ಮಾದಕ ದ್ರವ್ಯ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕಾಗಿದೆ. ಈ ಹಾವಳಿಯ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಸಂವೇದನಾಶೀಲರಾಗಿದ್ದರೆ, ನಾವು ಅಪರಾಧಿಗಳಾಗುತ್ತೇವೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸೇರಿಕೊಂಡು, ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡಿದಾಗ, ಈ ಹೋರಾಟವನ್ನು ಎದುರಿಸುವುದು ಸುಲಭವಾಗುತ್ತದೆ’ ಎಂದು ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ಡ್ರಗ್ಸ್‌ಮುಕ್ತ ಧರ್ಮಕ್ಷೇತ್ರವಾಗಿಸುವ ಗುರಿಯೊಂದಿಗೆ ಧರ್ಮಕ್ಷೇತ್ರದ ಪಾಲನಾ ಪರಿಷತ್ ನೇತೃತ್ವದಲ್ಲಿ ನಡೆಯಲಿರುವ ಡ್ರಗ್ಸ್ ವಿರೋಧಿ ಜಾಗೃತಿ ಮಾಸ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಚಾಲನೆ ನೀಡಿ ಮಾತನಾಡಿದರು.
ಡ್ರಗ್ಸ್ ಸಂಗ್ರಹದಿಂದ ತುಂಬಿದ ಗಾಜಿನ ಭರಣಿಯನ್ನು ಇನ್ಸಿನರೇಟರ್ ಫೈರ್ ಬಿನ್‌ಗೆ ಖಾಲಿ ಮಾಡಿ ಭರಣಿಯೊಳಗೆ ಮುಳುಗಿರುವ ಮಗುವಿನ ಗೊಂಬೆಯನ್ನು ಮುಕ್ತಗೊಳಿಸುವುದರ ಮೂಲಕ ಸಾಂಕೇತಿಕವಾಗಿ ಅಭಿಯಾನವನ್ನು ಬಿಷಪ್ ಉದ್ಘಾಟಿಸಿದರು.
“ಮಾದಕ ವ್ಯಸನಗಳಿಂದ ಕುಟುಂಬಗಳು, ಯುವಕರು ಮತ್ತು ಮಕ್ಕಳು ಬಳಲುತ್ತಿದ್ದಾರೆ. ಈ ಸಾಮಾಜಿಕ ಸಮಸ್ಯೆಗೆ ಒಮ್ಮನಸ್ಸಿನಿಂದ ಸ್ಪಂದಿಸಬೇಕಿದೆ. ಜಾತಿ, ಧರ್ಮ, ಭಾಷೆಯ ಗಡಿಗಳನ್ನು ಮೀರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಒಟ್ಟಾಗಿ ಕೆಲಸ ಮಾಡೋಣ” ಎಂದು ಬಿಷಪ್ ಕರೆ ನೀಡಿದರು.
“ಡ್ರಗ್ಸ್ ತ್ಯಜಿಸಿ, ಜೀವನ ಆಲಿಂಗಿಸಿ’ ಎಂಬ ಘೋಷವಾಕ್ಯವನ್ನು ಹೊಂದಿರುವ ಅಭಿಯಾನವು, ಧರ್ಮಕ್ಷೇತ್ರದ ಚರ್ಚ್‌ಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೆಪ್ಟೆಂಬರ್ 1ರಿಂದ 30ರವರೆಗೆ ನಡೆಯಲಿದೆ” ಎಂದು ಸಂಚಾಲಕ ಲುವಿ ಜೆ ಪಿಂಟೊ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹೂವಿನಹಡಗಲಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘ ಒತ್ತಾಯ
ಗುರು ಮ್ಯಾಕ್ಸಿಮ್ ನೊರೊನ್ಹಾ, ಪಾಲನಾ ಪರಿಷತ್ ಕಾರ್ಯದರ್ಶಿ ಜಾನ್ ಡಿಸಿಲ್ವ, ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ, ತೆಲೊಕಾ ಅಡಿಕ್ಷನ್ ರಿಕವರಿ ಸೆಂಟರ್‌ನ ಮ್ಯಾನೇಜಿಂಗ್ ಟ್ರಸ್ಟಿ ಕ್ಲಾರಾ ಡಿಕುನ್ಹಾ, ಕುಟುಂಬ ಆಯೋಗದ ಕಾರ್ಯದರ್ಶಿ ಅನಿಲ್ ಆಲ್ಫ್ರೆಡ್ ಡಿಸೋಜ, ಶಿಕ್ಷಣ ಆಯೋಗದ ಕಾರ್ಯದರ್ಶಿ ಆಂಟೋನಿ ಶೇರಾ, ಆರೋಗ್ಯ ಆಯೋಗದ ಕಾರ್ಯದರ್ಶಿ ಅಜಿತ್ ಮಿನೇಜಸ್, ಯುವ ಆಯೋಗದ ಕಾರ್ಯದರ್ಶಿಅಶ್ವಿನ್ ಕಾರ್ಡೋಜಾ, ಸಂಪರ್ಕ ಆಯೋಗದ ಕಾರ್ಯದರ್ಶಿ ಅನಿಲ್ ಐವನ್ ಫರ್ನಾಂಡೀಸ್ ಇದ್ದರು.