ಮೈಸೂರು ಗ್ರಾಮಾಂತರ ತಾಲೂಕಿನ ಇಲವಾಲದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಹೋರಾಟ, ಸಾಧನೆ, ರಾಜತಾಂತ್ರಿಕತೆ ಮತ್ತು ತತ್ವಗಳನ್ನು ತಿಳಿಸಲು ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಡಾ. ಬಿ ಆರ್ ಅಂಬೇಡ್ಕರ್ ಥೀಮ್ ಪಾರ್ಕ್ ನಿರ್ಮಾಣ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ಮಾತನಾಡಿ, “ಥೀಮ್ ಪಾರ್ಕ್ ಅಥವಾ ಮ್ಯೂಸಿಯಂ ನಿರ್ಮಾಣ ಮಾಡಲು 10 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಡಿಪಿಆರ್ ತಯಾರಿಸಿ ನೀಲಿ ನಕ್ಷೆಯೊಂದಿಗೆ ಮ್ಯೂಸಿಯಂ ನಿರ್ಮಾಣಕ್ಕೆ ಬೇಕಿರುವ ಅನುದಾನದೊಂದಿಗೆ ಯೋಜನೆ ಸಿದ್ಧವಾಗಬೇಕು” ಎಂದು ತಿಳಿಸಿದರು.
“ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ದೇಶದ ಆರ್ಥಿಕತೆ, ನಿರುದ್ಯೋಗ, ನೀರಿನ ಸಮಸ್ಯೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರವಿದೆ. ಅವುಗಳನ್ನು ಸಮಾನ್ಯ ಜನರಿಗೆ ಅರ್ಥವಾಗುವ ರೀತಿ ವಿಷಯಗಳನ್ನು ತಿಳಿಸಬೇಕು” ಎಂದರು.
“ಬಾಬಾ ಸಾಹೇಬರ ಹುಟ್ಟಿನಿಂದ ಪರಿನಿರ್ವಾಣದವರೆಗೆ ಸಂಭವಿಸಿದ ಮುಖ್ಯ ಸಂಗತಿಗಳು ಸೇರಿದಂತೆ ಶಾಹು ಮಹಾರಾಜರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳ ಚಿಂತನೆಗಳು ಇಲ್ಲಿ ಅನಾವರಣವಾಗಬೇಕು” ಎಂದು ಸೂಚಿಸಿದರು.

“ಮೈಸೂರು ಐತಿಹಾಸಿಕ ಪ್ರವಾಸಿ ತಾಣವಾಗಿದ್ದು, ಥೀಮ್ ಪಾರ್ಕ್ ಹೆಚ್ಚಿನ ಜನರನ್ನು ಆಕರ್ಷಿಸುವುದರ ಜತೆಗೆ ಹೊಸತನದಿಂದ ಕೂಡಿರಲಿ. ಪ್ರತಿಯೊಬ್ಬ ನಾಗರಿಕರು ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಮೊದಲು ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ನೆನೆಯಬೇಕು. ಅವರು ನೀಡಿರುವ ಸಂವಿಧಾನದಿಂದ ನಾವು ಇಂದು ಉತ್ತಮ ಜೀವನ ನಡೆಸುತ್ತಿದ್ದೇವೆ. ಮೈಸೂರಿನಲ್ಲಿ ನಿರ್ಮಾಣವಾಗುವ ಥೀಮ್ ಪಾರ್ಕ್ನ ನೀಲಿನಕ್ಷೆ ಸಿದ್ಧಪಡಿಸುವ ಮೊದಲು ನಿರ್ಮಾಣದ ಬಗ್ಗೆ ಮುಖ್ಯ ವ್ಯಕ್ತಿಗಳಿಂದ ಮಾಹಿತಿಗಳನ್ನು ಕ್ರೊಢೀಕರಿಸಿದರೆ ಮ್ಯೂಸಿಯಂ ಉತ್ತಮವಾಗಿ ಮೂಡಿ ಬರಲಿದೆ” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಉಗಮದಿಂದಲೇ ವೈವಿಧ್ಯ ಹೊತ್ತ ಕನ್ನಡ ಸಂಸ್ಕೃತಿ-ಭಾಷೆಯೂ ಹೌದು: ಬಿಳಿಮಲೆ
ಪ್ರತಿಯೊಬ್ಬರಿಗೂ ಸಮಾಜಿಕ ನ್ಯಾಯ ನೀಡಲು ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಬಗ್ಗೆ ಹಲವಾರು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವುಗಳೂ ಕೂಡ ಮ್ಯೂಸಿಯಂನಲ್ಲಿ ಅನಾವರಣವಾಗಲಿ. ಸಾಮಾನ್ಯ ಜನರಿಗೂ ಸಹ ಪ್ರತಿಯೊಂದು ವಿಷಯ ಸುಲಭವಾಗಿ ತಲುಪುವ ರೀತಿ ಇರಲಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಮಾನ ಸಮಾಜ ನಿರ್ಮಾಣಕ್ಕೆ ಆರ್ಥಿಕ-ಸಾಮಾಜಿಕ ಶಕ್ತಿ ಅಗತ್ಯ: ಸಿಎಂ ಸಿದ್ದರಾಮಯ್ಯ
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ ಆರ್ ರಕ್ಷಿತ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.




