುವಾಗ, ಅವರಿಗೆ ಬೇಕಾಗಿರುವುದು ಸಹನೆಯ ಸಂದೇಶವಲ್ಲ- ಸ್ಪಷ್ಟ ಪರಿಹಾರ ಮತ್ತು ಸ್ಪಂದನಶೀಲ ಆಡಳಿತ.

ಇದನ್ನು ಓದಿದ್ದೀರಾ?: ಕಾಕ್ರೋಚ್ ಪ್ರತಿಭಟನೆಯು ದೈತ್ಯ ನೀರ್ಗಲ್ಲಿನ ತುತ್ತ ತುದಿ ಮಾತ್ರ!

ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಚರ್ಚೆಗಳಲ್ಲಿ ರಾಷ್ಟ್ರದ ಹೆಮ್ಮೆ, ಜಾಗತಿಕ ನಾಯಕತ್ವ ಮತ್ತು ಅಭಿವೃದ್ಧಿಯ ದೊಡ್ಡ ದೊಡ್ಡ ಯೋಜನೆಗಳಿಗೆ ಹೆಚ್ಚಿನ ಸ್ಥಾನ ಸಿಗುತ್ತಿದೆ. ಆದರೆ ಬೆಲೆ ಏರಿಕೆ, ನಿರುದ್ಯೋಗ, ಆದಾಯ ಅಸಮಾನತೆ ಮತ್ತು ಕೃಷಿ ಸಂಕಷ್ಟದಂತಹ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ನಿರ್ಲಕ್ಷಿಸಲಾಗುತ್ತಿದೆ. ಆರ್ಥಿಕತೆಯ ನಿಜವಾದ ಪರೀಕ್ಷೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಲ್ಲ, ಸಾಮಾನ್ಯ ನಾಗರಿಕನ ಮನೆಯ ಖರ್ಚಿನ ಪುಸ್ತಕದಲ್ಲೇ ನಡೆಯುವುದು.

ದೇಶಕ್ಕೆ ಒಬ್ಬ ವಿದ್ಯಾವಂತ ನಾಯಕನ ನೇತೃತ್ವವಿರಬೇಕು, ದೇಶದ ಆರ್ಥಿಕತೆ ಸದೃಢವಾಗಿರಬೇಕು ಎಂಬುದು ಎಲ್ಲರ ಆಶಯ. ಆ ಆಶಯ ದೇಶದ ಜನರ ಜೀವನದಲ್ಲಿ ಪ್ರತಿಫಲಿಸಬೇಕು. ಆದರೆ ಮೋದಿಯವರ ಆಡಳಿತದಲ್ಲಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಬೆಲೆಗಳು ಆಕಾಶಕ್ಕೆ ಲಗ್ಗೆ ಇಟ್ಟಿವೆ. ಬಡವರು ಮತ್ತು ಮಧ್ಯಮವರ್ಗದವರು ಬದುಕುವುದೇ ಕಷ್ಟವಾಗಿದೆ. ಇಂತಹ ದಿಕ್ಕೆಟ್ಟ ಸ್ಥಿತಿಯಲ್ಲಿ ದೇಶದ ಜನತೆ ಕೇಳುತ್ತಿರುವುದು ಸೌಲಭ್ಯ ಮತ್ತು ಪರಿಹಾರ. ಸಿಗುತ್ತಿರುವುದು ಬರಿ ಬೋಧನೆ. ಆದರೆ, ಅದಾನಿ-ಅಂಬಾನಿಗಳು ಮೋದಿಯವರ ಬೋಧನೆ ಕೇಳುವುದಿಲ್ಲ. ಬಲಿಯಾಗುವುದು ಯಾವಾಗಲೂ ಕುರಿ-ಕೋಳಿಗಳೇ ಹೊರತು, ಹುಲಿ-ಸಿಂಹಗಳಲ್ಲ!

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?

ಬ್ಲೂಮ್‌ಬರ್ಗ್ ವೇದಿಕೆ ಮೇಲೆ ನಿಂತು ಪ್ರಧಾನಿ ಮೋದಿಯವರು, ಜಿಡಿಪಿ ಶೇ.7.8ರಷ್ಟು ಜಿಗಿದಿದೆ,...

ಈ ದಿನ ಸಂಪಾದಕೀಯ | ನೆದರಿಲ್ಲದ ನಾಯಕರ ವಾಕ್ಸಮರ, ಯಾರಿಗೆ ಲಾಭ?

ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ- ಇಬ್ಬರೂ ಜಾತಿಬಲ, ಹಣಬಲ, ಅಧಿಕಾರದ...

ಈ ದಿನ ಸಂಪಾದಕೀಯ | ಕಾಕ್ರೋಚ್‌ಗಳ ಮೇಲೆ ಮೋದಿ ಸರ್ಕಾರದ ಸರ್ವಾಧಿಕಾರ; ಅವನತಿಯ ಮುನ್ಸೂಚನೆಯೇ?

ಸಂವಿಧಾನದ 19ನೇ ವಿಧಿಯು ದೇಶದ ಜನರಿಗೆ ಶಾಂತಿಯುತವಾಗಿ ಸಭೆ ಸೇರುವ ಮತ್ತು...

ಈ ದಿನ ಸಂಪಾದಕೀಯ | ರಾಜಧಾನಿ ದೆಹಲಿಗೆ ದಿಗ್ಬಂಧನ- ಸಹಸ್ರಾರು ಯುವಜನರ ಬಂಧನ, ಇದೇನು ತುರ್ತುಪರಿಸ್ಥಿತಿಯೇ?

ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ...