‘ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದ್ದು, ಪ್ರತಿಯೊಬ್ಬರಲ್ಲೂ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಹೆಚ್ಚಾದಾಗ ಮಾತ್ರ ನಿಜವಾದ ಸಮಸಮಾಜ ಬದಲಾವಣೆ ಸಾಧ್ಯʼ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರು ನಗರದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ‘ಕನ್ನಡ ಸಾಮರಸ್ಯ ನೆಲೆಗಳು’ 41 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕನ್ನಡ ಸಾಮರಸ್ಯ ನೆಲೆ ಯೋಜನೆಯಡಿ ನೂರು ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದ್ದು, ಉಳಿದ 59 ಪುಸ್ತಕಗಳು ಸಹ ಶೀಘ್ರ ಬಿಡುಗಡೆಯಾಗಲಿದೆ. ಇಂದು ಬಿಡುಗಡೆಯಾಗಿರುವ ಎಲ್ಲವೂ ಯೋಗ್ಯವಾದ ಪುಸ್ತಕಗಳಾಗಿವೆ. ನಮ್ಮ ದೇಶದಲ್ಲಿ ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳ ಜನ ಇದ್ದು, ರಾಜ್ಯದಲ್ಲಿಯೂ ವೈವಿಧ್ಯತೆ ಇದೆ. ಇದರಲ್ಲಿಯೇ ನಾವು ಏಕತೆಯನ್ನು ಸಾಧಿಸಿದ್ದೇವೆ” ಎಂದು ಹೇಳಿದರು.
“ಬುದ್ಧ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ಅನೇಕರು ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಸಂವಿಧಾನ ಜಾರಿಯಾದ ನಂತರ ಸಮಾಜದ ಸುಧಾರಣೆಯಲ್ಲಿ ವೇಗ ಹೆಚ್ಚಿದೆಯಾದರೂ ಸಾಮಾಜಿಕ ವ್ಯವಸ್ಥೆ ನೂರಕ್ಕೆ ನೂರು ಬದಲಾವಣೆಯಾಗಿಲ್ಲ. ಬದಲಾವಣೆಯಂತೆ ಕಂಡರೂ ಬದಲಾವಣೆಯಾಗದಂತೆ ತಡೆಯುವ ಶಕ್ತಿಗಳು ಅಷ್ಟೇ ಜಾಗೃತಿಯಾಗಿವೆ” ಎಂದು ಕಳವಳ ವ್ಯಕ್ತಪಡಿಸಿದರು.

“ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಬಸವಣ್ಣ ಹೇಳಿದ ಇವ ನಮ್ಮವ ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ನಮ್ಮಲ್ಲಿ ಬರಬೇಕು. ಈ ಗುಣಗಳು ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ. ಬದುಕುವ ದಾರಿ ಮಾತ್ರವಾಗುತ್ತದೆ. ಸಮಾಜದಲ್ಲಿ ಇದುವರಿಗೆ ನಮ್ಮವ ಎನ್ನುವ ಭಾವನೆ ಮೂಡಿಲ್ಲ. ಈಗಲೂ ಇವನಾರವ ಎನ್ನುವಂತಿದೆ. ಜಾತಿ ವ್ಯವಸ್ಥೆ ಗಟ್ಟಿ ಮಾಡಲೆಂದೇ ಸಮಾಜದಲ್ಲಿ ಒಂದು ವರ್ಗವಿದೆ. ಅವರೇ ಮನುವಾದಿಗಳು” ಎಂದರು.
ಯುವಕರಲ್ಲಿ ಮಾನವೀಯತೆ ಹೆಚ್ಚಾಗಬೇಕೆನ್ನುವ ನಿಟ್ಟಿನಲ್ಲಿ ಇಂದು ಬಿಡುಗಡೆಯಾಗಿರುವ ಪುಸ್ತಕಗಳು ಪ್ರಯೋಜನಕಾರಿಯಾಗಲಿವೆ. ಇವು ಯುವಜನರನ್ನು ತಲುಪದೇ ಹೋದರೆ, ಅದರಿಂದ ಬದಲಾವಣೆಯಾಗದೆ ಹೋದರೆ ಅದರ ಉದ್ದೇಶ ಸಫಲವಾಗುವುದಿಲ್ಲ. ಪುಸ್ತಕಗಳು ಯುವಜನತೆಗೆ ತಲುಪಬೇಕು. ಶಿಕ್ಷಣ ಎಂದರೆ ಮಾನವೀಯತೆ. ಯುವಕರಲ್ಲಿ ಮಾನವೀಯತೆ ಮೂಡಬೇಕು, ಮೂಡಿಸಬೇಕು. ಯುವಜನತೆಯಲ್ಲಿ ಓದುವ ಪ್ರಚೋದನೆಯಾಗಬೇಕು” ಎಂದು ಹೇಳಿದರು.
“ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಇಂದಿನ ಪೀಳಿಗೆ ಪಂಪ, ಕನಕದಾಸರು, ಬಸವಣ್ಣ, ಕುವೆಂಪು ಮುಂತಾದವರ ಬಗ್ಗೆ ತಿಳಿದುಕೊಳ್ಳಬೇಕು. ಈ ಪುಸ್ತಕಗಳನ್ನು ಹೊರತಂದಿರುವುದು ಉತ್ತಮ ಕೆಲಸವಾಗಿದೆ. ಪ್ರಾಧಿಕಾರ ಕನ್ನಡದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಇನ್ನಷ್ಟು ಕೆಲಸ ಮಾಡುವಂತಾಗಲಿ” ಎಂದು ಆಶಿಸಿದರು.

“ದೇವರು-ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ. ಕಾಯಕದಲ್ಲಿ ದೇವರನ್ನು ಕಂಡವರು ಅವರು. ಕುವೆಂಪುರವರು ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬರಲು ಕರೆ ನೀಡಿದರು. ಮನುಷ್ಯತ್ವವಿಲ್ಲದೆ ಪೂಜೆ ಮಾಡಿದರೆ ಫಲ ದೊರಕುವುದಿಲ್ಲ. ಸಮಾಜದಲ್ಲಿ ಎಲ್ಲರಲ್ಲಿ ಮನುಷ್ಯತ್ವದಿಂದ ನಡೆಯುವುದು ಮುಖ್ಯ” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಡಾ. ಬಿ.ಆರ್. ಅಂಬೇಡ್ಕರ್ ಮಾನವೀಯ ಮೌಲ್ಯವುಳ್ಳ ವ್ಯಕ್ತಿ: ಸಚಿವ ಕೆ. ವೆಂಕಟೇಶ್
“ಯಾವುದೇ ಧರ್ಮ ದ್ವೇಷ ಮಾಡುವುದನ್ನು ಹೇಳಿಕೊಟ್ಟಿಲ್ಲ. ಪ್ರೀತಿಯನ್ನು ಹೇಳಿಕೊಟ್ಟಿದೆ. ಆದರೆ, ಸಮಾಜದಲ್ಲಿ ದ್ವೇಷ ಮಾಡುವುದನ್ನೇ ಹೇಳಿಕೊಡುತ್ತಿದ್ದಾರೆ. ಅಂತಹ ವರ್ಗ ಸಕ್ರಿಯವಾಗಿದೆ. ಸಮಾಜದಲ್ಲಿ ಎತ್ತಿಕಟ್ಟಿ ತಮಾಷೆ ನೋಡುವ ಕೆಲಸ ಆಗುತ್ತಿದೆ. ಇದರರ್ಥ ಸ್ಪಷ್ಟವಾಗಿ ರಾಜಕೀಯ, ಅಧಿಕಾರ ಹೊಂದುವ ದುರಾಸೆ ಇಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಸಲಹೆ ನೀಡಿದರು.




