ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದಲ್ಲಿ ಮಸೀದಿ ಬಳಿ ಕೇಸರಿ ಧ್ವಜ ಕಟ್ಟುತ್ತಿದ್ದ ದತ್ತ ಮಾಲಾಧಾರಿಗಳನ್ನು ಮತ್ತೊಂದು ಕೋಮಿನ ಯುವಕರು ತಡೆದಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಹಿಂದುತ್ವ ಕೋಮು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ಹಿಂದುತ್ವ ಕೋಮುವಾದಿ ಸಂಘಟನೆ ವಿಶ್ವ ಹಿಂದು ಪರಿಷತ್ 24, 25 ಮತ್ತು 26ರಂದು ದತ್ತ ಜಯಂತಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ದತ್ತ ಮಾಲೆ ಧರಿಸಿರುವ ಹಿಂದುತ್ವವಾದಿ ಕೋಮು ಕಾರ್ಯಕರ್ತರು ಚಿಕ್ಕಮಗಳೂರಿನ ವಿವಿಧ ಭಾಗಗಳಲ್ಲಿ ಕೇಸರಿ ಧ್ವಜಗಳನ್ನು ಕಟ್ಟುತ್ತಿದ್ದಾರೆ.
ಈ ವೇಳೆ, ಮಸೀದಿ ಬಳಿಯೂ ಕೇಸರಿ ಧ್ವಜ ಕಟ್ಟಲು ದತ್ತಮಾಲೆ ಧರಿಸಿದ್ದವರು ಮುಂದಾಗಿದ್ದಾರೆ. ಅವರನ್ನು ತಡೆದು, ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಆಲ್ದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಹಿಂದು-ಮುಸ್ಲಿಂ ಸೌಹಾರ್ದ ತಾಣವಾಗಿರುವ ಬಾಬಾಬುಡನ್‌ಗಿರಿ ದರ್ಗಾವನ್ನು ದತ್ತಪೀಠ ಮಾಡುತ್ತೇವೆಂದು ಹಿಂದುತ್ವ ಕೋಮು ಸಂಘಟನೆಗಳು ವಿವಾದ ಸೃಷ್ಠಿಸಿವೆ. ಹೀಗಾಗಿ, ಪ್ರತಿ ವರ್ಷವೂ ದತ್ತ ಜಯಂತಿ ಆಚರಿಸುತ್ತಿವೆ. ಬಾಬಾಬುಡನ್‌ಗಿರಿಯಲ್ಲಿ ಡಿಸೆಂಬರ್ 24, 25 ಮತ್ತು 26ರಂದು ದತ್ತಜಯಂತಿ ನಡೆಯುವ ಕಾರಣ, ಡಿಸೆಂಬರ್ 23ರಿಂದ 27ರವರೆಗೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.