ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಒನಕೆ ಓಬವ್ವ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಂಘಟನಾ ಸಮಿತಿ 117ನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಗುಣಮಟ್ಟದ ಉದ್ಯೋಗ, ರಕ್ಷಣೆ, ಸೌಲಭ್ಯ, ಗೌರವ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿತು. .
‘ಜಗತ್ತಿನ ಮಹಿಳಾ ಕಾರ್ಮಿಕರ ಹೋರಾಟದಿಂದಲೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಾರಂಭವಾಗಿದ್ದು, ಅಮಾನವೀಯ ಪರಿಸ್ಥಿತಿಗಳ ವಿರುದ್ಧ ಇಪ್ಪತ್ತನೇ ಶತಮಾನದಲ್ಲಿ ಮಹಿಳಾ ಕಾರ್ಮಿಕರ ಹೋರಾಟ ಅತ್ಯಂತ ಪ್ರಮುಖವಾಗಿದೆ. ಮಹಿಳೆಯರಿಗೆ ಮುಖ್ಯವಾಗಿ ರಾಜಕೀಯ ಹಕ್ಕು, ಮತದಾನದ ಹಕ್ಕು ನೀಡಬೇಕೆಂದು ಮತ್ತು ಸಾಮ್ರಾಜ್ಯಶಾಹಿಗಳ ವಿರುದ್ಧ ಮಹಿಳಾ ಕಾರ್ಮಿಕರ ಹೋರಾಟ ನಡೆಯಿತು. ಜರ್ಮನಿಯ ಕ್ರಾಂತಿಕಾರಿ ಹಾಗೂ ಸಮಾಜವಾದಿ ನಾಯಕಿ ಕ್ಲಾರಾ ಜಟ್ಕಿನ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಸ್ಪೂರ್ತಿ’ ಎಂದು ಮುಖಂಡರು ಸ್ಮರಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಸಂಚಾಲಕ ಮಲಿಯಪ್ಪ ಮಾತನಾಡಿ, “ರಾಷ್ಟ್ರ ಮಟ್ಟದಲ್ಲಿ ಮಹಿಳೆಯರ ಕಗ್ಗೊಲೆಯಾಗುತ್ತಿದೆ. ಪ್ರತಿ ದಿನ 5 ಲಕ್ಷಿ ಮಹಿಳಾ ಹತ್ಯೆಗಳು ನಡೆಯುತ್ತಿವೆ ಎನ್ನುವ ವರದಿ ಇದೆ. ಬೇಟಿ ಬಚಾವೋ ಬೇಟಿ ಪಡಾವೋ ಎಂದು ಮಹಿಳೆಯರ, ಹೆಣ್ಣು ಮಕ್ಕಳ ರಕ್ಷಣೆಯ ಹೆಸರೇಳಿ ಬಂದಂತ ನರೇಂದ್ರ ಮೋದಿ ಸರ್ಕಾರ
ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ. ಸರ್ಕಾರಗಳು ಜನಸಾಮಾನ್ಯರ, ಮಹಿಳೆಯರ ಪರವಾಗಿಲ್ಲ. ಚುನಾವಣೆಗೆ ಮುನ್ನ ಸಿದ್ದರಾಮಯ್ಯ ನವರೇ ಸ್ವತಹ ಭೂರಹಿತರಿಗೆ ಭೂಮಿ ಕೊಡುತ್ತೇವೆ ಎಂದು ತಿಳಿಸಿದ್ದರು. ಆದರೆ ಅಧಿಕಾರ ಬಂದ ನಂತರ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ, ಬಂಡವಾಳಶಾಹಿಗಳಿಗೆ ಭೂಮಿ ನೀಡುತ್ತಿದೆ. ಮಹಿಳೆಯರಿಗೆ, ವಯೋವೃದ್ದರಿಗೆ ಸಂಬಳ ಹೆಚ್ಚಿಸುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದರು. ಸಂಬಳ ಹೆಚ್ಚಳ ಮಾಡಿಲ್ವ. ಪೊಲೀಸರ ಮೇಲೆ ದೌರ್ಜನ್ಯಗಳಾಗುತ್ತಿವೆ. ಅವರಿಗೆ ಆತ್ಮಸ್ಥೈರ್ಯ ನೀಡುವ ಕೆಲಸ ಇಲ್ಲ. ನಮ್ಮನ್ನು ಆಳುವ ಸರ್ಕಾರಗಳು ನಿಷ್ಪ್ರಯೋಜಕವಾಗಿವೆ. ನಮ್ಮ ಕೂಲಿ, ರಕ್ಷಣೆ ಹೆಚ್ಚಾಗಬೇಕು. ನರೇಗಾ ಯೋಜನೆಯಡಿ ಸಿಎಸ್, ಡಿಎಸ್ ನಂತಹ ಅಧಿಕಾರಿಗಳು ಹಂಚಿಕೊಂಡು ತಿನ್ನುತ್ತಾರೆ. ಚಿತ್ರದುರ್ಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಳ್ಳ ಹಿಡಿದಿದೆ. ಜನಪ್ರತಿನಿಧಿಗಳು ನಿಷ್ಪ್ರಯೋಜಕರಾಗಿದ್ದಾರೆ. ಜನಪ್ರತಿನಿಧಿಗಳು ಎಲ್ಲವನ್ನೂ ಸರಿಪಡಿಸಬೇಕಿದೆ. ಮಹಿಳೆಯರು ಕಣ್ಣಿರು ಹಾಕುತ್ತಿದ್ದಾರೆ. ಮಹಿಳೆ, ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಿಗೆ ರಕ್ಷಣೆ ನೀಡಬೇಕು. ಇದರ ವಿರುದ್ಧ ಸಂಘಟಿತವಾಗಿ ಮಹಿಳೆಯರು ಮಾತನಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಿಐಟಿಯು ಸಂಚಾಲಕ ಗೌಸ್ ಪೀರ್ ಮಾತನಾಡಿ, “ಇಂದು ಎಲ್ಲಾ ರಂಗಗಳಲ್ಲೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮಹಿಳೆಯರಿಗೆ ಕೃಷಿ ಕೈಗಾರಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಸುರಕ್ಷತೆ, ಸೌಲಭ್ಯಗಳನ್ನು ನೀಡಬೇಕು” ಎಂದು ಒತ್ತಾಯಿಸಿದರು.
“ಮಹಿಳೆಯರಿಗೆ ಸಾಕಷ್ಟು ಗುಣಮಟ್ಟದ ಉದ್ಯೋಗಗಳನ್ನು ನೀಡಬೇಕು. ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ವಿವಿಧ ಸರ್ಕಾರಿ ಸ್ಕೀಮ್ ಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೂ ಕೂಡ ಕನಿಷ್ಠ ವೇತನ ಸೇವಾ ಭದ್ರತೆ, ಸೌಲಭ್ಯಗಳನ್ನು ನೀಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಮತ್ತು ದೌರ್ಜನ್ಯಕ್ಕೆ ಬಲಿಯಾದ ಮಹಿಳೆಯರಿಗೆ ಆಶ್ರಯ ಮತ್ತು ಆರ್ಥಿಕ ಬೆಂಬಲಕ್ಕಾಗಿ ಕಾನೂನು ಜಾರಿಗೊಳಿಸಬೇಕು. ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರಬೇಕು. ಕೃಷಿ ಕಾರ್ಮಿಕರಿಗೆ ಸಮಗ್ರ ಕಾನೂನು ರೂಪಿಸಿ ನರೇಗಾ ಕೆಲಸವನ್ನು ನಗರಗಳಿಗೆ ವಿಸ್ತರಿಸಿ ಕೂಲಿಯನ್ನು ಆರು ನೂರಕ್ಕೆ ಹೆಚ್ಚಿಸಬೇಕು. ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡದೇ, ಪುನಶ್ಚೇತನಗೊಳಿಸಬೇಕು ಎಂದು ಸಭೆಯು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನಿರ್ಣಯ ಕೈಗೊಂಡಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
ಕಾರ್ಯಕ್ರಮದಲ್ಲಿ ಸಿಐಟಿಯು ಮಹಿಳಾ ಮುಖಂಡರಾದ ನಿಂಗಮ್ಮ, ಗೌರಮ್ಮ, ನಿರ್ಮಲಮ್ಮ, ರಾಜಮ್ಮ, ಮಂಜುಳಾ, ಇಂದಿರಮ್ಮ, ಕಲ್ಯಾಣಮ್ಮ , ಕವಿತಾ, ಪಾರ್ವತಮ್ಮ, ಸಣ್ಣಮ್ಮ, ಚಂದ್ರಮ್ಮ, ಜಯಲಕ್ಷ್ಮಿ, ಹನುಮಕ್ಕ, ತನುಜಾ, ಮತ್ತು ಸಿಐಟಿಯು ಪದಾಧಿಕಾರಿಗಳಾದ ಟಿ ತಿಪ್ಪೇಸ್ವಾಮಿ, ಟಿ ನಿಂಗಣ್ಣ ಸೇರಿದಂತೆ ನೂರಾರು ಮಹಿಳೆಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು