ಸುಪ್ರೀಂಕೋರ್ಟಿನ ಒಳಮೀಸಲಾತಿ ತೀರ್ಪನ್ನು ಶೀಘ್ರವಾಗಿ ಜಾರಿಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಚ್.ಮಲ್ಲೇಶ್ ಆಗ್ರಹಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯಗಳನ್ನು ಮೇಲೆತ್ತಲು ಸಹಾಯವಾಗುತ್ತದೆ ಎಂದು ಸ್ವಾತಂತ್ರ್ಯದ ನಂತರ ಮೀಸಲಾತಿಯನ್ನು ಅಳವಡಿಸಿದರು. ಅದರಂತೆ ಪರಿಶಿಷ್ಟ ಜಾತಿ ಒಳಗಿನ ಕೆಲ ಬಲಿಷ್ಠ ಮತ್ತು ಸಶಕ್ತ ಜಾತಿಗಳು ಮೀಸಲಾತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದಿರುವುದು ಮೀಸಲಾತಿ ಹಂಚಿಕೆಯಲ್ಲಿ ಕಾಣುತ್ತದೆ. ಕೆಲವು ಶೋಷಿತ ಸಮುದಾಯಗಳು ಮೀಸಲಾತಿ ಪ್ರಯೋಜನದಿಂದ ದೂರವೇ ಉಳಿದಿವೆ. ದೇಶದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ದಶಕಗಳ ಕಾಲದ ದೊಡ್ಡ ಪ್ರಮಾಣದ ನಿರಂತರ ಹೋರಾಟ. ಅಸಮಾನತೆಗೆ ಒಳಗಾದವರಿಗೆ ಸಮಾನ ಹಂಚಿಕೆ ಆಗಬೇಕಾದರೆ ಒಳಮೀಸಲಾತಿ ಜಾರಿ ಆಗಬೇಕು. ಈ ಕಾರಣದಿಂದ ಪರಿಶಿಷ್ಟ ಜಾತಿಗಳಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಉದ್ದೇಶದಿಂದ ಆ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಕಲಿಸಲು ಒಳ ಮೀಸಲಾತಿ ನೀಡುವ ಸಂವಿದಾನಿತ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸಾರಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ಏಕ ರೂಪಿಯಾಗಿಲ್ಲ ಎಂದು 7 ನ್ಯಾಯಾಮೂರ್ತಿಗಳ ಸಂವಿಧಾನ ಪೀಠವು ತಿಳಿಸಿದೆ. ಇ.ವಿ. ಚನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಅವಕಾಶ ಇಲ್ಲ. ಏಕೆಂದರೆ ಪರಿಶಿಷ್ಟ ಜಾತಿ ಎಂಬುದೆ ಏಕರೂಪಿ ವರ್ಗ ಎಂದು ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 2004 ರಲ್ಲಿ ನೀಡಿದ್ದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ತೀರ್ಪು ರದ್ದುಪಡಿಸಿದೆ. ಸಂವಿಧಾನದ 15ನೇ ಹಾಗೂ 16ನೇ ವಿಧಿಗಳ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರವು ಸಾಮಾಜಿಕ ಹಿಂದುಳಿದಿರುವಿಕೆಯ ಮಟ್ಟವನ್ನು ಗುರುತಿಸಲು ಹಾಗೂ ಮೀಸಲಾತಿಯಂತಹ ವಿಶೇಷ ಅವಕಾಶಗಳನ್ನು ಕಲ್ಪಿಸಲು ಮುಕ್ತವಾಗಿದೆ ಎಂದು ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ ಎಂದು ಹೇಳಿದರು.
ಈ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅಧಿವೇಶನ ಕರೆಯುವುದರ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡಬೇಕೆಂದು ಮಲ್ಲೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಣ್ಣಾಳ್ ಅಂಜಿನಪ್ಪ, ಜಿ.ಎಸ್.ಲೋಕೇಶ್, ಸಮಾದಪ್ಪ, ನಿಂಗರಾಜ, ಅಣ್ಣಪ್ಪ ತಣಿಗೆರೆ, ಹೆಚ್.ಸಿ.ಮಲ್ಲಪ್ಪ, ಮಾಲತೇಶ ಇತರರು ಹಾಜರಿದ್ದರು.
