ದಾವಣಗೆರೆ ನಗರದ ಚಾಮರಾಜಪೇಟೆಯ ಹಳೆಯ ಸರ್ಕಾರಿ ಹೆರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಂಬಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಮೂರು ಮತ್ತು ನಾಲ್ಕು ಚಕ್ರದ ಗೂಡ್ಸ್ ಚಾಲಕರ ಹಾಗೂ ಮಾಲೀಕರ ಸಂಘವನ್ನು ಉದ್ಘಾಟಿಸಲಾಯಿತು.

ಸಂಘದ ನಾಮಫಲಕ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ “ಸರ್ಕಾರ ಅಭಿವೃದ್ಧಿಯ ಹೆಸರಲ್ಲಿ ನಗರಗಳನ್ನು ಸ್ವಚ್ಛ, ಸ್ಮಾರ್ಟ್ ಮಾಡುತ್ತೇವೆ ಎನ್ನುವ ಮೂಲಕ ದುಡಿಯುವ ಕೈಗಳನ್ನು ಒಕ್ಕಲೆಬ್ಬಿಸಿ ಅನ್ಯಾಯ ಮಾಡುತ್ತಿದ್ದಾರೆ. ನಿಮ್ಮ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ದುಡಿಯುವ ವರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ. ಅವರು
ಐಶಾರಾಮಿ ಕಾರು, ಬಂಗಲೆ ಕೇಳುವುದಿಲ್ಲ, ದುಡಿಯುವ ವರ್ಗಕ್ಕೆ, ಚಾಲಕರಿಗೆ ಅಗತ್ಯ ವಸತಿ, ನಿಲ್ದಾಣ, ಮೂಲಸೌಕರ್ಯ ನೀಡಲಿ. ವಾಹನ ಚಾಲಕರು, ಮಾಲೀಕರಿಗೆ ಪೊಲೀಸ್ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡಬಾರದು” ಎಂದು ಒತ್ತಾಯಿಸಿದರು.
“ದಲಿತ ಸಂಘರ್ಷ ಸಮಿತಿಯು ಜಾತಿ ಧರ್ಮದ ಅಡಿಯಲ್ಲಿ ಕೆಲಸಮಾಡುವುದಿಲ್ಲ, ಎಲ್ಲಾ ವರ್ಗದ ಶೋಷಿತರ ಪರ, ಮೇಲ್ವರ್ಗದ ಬಡವರ ಪರ ಹೋರಾಟ ಮಾಡಿದೆ. ಯಾವುದೇ ವರ್ಗದ ಬಡವರಿಗೆ, ಶೋಷಿತರಿಗೆ, ದುಡಿಯುವ ವರ್ಗಕ್ಕೆ ವಿನಾಕಾರಣ ತೊಂದರೆ ನೀಡಿದರೆ ದಲಿತ ಸಂಘರ್ಷ ಸಮಿತಿ ಸಹಿಸುವುದಿಲ್ಲ. ಸರ್ಕಾರವನ್ನೇ ನಡುಗಿಸುವ ಹೋರಾಟಗಳನ್ನು ದಸಂಸ ನಡೆಸಲಿದೆ” ಎಂದು ತಿಳಿಸಿದರು.

ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ವಿಜಯಲಕ್ಷ್ಮಿ ಮಾತನಾಡಿ “ವಾಹನ ಚಾಲಕರು, ಮಾಲೀಕರಿಗೆ ದಸಂಸ ಬೆನ್ನಿಗಿದೆ. ಉತ್ತಮ ದುಡಿಮೆಯ ಜೊತೆಗೆ ದುಶ್ಚಟಗಳಿಗೆ ಬಲಿಯಾಗದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಹಾರೈಸಿದರು.
ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬೇತೂರು ಹನುಮಂತಪ್ಪ ಮಾತನಾಡಿ “ಕೆಲವು ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ.1998 ರಿಂದಲೂ ಇಲ್ಲಿ ವಾಹನ ನಿಲುಗಡೆ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಇತ್ತೀಚೆಗೆ ಏಳೆಂಟು ವರ್ಷಗಳಿಂದ ಕಿರುಕುಳ ಪ್ರಾರಂಭವಾಗಿದೆ. ಹೀಗಾಗಿ ಕಿರುಕುಳ ತಪ್ಪಿಸಲು, ಚಾಲಕರ ಒಗ್ಗಟ್ಟಿಗಾಗಿ ದಸಂಸ ನೇತೃತ್ವದಲ್ಲಿ ಗೂಡ್ಸ್ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಚಾಲನೆ ನೀಡಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಟೋಲ್ ಬಳಿ ಅಂಗಡಿ ತೆರವು; ಸಂತ್ರಸ್ತರೊಂದಿಗೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಾದ
ಮಹಾಂತೇಶ, ಶಾಂತಿನಗರ ಮಂಜುನಾಥ್, ಖಾಲಿದ್, ಎಲೆಕ್ಟ್ರಿಕ್ ಮಂಜುನಾಥ್, ಮಂಜುನಾಥ್ ಗಾಂಧಿನಗರ ,
ಶಿವಶಂಕರ್ ಎಸ್ ಎಂ ಗಾಂಧಿನಗರ, ದೊಡ್ಡಪ್ಪ ಆವರಗೊಳ್ಳ, , ಎಸ್, ರಾಜಪ್ಪ, ತಾ.ಸಂ ಚಿತ್ತಾನಹಳ್ಳಿ ನಾಗರಾಜ್, ಸತೀಶ್ ನೇರ್ಲಿಗಿ, ಚಾಮರಾಜಪೇಟೆ
ಗೂಡ್ಸ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬೇತೂರು ಹನುಮಂತಪ್ಪ , ಉಪಾಧ್ಯಕ್ಷ ಬಾಪುಗೌಡ, ಬೂದಾಳ್ ರವಿಕುಮಾರ್, ವಾಹೀದ್, ಹಾಲೇಶ್, ಅಂಜಿನಪ್ಪ, ಮಹಾಲಿಂಗಪ್ಪ, ಚಂದ್ರಪ್ಪ, ಅಜೀತ್, ಚನ್ನಪ್ಪ, ಶಾಂತಪ್ಪ, ಬಿಸ್ಮಿಲ್ಲಾ, ತಿಮ್ಮೇಶ, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.





