ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆದಲ್ಲಿ ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ಕಂಚಿಟಿಗ ಸಮುದಾಯದವರೇ ಆದ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರೂ ಕೂಡ ಈ ಬಗ್ಗೆ ಮೌನವಾಗಿದ್ದಾರೆ. ಇದು ಖಂಡನೀಯ ಎಂದು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಸಂಘದ ಪದಾಧಿಕಾರಿಗಳು ಸಭೆ ನಡೆಸಿದ್ದಾರೆ. ಕುಂಚಿಟಿಗ ಸಮುದಾಯದ ಒಗ್ಗಟ್ಟು ಮತ್ತು ಮೀಸಲಾತಿ ಕುರಿತು ಜಯಚಂದ್ರ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕಸವನಹಳ್ಳಿ ರಮೇಶ್, “ಈ ಹಿಂದೆಕುಂಚಿಟಿಗರನ್ನು ಕುಂಚಿಟಿಗ ಒಕ್ಕಲಿಗ ಹಾಗೂ ಕುಂಚಿಟಿಗ ಲಿಂಗಾಯಿತ ಎಂದು ಹೊಡೆದು ಇಬ್ಭಾಗ ಮಾಡಲಾಗಿದೆ. ಇದು ಕುಂಚಿಟಿಗ ಸಮಾಜಕ್ಕೆ ಮರ್ಮಾಘಾತವನ್ನು ಉಂಟು ಮಾಡಿದೆ. ಈಗ ಮತ್ತೊಮ್ಮೆ ಓಬಿಸಿ ಮೀಸಲಾತಿ ಕೊಡಿಸುವ ಸಂದರ್ಭದಲ್ಲಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿ ಇಲ್ಲದ ನಗರ ಮತ್ತು ಗ್ರಾಮೀಣ ಎನ್ನುವ ಅಂಶವನ್ನು ಸೇರಿಸುವ ಮುಖಾಂತರ ಮತ್ತೊಮ್ಮೆ ಕುಂಚಿಟಿಗರನ್ನು ಇಬ್ಬಾಗ ಮಾಡಲು ಮುಂದಾಗಿದ್ದಾರೆ. ಹೊಟ್ಟೆ ಪಾಡಿಗಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗಿರುವ ಕುಂಚಿಟಿಗರಿಗೆ ಮೀಸಲಾತಿ ಕೈ ತಪ್ಪಿ ಅಪಾರವಾದ ನಷ್ಟವಾಗಲಿದೆ” ಎಂದು ಹೇಳಿದ್ದಾರೆ.
“ಕುಂಚಿಟಿಗ ಸಮಾಜ ನಗರ ಮತ್ತು ಗ್ರಾಮೀಣ ಎಂದು ಇಬ್ಬಾಗವಾದರೆ, ಅದರ ಸಂಪೂರ್ಣ ಹೊಣೆಗಾರಿಕೆ ಜಯಚಂದ್ರ ಅವರದ್ದೇ ಆಗಲಿದೆ. ಹಾಗಾಗಿ, ಅವರು ಇತಿಹಾಸದಲ್ಲಿ ಕುಂಚಿಟಿಗರಿಗೆ ಗ್ರಾಮೀಣ ಮತ್ತು ನಗರವೆಂದು ಇಬ್ಬಾಗಿಸಿ ತಾರತಮ್ಯ ಮಾಡದಂತೆ ಒಬಿಸಿ ಮೀಸಲಾತಿ ದೊರೆಯುವಂತೆ ಮಾಡಬೇಕು. ಇಲ್ಲವಾದಲ್ಲಿ ಕುಂಚಿಟಿಗರನ್ನು ಇಬ್ಬಾಗ ಮಾಡಿದ ಅಪಕೀರ್ತಿಗೆ ಅವರು ಒಳಗಾಗುತ್ತಾರೆ” ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಕುಲಶಾಸ್ತ್ರ ಅಧ್ಯಯನಕಾರ ಎಸ್ ವಿ ರಂಗನಾಥ್, ತಾಲೂಕು ಅಧ್ಯಕ್ಷ ಹುಲಿ ರಂಗನಾಥ್, ಗೌರವಾಧ್ಯಕ್ಷ ಎಂ ಗಿರಿ ಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ ಕುಬೇರಪ್ಪ, ಖಜಾಂಚಿ ಪೆಪ್ಸಿ ಹನುಮಂತರಾಯ, ನಿರ್ದೇಶಕ ಕೆ ಕೆ ಹಟ್ಟಿ ಜಯಪ್ರಕಾಶ್, ಕುಂಚಿಟಿಗ ಇತಿಹಾಸಕಾರ ಕ್ಯಾದಿಗುಂಟೆ ಜಯರಾಯ್ಯ ಉಪಸ್ಥಿತರಿದ್ದರು.