ಗಣಿ ಭಾದಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪಕ್ಕಾಗಿ ಸೆ.4ರಂದು ಸಂಡೂರು ತಾಲೂಕಿನ ಆದರ್ಶ ಸಮುದಾಯ ಭವನದಲ್ಲಿ ಜನಸಂಗ್ರಾಮ ಪರಿಷತ್ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಟಿ.ಎಂ.ಶಿವುಕುಮಾರ ಹೇಳಿದರು .
ʼಸಂಡೂರು ತಾಲೂಕಿನ ಗಣಿಭಾದಿತ ಜನರ ಬದುಕನ್ನು ಸುಸ್ಥಿರಗೊಳಿಸಲು, ಅಕ್ರಮ ಗಣಿಗಾರಿಕೆ ವಿರೋಧಿಸಿ, ಸಂಡೂರಿನ ಜೈವಿಕ ವೈವಿಧ್ಯತೆ ಅರಣ್ಯ ನಾಶ ಹಾಗೂ ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡಲು ಅನುಮತಿಸಿದ ವಿರುದ್ದ ಸಮಾವೇಶ ನಡೆಯಲಿದೆʼ ಎಂದು ಮಾಹಿತಿ ನೀಡಿದರು.
ʼಸಂಡೂರು ಭಾಗದ ಜನರು ತಲೆತಲಾಂತರದಿಂದ ಫಲವತ್ತಾದ ಕಂದಾಯ ಜಮೀನುಗಳಲ್ಲಿ ಬೇಸಾಯ ಮಾಡಿಕೊಂಡು ಬಂದಿದ್ದಾರೆ. ಆದರೆ ಅದೇ ಜಮೀನನ್ನು ಬರಡು ಜಮೀನು ಎಂದು ದಾಖಲೆಗಳಲ್ಲಿ ಅಕ್ರಮವಾಗಿ ನಮೂದಿಸಿ ಗಣಿ ಗುತ್ತಿಗೆದಾರರಿಗೆ ಪರ್ಯಾಯ ಅರಣ್ಯ ನೆಡುತೋಪು ಬೆಳೆಸಲು ನೀಡುತ್ತಿದ್ದಾರೆ, ರೈತರಿಗೆ ಹಕ್ಕನ್ನು ನೀಡದೆ ಸರಕಾರ ವಂಚಿಸಿದೆʼ ಎಂದು ದೂರಿದರು.
ʼಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ವಿರುದ್ಧವಾಗಿ ಸ್ಟಾಂಜ್ ಐರನ್ ಉದ್ಯಮಕ್ಕೆ ಅನುಮತಿ ನೀಡಿ ಅರಣ್ಯದಲ್ಲಿನ ವನ್ಯಜೀವಿ, ಗ್ರಾಮಗಳ ಜನರನ್ನು ರೋಗಗ್ರಸ್ತರಾಗುವಂತೆ ಮಾಡಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳದೆ ಸರಕಾರ ನಿರ್ಲಕ್ಷಿಸುತ್ತಿದೆ. ಜಿಂದಾಲ್‌ಗೆ 3,667 ಎಕರೆ ಜಮೀನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು ಜನವಿರೋಧಿಯಾಗಿದೆ. ಕಾಂಗ್ರೆಸ್ ಪಕ್ಷದವರು ಈ ಹಿಂದಿನ ಬಿಜೆಪಿ ಸರಕಾರ ಜಿಂದಾಲ್ ಕಂಪನಿಗೆ ಜಮೀನು ನೀಡಲು ನಿರ್ಧರಿಸಿದ ವೇಳೆ ವಿರೋಧ ವ್ಯಕ್ತಪಡಿಸಿತ್ತು, ಇಂದು ಅವರೇ ಜಿಂದಾಲ್ ಜೊತೆ ಪಾಲುದಾರಿಕೆಯಾಗಿ ಅನುಮತಿ ಕೊಟ್ಟಿದ್ದು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಲಿಂಗಾಯತ ಧರ್ಮಕ್ಕೆ ಎಂ.ಎಂ.ಕಲಬುರ್ಗಿ ಕೊಡುಗೆ ಅಮೋಘ : ಬಸವಲಿಂಗ ಪಟ್ಟದ್ದೇವರು
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಒಗ್ಗೂಡಿ ಹೋರಾಡಬೇಕಿದೆ. ರೈತರು, ಪರಿಸರವಾದಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಲು ಕೋರಿದ್ದಾರೆ.
