ಬಂಡಾಯ ಸಾಹಿತ್ಯದ ನೆಲೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿರುವ ‘ಮೇ ಸಾಹಿತ್ಯ ಮೇಳ’ವು ಈ ವರ್ಷ ಮೇ 27 ಮತ್ತು 28ರಂದು ವಿಜಯಪುರದಲ್ಲಿ ನಡೆಯಲಿದೆ. ಸಾಹಿತ್ಯ ಮೇಳದಲ್ಲಿ ‘ಭಾರತೀಯ ಪ್ರಜಾತಂತ್ರ – ಸವಾಲು ಮೀರುವ ದಾರಿಗಳು’ ವಿಷಯದ ಕುರಿತು ಚರ್ಚೆಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಾಹಿತ್ಯ ಮೇಳದಲ್ಲಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತರಿಗೆ ನಾನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಈ ಬಾರಿಯ ಮೇ ಸಾಹಿತ್ಯ ಮೇಳದಲ್ಲಿ ದಲಿತ ಚಳವಳಿಯ ಹಿರಿಯ ಜೀವಿ ಎನ್ ವೆಂಕಟೇಶ್ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜವಾದಿ ಶ್ರಮಜೀವಿ ಪ್ರಶಸ್ತಿ’, ರಂಗಚಟುವಟಿಕೆಯಲ್ಲಿ ಸಕ್ರಿಯರಾಗಿ ಬಹುದೊಡ್ಡ ಚಳವಳಿ ಕಟ್ಟಿರುವ ಸಿ. ಬಸವಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ’, ರೈತ ಚಳವಳಿಗಾಗಿ ಬದುಕನ್ನೇ ಮುಡುಪಿಟ್ಟವರ ಜೆ.ಎಂ ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತಚೇತನ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ.
ಗಿಟ್ಟಿಗಿತ್ತಿ ಎಂದೇ ಕರೆಯಿಸಿಕೊಳ್ಳುವ, ಕಥೆ, ಕಾವ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಮಾಲತಿ ಪಟ್ಟಣಶೆಟ್ಟಿ ಅವರಿಗೆ ‘ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ’, ಬಿದರ ಭಿನ್ನಹ ಹಸ್ತ ಪ್ರತಿ ರಚಿಸಿದ ಭಾಗ್ಯಜ್ಯೋತಿ ಹಿರೇಮಠ ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’ ನೀಡಲಾಗುತ್ತದೆ. ಎಲ್ಲರಿಗೂ ಶ್ರೇಷ್ಠ ಕಥೆಗಾರ ಕೇಶವ ಮಳಗಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಾಹಿತ್ಯ ಮೇಳದ ಆಯೋಜಕರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತಮ್ಮ ಮೊದಲ ಮತವನ್ನೇ ಮಾರಿಕೊಂಡ ಯುವಜನರು!
ಮೇ ಸಾಹಿತ್ಯ ಮೇಳದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ ಬೂದಾಳು, ಕುಂ ವೀರಭದ್ರಪ್ಪ, ಬಾಲಗುರುಮೂರ್ತಿ, ಕೃಷ್ಣಮೂರ್ತಿ ಚಮರಂ, ಬಿ. ಎಂ ಹನೀಫ್, ಶೈಲಜಾ ಹಿರೇಮಠ, ರಂಗನಾಥ ಕಂಟನಕುಂಟೆ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.