ಬಾಲಕಿಯ ತಂದೆ, ತಾಯಿ ಸೇರಿದಂತೆ ಬಂಧುಗಳು ಬಲವಂತವಾಗಿ ಸೋದರ ಸಂಬಂಧಿಯೊಬ್ಬನ ಜೊತೆ ಮದುವೆ ಮಾಡಲು ಒತ್ತಾಯ ಮಾಡಿರುವ ಪ್ರಯತ್ನ ನೆಡೆಸಿದ್ದು, ಮದುವೆಗೆ ಬಾಲಕಿ ನಿರಾಕರಿಸಿ ರಕ್ಷಣೆಗೆ ಅಂಗಲಾಚಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರೆಡ್ಡಿಹಳ್ಳಿಯ ಕಾಡುಗೊಲ್ಲರ ಸಮುದಾಯದಲ್ಲಿ ಈ ಘಟನೆ ನೆಡೆದಿದೆ ಎನ್ನಲಾಗಿದೆ. ಮದುವೆಗೆ ಬಾಲಕಿ ಸ್ಪಷ್ಟವಾಗಿ ನಿರಾಕರಿಸಿ, ಗೋಗರೆದರೂ ತಾಯಿ, ತಂದೆ, ಕೆಲವು ಸಂಬಂಧಿಕರು ಮದುವೆ ಆಗಬೇಕು ಎಂದು ಆಕೆಗೆ ಹೊಡೆದು ಬಲವಂತ ಮಾಡಿದ್ದಾರೆ. ಹುಡುಗನೊಬ್ಬ ಕೈಯಲ್ಲಿ ತಾಳಿ ಹಿಡಿದಿದ್ದು, ಅಲ್ಲಿದ್ದ ಜನರು ಬಲವಂತವಾಗಿ ತಾಳಿ ಕಟ್ಟಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಘಟನೆ ಗಮನಕ್ಕೆ ಬಂದ ತಕ್ಷಣ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಆ ಬಾಲಕಿಯನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರಿಸಿದ್ದಾರೆ.
ವಿಡಿಯೋದಲ್ಲಿ ಅಪ್ರಾಪ್ತ ಬಾಲಕಿ ‘ನನ್ನನ್ನು ಬಿಟ್ಟು ಬಿಡಿ, ನನಗೆ ದೇವರೇ ಗತಿ, ಕಾಪಾಡು ದೇವರೇ, ಎಲ್ಲಿದ್ದೀಯಪ್ಪಾ ದೇವ್ರೆ” ಎಂದು ಅಂಗಲಾಚುತ್ತಿರುವ ಘಟನೆ ಮನಕಲಕುವಂತಿದೆ. ಆದರೂ ಮದುವೆ ಮಾಡಬೇಕೆಂದು ಪಟ್ಟು ಹಿಡಿದಿರುವ ಪೋಷಕರು ಬಾಲಕಿಯನ್ನು ಹೊಡೆದು ಬಡಿದು ಎಳೆದಾಡುತ್ತಿರುವ ಘಟನೆ ಇನ್ನು ಕೆಲವು ಜಾತಿ, ಸಮುದಾಯಗಳಲ್ಲಿ ಮತ್ತು ಸಮಾಜದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ಸಂಪ್ರದಾಯಗಳ ಹೆಸರಿನಲ್ಲಿ ಆಗುತ್ತಿರುವ ದೌರ್ಜನ್ಯವನ್ನು ಸಮಾಜದ ಮುಂದೆ ತೆರೆದಿಟ್ಟಿದೆ.
ಬಾಲ್ಯ ವಿವಾಹವನ್ನು ನಿಷೇಧಿಸಿ ಸರ್ಕಾರ ಕಾನೂನುಗಳನ್ನು ಜಾರಿ ಮಾಡಿ, ಶಿಕ್ಷೆಗಳನ್ನು ಜಾರಿ ಮಾಡಿದ್ದರೂ, ಬಾಲ್ಯ ವಿವಾಹ ತಡೆಯುವಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ ಜಾತಿಗಳಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ಹಾಗಾಗ್ಗೆ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಮಕ್ಕಳನ್ನು ಪೋಷಿಸಿ ಒಳ್ಳೆಯ ವಿದ್ಯಾಭ್ಯಾಸ ಮತ್ತು ಉತ್ತಮ ಜೀವನ ಕಲ್ಪಿಸಬೇಕಾದ ತಂದೆ-ತಾಯಿಗಳು ಕೂಡ ಬಾಲ್ಯ ವಿವಾಹಕ್ಕೆ ಕೈ ಜೋಡಿಸುತ್ತಿರುವುದು ಆತಂಕಕಾರಿ ಸಂಗತಿ.
ಮಾಹಿತಿ ನೀಡಿದ ಚಳ್ಳಕೆರೆ ಪೊಲೀಸ್ ಠಾಣೆಯ ಠಾಣಾಧಿಕಾರಿ “ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ, ಬಾಲಕಿಯ ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಎಫ್ ಐ ಆರ್ ಹಾಕಲಾಗಿದೆ. ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅವ್ಯವಹಾರ; ಆಡಳಿತಾಧಿಕಾರಿ ನೇಮಕಕ್ಕೆ ರಕ್ಷಣಾ ಸಮಿತಿಯ ಪ್ರತಿಭಟನೆ
ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿ ಸವಿತಾ, “ಘಟನೆಗೆ ಸಂಬಂಧಿಸಿದಂತೆ ನೊಂದಬಾಲಕಿಯ ರಕ್ಷಣೆ ಮಾಡಲಾಗಿದ್ದು, ಬಾಲಕಿ ಮಕ್ಕಳ ರಕ್ಷಣಾ ಸಮಿತಿಯ ಆರೈಕೆಯಲ್ಲಿದ್ದಾಳೆ. ಘಟನೆ ಸಂಬಧ ಐದು ಜನರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ಚಳ್ಳಕೆರೆಯಲ್ಲಿ ಮಕ್ಕಳ ರಕ್ಷಣಾ ಆಯೋಗದ ಸಭೆ ನಡೆಸಲಾಗುತ್ತಿದ್ದು, ತನಿಖೆ ಮತ್ತು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.ಮಕ್ಕಳ ರಕ್ಷಣೆ ಅರಿವಿನ ಕಾರ್ಯಕ್ರಮಗಳನ್ನು ಕೂಡ ಕೈಗೊಳ್ಳುತ್ತಿದ್ದೇವೆ. ಬಾಲ್ಯ ವಿವಾಹ ನಿಷೇಧ ಕುರಿತು ಸರ್ಕಾರ ಇಷ್ಟೆಲ್ಲಾ ಕ್ರಮಗಳನ್ನು ಕೈಕೊಂಡರೂ ಮತ್ತು ಮಕ್ಕಳ ರಕ್ಷಣಾ ಸಮಿತಿಯಿಂದ ಅರಿವಿನ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಕೂಡ ಕೆಲವು ಸಮುದಾಯಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ಇತರೆ ದೌರ್ಜನ್ಯಗಳನ್ನು ಮುಂದುವರೆಸಿರುವುದು ನಿಜಕ್ಕೂ ಆತಂಕಕಾರಿ” ಎಂದು ಪ್ರತಿಕ್ರಿಯಿಸಿದರು.