ಮಹಾರಾಷ್ಟ್ರದ ಸಿಂಧುದುರ್ಗ ಬಳಿಯ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿಯ 35 ಅಡಿಯ ಪ್ರತಿಮೆ ಕುಸಿದುಬಿದ್ದಿದ್ದು, ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ವಿರುದ್ಧ ‘ಇಂಡಿಯಾ’ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಮುಂಬೈನ ಹುತಾತ್ಮ ಚೌಕ್‌ನಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ ಚಪ್ಪಲಿ ಹಿಡಿದು ‘ಜೋಡೆ ಮಾರೋ’ (ಚಪ್ಪಲಿಯಲ್ಲಿ ಹೊಡೆಯಿರಿ) ಘೋಷಣೆಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ಕಳೆಪೆ ಕಾಮಗಾರಿ ಮತ್ತು ಭ್ರಷ್ಟಾಚಾರವೇ ಪ್ರತಿಮೆ ಕುಸಿದು ಬೀಳಲು ಕಾರಣವೆಂದು ‘ಇಂಡಿಯಾ’ ಒಕ್ಕೂಟ ಆರೋಪಿಸಿದೆ.
ಪ್ರತಿಭಟನೆಯ ಕಾರಣದಿಂದಾಗಿ ಸರ್ಕಾರವು ಗೇಟ್‌ವೇ ಆಫ್ ಇಂಡಿಯಾದಲ್ಲಿ ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಿದೆ. “ಮಹಾರಾಷ್ಟ್ರದ ಹೆಮ್ಮೆ ಶಿವಾಜಿ ಪ್ರತಿಮೆ ಕುಸಿದುಬಿದ್ದಿದೆ. ಭ್ರಷ್ಟ ಶಿವದ್ರೋಹಿಗಳಿಗೆ ಕ್ಷಮೆ ಇಲ್ಲ. ಕಳಪೆ ಕಾಮಗಾರಿ, ಭ್ರಷ್ಟಾಚಾರದಿಂದ ಶಿವಾಜಿಯನ್ನು ಮಹಾಯುತಿ [ಬಿಜೆಪಿ – ಎನ್‌ಸಿಪಿ (ಅಜಿತ್ ಬಣ) – ಶಿವಸೇನೆ (ಶಿಂಧೆ ಬಣ)] ಅವಮಾನಿಸಿದೆ. ಶಿವದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದು ಪ್ರತಿಭಟನಾನಿರತ ಮಹಾವಿಕಾಸ್ ಅಗಾಡಿ [ಕಾಂಗ್ರೆಸ್ – ಶಿವಸೇನೆ (ಉದ್ದವ್ ಬಣ) – ಎಸ್‌ಸಿಪಿ (ಪವಾರ್ ಬಣ)] ಹೇಳಿದೆ.
ಪ್ರತಿಮೆ ಕುಸಿದು ಬಿದ್ದ ಪ್ರಕರಣದಲ್ಲಿ ಪ್ರತಿಮೆ ನಿರ್ಮಾಣ ಯೋಜನೆಯ ರಚನಾತ್ಮಕ ಸಲಹೆಗಾರ ಮತ್ತು ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಯತ್ನ, ನರಹತ್ಯೆ ಹಾಗೂ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಆರೋಪಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.
ರಾಜಕೀಯ ಹಗ್ಗಜಗ್ಗಾಟ, ಹಿನ್ನಡೆಯ ನಡುವೆ ಪ್ರತಿಮೆ ಕುಸಿತದ ಕಾರಣಕ್ಕೆ ಪ್ರಧಾನಿ ಮೋದಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. “ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಹೆಸರು ಅಥವಾ ರಾಜನಲ್ಲ. ನಮಗೆ ಅವರು ಆರಾಧ್ಯದೈವ. ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.