ಭದ್ರಾ ಜಲಾಶಯದ ಸುರಕ್ಷತೆಗೆ ಆದ್ಯತೆ, ಸೋರಿಕೆ ತಡೆಗಟ್ಟಲು ಹಾಗೂ ಡ್ಯಾಂ ನೀರು ಬಿಡುಗಡೆಗೆ ಒತ್ತಾಯಿಸಿ ಜುಲೈ 24ರಂದು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲು ದಾವಣಗೆರೆ ಜಿಲ್ಲಾ ರೈತರ ಒಕ್ಕೂಟ ನಿರ್ಧರಿಸಿದೆ.
ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ದಾವಣಗೆರೆಯ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ರೈತ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಉತ್ತಮ ಮಳೆಯಾದ ಕಾರಣ ಸದ್ಯ ಜಲಾಶಯದ ನೀರಿನ ಮಟ್ಟ 165 ಅಡಿ ಇದ್ದು, ರೈತರಿಗೆ ಭತ್ತ ಬೆಳೆಗೆ ನೀರು ಒದಗಿಸುವಂತೆ ಒತ್ತಾಯಿಸಿ, ಈ ಹೋರಾಟ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಹಿರಿಯ ರೈತ ಮುಖಂಡ, ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮಾತನಾಡಿ, “ಮಲೆನಾಡಿನಲ್ಲಿ ಉತ್ತಮ ಮಳೆ ಸುರಿದು ಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ಇದ್ದು, ಜುಲೈ ತಿಂಗಳಲ್ಲಿಯೇ ಹೆಚ್ಚು ನೀರು ಬಂದಿದೆ. ಜಲಾಶಯಕ್ಕೆ ಸಾವಿರಾರು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಂದೆ ಇನ್ನೂ ಅರ್ಧದಷ್ಟು ಮಳೆಗಾಲ ಇರುವುದರಿಂದ ಜಲಾಶಯದಿಂದ ಭದ್ರಾ ಅಚ್ಚುಕಟ್ಟುದಾರರಿಗೆ ನೀರೊದಗಿಸಬೇಕು. ಭದ್ರಾ ಜಲಾಶಯ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೈತರ, ಜನರ ಜೀವನಾಡಿಯಾಗಿದ್ದು, ಇದರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು”
ಎಂದು ಒತ್ತಾಯಿಸಿದರು.

“ಭದ್ರಾ ಜಲಾಶಯದಲ್ಲಿ ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗಿದ್ದು ರೈತರ, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. 15-20 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಿದೆ ಎಂಬ ಆರೋಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೈತರ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶವನ್ನೂ ವ್ಯಕ್ತಪಡಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ನೀರಿನ ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, “ಈಗ ಸದ್ಯ ಜಲಾಶಯದ ನೀರಿನ ಮಟ್ಟ 165 ಅಡಿ ಇದ್ದು, ಆಗಸ್ಟ್ 1ರ ಹೊತ್ತಿಗೆ 170 ಅಡಿ ಆಗುವ ತನಕ ಕಾಯ್ದಿದ್ದು, ಯಾವುದು ಮೊದಲು ಆಗುತ್ತದೆಯೋ ಆನಂತರ ಐಸಿಸಿ ಸಭೆ ಕರೆದು ಅಲ್ಲಿ ಬೇಸಿಗೆಯ ದೂರದೃಷ್ಟಿ ಕುರಿತಂತೆ ಆಲೋಚಿಸಿ ಸಮಂಜಸವಾದ ತೀರ್ಮಾನಗಳನ್ನು ತೆಗೆದುಕೊಂಡು ರೈತರಿಗೆ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಬೇಸಿಗೆಯಲ್ಲಿ ರೈತರಿಗೆ ನೀರೊದಗಿಸಲು ಸಮಸ್ಯೆಯಾಗುತ್ತದೆ. ರಾಜ್ಯ ಸರ್ಕಾರ ಜಲಾಶಯದ ಗೇಟ್‌ಗಳ ಮತ್ತು ಇನ್ನಿತರ ದುರಸ್ತಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು. ಕಳೆದ ಬಾರಿಯ ಬಜೆಟ್ ವಾಗ್ದಾನದಂತೆ ಕೇಂದ್ರ ಸರ್ಕಾರ 5,300 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ಅನುದಾನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜಿಲ್ಲಾಸ್ಪತ್ರೆಯಲ್ಲಿ ರಾಶಿ ರಾಶಿ ಕಸದ ಮೂಟೆ : ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತರಾಟೆ
ಸಭೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕೊಳೇನಹಳ್ಳಿ ಬಿ ಎಂ ಸತೀಶ್, ನಾಗೇಶ್ವರರಾವ್, ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೆಬಾಳ್, ಚಂದ್ರಶೇಖರ್ ಪೂಜಾರ ಸೇರಿದಂತೆ ಬಹುತೇಕ ಮಂದಿ ರೈತರು ಇದ್ದರು.