ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಹಾಗೂ ಗಂಡ್ರಗಾನಹಳ್ಳಿ ಮಧ್ಯ ಇರುವ ದುಗ್ಗನಾರೆಪಲ್ಲಿ ಬಳಿ ನಡೆದಿದೆ.
ಹಲ್ಲೆಗೆ ಒಳಗಾದ ವ್ಯಕ್ತಿ ಮುರುಗಮಲ್ಲ ಹೋಬಳಿ ಗಂಡ್ರಗಾನಹಳ್ಳಿ ಗ್ರಾಮದ ಖದೀರ್ ಬೇಗ್ ಎಂಬುವವರ ಪುತ್ರ ರೋಷನ್ ಬೇಗ್(30), ಪತ್ನಿ ಅಸ್ಮ ಸುಲ್ತಾನ(28) ಎಂದು ಗುರುತಿಸಲಾಗಿದೆ.
ರೋಷನ್ ಬೇಗ್ ಸುಮಾರು ಎರಡು ವರ್ಷಗಳಿಂದ ಕಲ್ಪವೃಕ್ಷ ಖಾಸಗಿ ಬಸ್‌ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಮುರುಗಮಲ್ಲ ಗ್ರಾಮದ ರಘು ರವರ ಅನುಯಾಯಿ ಗಂಡ್ರಗಾನಹಳ್ಳಿ ಗ್ರಾಮದ ವಾಸಿಯಾದ ಸುರೇಶ್ ಬಿನ್ ನಾರಾಯಣಸ್ವಾಮಿ (32)ಇವರಿಗೂ ಹಾಗೂ ರೋಷನ್ ಬೇಗ್ ನಡುವೆ ಎರಡು ತಿಂಗಳ ಹಿಂದೆ ಮೀಲಾದುನ್ನಬಿ ಹಬ್ಬದಂದು ಗಲಾಟೆಯಾಗಿದ್ದು, ಗ್ರಾಮದ ಹಿರಿಯ ಮುಖಂಡರು ಪಂಚಾಯಿತಿಗಳು ಮಾಡಿ ರಾಜಿ ಪಂಚಾಯತಿ ಮಾಡಿದ್ದಾರೆ. ಹೀಗಿರುವಾಗ, ಮತ್ತೆ ಪದೇ ಪದೇ ಸುರೇಶ್ ಹಾಗೂ ಅವನ ಅನುಯಾಯಿಗಳನ್ನು ಕರೆದುಕೊಂಡು ಹೋಗಿ ರೋಷನ್ ಬೇಗ್‌ಗೆ ಗುರಾಯಿಸುವುದು ರೇಗಿಸುವುದು ಮಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ ರಾತ್ರಿ 10:30ಕ್ಕೆ ಡ್ರೈವರ್ ಕೆಲಸ ಮುಗಿಸಿ ಮನೆ ಕಡೆ ರೋಷನ್ ಬೇಗ್ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸುರೇಶ್ ಹಿಂಬಾಲಿಸಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇನ್ನೂ ಅಲ್ಲಿಗೆ ಬಂದ ರೋಶನ್ ಬೇಗ್ ಅವರ ಧರ್ಮಪತ್ನಿ ಅಸ್ಮ ಸುಲ್ತಾನ ಅವರ ಮೇಲೆಯೂ ಸಹ ಹಲ್ಲೆ ನಡೆಸಿದ್ದು, ಹಲ್ಲೆಗೆ ಒಳಗಾದ ಪತಿ-ಪತ್ನಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಸಿಎನ್‌ಜಿ ಇಂಧನ ಕೇಂದ್ರಗಳ ಕೊರತೆ; ಶಾಶ್ವತ ಪರಿಹಾರಕ್ಕೆ ಕಾಯುತ್ತಿದ್ದಾರೆ ಆಟೋ ಚಾಲಕರು
ಕೆಂಚಾರ್ಲಹಳ್ಳಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಧಾವಿಸಿ ಇಬ್ಬರಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
