ಕಾಮ್ರೇಡ್ ಎಂ.ಎನ್ ಸುಂದರರಾಜ್ ಬುಧವಾರ (ಫೆ.14) ಬೆಳಗಿನ ಜಾವ ನಮ್ಮನ್ನೆಲ್ಲ ಅಗಲಿದ್ದಾರೆ. ತೊಂಬತ್ತು ವರ್ಷ ತುಂಬಲು ಆರೇ ತಿಂಗಳು ಬಾಕಿಯಿದ್ದ ಕಾಮ್ರೇಡ್ ‘ಎಂಎನ್‌ಎಸ್’ ಬೀದರ್‌ನ 70-75 ವರ್ಷಗಳ ಎಲ್ಲ ಹೋರಾಟಗಳ, ಎಲ್ಲ ಆಗುಹೋಗುಗಳ ಎನ್‌ಸೈಕ್ಲೋಪೀಡಿಯ-ಕೈಪಿಡಿ-ರೆಡಿರೆಕನರ್, ಅಷ್ಟೇಕೆ, ಒಂದು ಪತ್ರಾಗಾರ(ಆರ್ಕೈವ್)ದಂತೆ ಇದ್ದರು.ಅವರು ಮತ್ತು ಎರಡು ವರ್ಷಗಳ ಹಿಂದೆ ಅಗಲಿದ ವಿಶ್ವನಾಥರಾವ್ ಪಾಟೀಲ್ ‘ದಮನ್’ ಈ ಇಬ್ಬರೂ ಸುಮಾರು 1955-60ರಿಂದಲೂ ಬೀದರ್‌ನ ಎಲ್ಲ ಚಳವಳಿ-ಹೋರಾಟಗಳ ಬಂಡಿಯನ್ನೆಳೆದ ಜೋಡೆತ್ತುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
ಇವರುಗಳ ಜೊತೆ ಹಣಮಂತಪ್ಪಾ ಪಾಟೀಲ್, ಶಿವರಾಜ ಕಾಡೋದೆ, ಬಿ.ಜಿ.ಸಿದ್ದಬಟ್ಟೆ, ಕಾಮ್ರೇಡ್ ಸಂಗ್ರಾಮಪ್ಪ ವಕೀಲರು ಇತ್ಯಾದಿ, ನಂತರದ ಸಾಲಿನ ಚಳವಳಿಗಾರರೂ, ಮುಂದೆ ಯುವ ತಲೆಮಾರಿನವರೂ ಸೇರಿ ಬೀದರ್‌ನ ಮಣ್ಣಲ್ಲಿ ಹೋರಾಗಳ ಗಟ್ಟಿ ಬೀಜಗಳನ್ನು ಬಿತ್ತಿ ಹುಲುಸಾದ ಬೆಳೆ ತೆಗೆದವರು. ಕಾರ್ಮಿಕರ, ರೈತರ, ದಲಿತರ, ಹಿಂದುಳಿದ ವರ್ಗಗಳ, ಮಹಿಳೆಯರ ಮತ್ತಿತರ ಎಲ್ಲ ಶೋಷಿತ ದಮನಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಂಕಟ ಸಂಕಷ್ಟಗಳಿಗೂ ಇವರು ದನಿ ಮಾತ್ರವಲ್ಲ, ಹೆಗಲು ತೋಳು ತೊಡೆ ಬ್ಯಾನರ್ ಭಿತ್ತಿಪತ್ರ ಮೈಕ್ ಎಲ್ಲವೂ ಆಗುತ್ತಿದ್ದರು. ಹಾಗೆಯೇ ದಸಂಸ, ಸಮುದಾಯ, ಬಂಡಾಯ ಮತ್ತಿತರ ಚಳವಳಿಗಳಿಗೂ ಇವರುಗಳು ಸಮೃದ್ಧವಾಗಿ ನೀರು ಗೊಬ್ಬರ ಉಣಿಸಿದವರು.
ಕಾಮ್ರೇಡ್ ಸುಂದರರಾಜ್ ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿನ ಎಡಪಂಥೀಯ, ವಿಶೇಷವಾಗಿ ನಕ್ಸಲ್ ಸಹಾನುಭೂತಿಯ ಹೋರಾಟಗಳಲ್ಲಿ ಪಾಲ್ಗೊಂಡವರು. ಆರೂಕಾಲು ಅಡಿಗಿಂತ ಎತ್ತರದ ಆಜಾನುಬಾಹುವಾದ ಅವರು ಇದ್ದಾರೆಂದರೆ ಜೊತೆಗಾರರಿಗೆ ಎಂಟೆದೆಯ ಬಲ ಬರುತ್ತಿತ್ತು. ಎಸ್ಪಿ ಡಿಸಿಗಳಿಗೂ ಕೇರ್ ಮಾಡದ ಅವರ “ತುಮ್ ಕೌನ್ ಹೋತೇ ಹೋ ಪೂಛನೇವಾಲಾ” (“ನೀನ್ಯಾರು ಕೇಳೋಕೆ ?”) ಎಂಬ ಗರ್ಜನೆ ಕೇಳಿದರೆ ಸಾಕು, ಎಂಥ ಎದುರಾಳಿಗಳೂ ಜಾಗ ಖಾಲಿ ಮಾಡುತ್ತಿದ್ದರು.
ಆರೆಂಟು ವರ್ಷಗಳ ಹಿಂದೆ ಲಕ್ವ ಹೊಡೆದರೂ ಇಚ್ಛಾಶಕ್ತಿಯಿಂದಲೋ ಎಂಬಂತೆ ಬೇಗನೆ ಚೇತರಿಸಿಕೊಂಡು, ಓಡಾಡುವುದನ್ನು ಮುಂದುವರಿಸಿದ್ದರು. ಬೀದರ್‌ನಲ್ಲಿ ನಕ್ಸಲ್ ಪ್ರಭಾವಿತ ಚಳವಳಿಗೆ 1990ರ ಮಧ್ಯಭಾಗದ ಹೊತ್ತಿಗೆ ಹಿನ್ನಡೆಯಾದದ್ದು ಅವರಿಗೊಂದು ದೊಡ್ಡ ಕೊರಗಾಗಿಯೇ ಉಳಿದಿತ್ತು. ನಾವುಗಳು ಬೀದರಿಗೆ ಹೋದಾಗಲೆಲ್ಲ “ಇಲ್ಲಿಗೆ ಯಾರನ್ನಾದರೂ (ಕಾರ್ಯಕರ್ತರನ್ನು) ಕಳಿಸ್ರೀ. ಎಲ್ಲಾ ಕೂಡಿ ಮತ್ತೆ ಚಳವಳಿ ಕಟ್ಟೋಣು” ಎಂದು ತಪ್ಪದೆ ಹೇಳುತ್ತಿದ್ದರು.
ಬೀದರ್‌ನ ಜನಪರ ಹೋರಾಟಗಳ ಕೊನೇ ಕೊಂಡಿಯಂತಿದ್ದ ಸುಂದರರಾಜ್ ಅವರ ಸ್ಥಾನ ದೀರ್ಘ ಕಾಲ ಖಾಲಿಯಾಗಿಯೇ ಇರುತ್ತೆ ಎನ್ನುವುದು ಬಹು ದುಃಖದ ವಿಷಯ.
Miss u sir