ಹರಪನಹಳ್ಳಿ ತಾಲೂಕಿನಲ್ಲಿರುವ ಹಿರೇಗಳಗೆರೆ ಭಾಗಕ್ಕೆ ಭದ್ರಾ ನಾಲೆಯ ನೀರು ತಲುಪಿಲ್ಲ. ಇದರಿಂದ ಈ ಭಾಗದ ರೈತರಿಗೆ ತೀವ್ರ ತೊಂದರೆಯಾಗಿದೆ.ಅಧಿಕಾರಿಗಳು ಕೂಡಲೇ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ ಮಹಾಬಲೇಶ್ವರ ಗೌಡ್ರು ಒತ್ತಾಯಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭದ್ರಾ ನೀರಾವರಿಯಿಂದ ಕಳೆದ 1969ರಿಂದ ಹಿರೇಮೇಗಳಗೆರೆ ವ್ಯಾಪ್ತಿಗೆ ನೀರಿನ ಸಮರ್ಪಕ ಸೌಲಭ್ಯವಿದೆ. ಇಷ್ಟುದಿನ ನೀರಿನ ಯಾವ ತೊಂದರೆ ಇರಲಿಲ್ಲ. ಆದರೆ ಇದೀಗ ಅನಧಿಕೃತ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ನಮಗೆ ನೀರು ತಲುಪುತ್ತಿಲ್ಲ. ಕೊನೆ ಭಾಗಕ್ಕೆ ನೀರು ತಲುಪಿಸಬೇಕಾಗಿದ್ದ ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದಾಗಿ ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ” ಎಂದು ಆರೋಪಿಸಿದರು.
“ಚನ್ನಗಿರಿ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಅನಧಿಕೃತ ಪಂಪ್‌ಸೆಟ್ ಇವೆ. ಆದರೆ ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ” ಎಂದು ಆರೋಪಿಸಿದರು.
“ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಿ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ನಾಮಕಾವಸ್ಥೆಗೆ ಒಂದರೆಡು ಪಂಪ್‌ಸೆಟ್ ತೆರವು ಮಾಡಿದ್ದಾರೆ ಅಷ್ಟೇ. ಬೆಸ್ಕಾಂನವರು ಕೂಡ ಚಾನಲ್ ಪಂಪ್‌ಸೆಟ್‌ಗೆ ಕರೆಂಟ್ ನೀಡಿದ್ದಾರೆ. ಇದು ಖಂಡನೀಯ. ಅನಧಿಕೃತ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಥಗಿತಗೊಳಿಸಿದರೆ ಕೊನೆ ಭಾಗಕ್ಕೆ ನೀರು ಸಿಗಲಿದೆ. ನಮ್ಮ ವ್ಯಾಪ್ತಿಯಲ್ಲಿ ಹತ್ತು ಸಾವಿರ ಎಕರೆ ನೀರಾವರಿ ಪ್ರದೇಶವಿದೆ. ಅದರಲ್ಲಿ ಎರಡೂವರೆ ಸಾವಿರ ಎಕರೆಗೆ ನೀರು ಸಿಗುತ್ತದೆ ಅಷ್ಟೇ. ಆದರೆ ಪ್ರಸ್ತುತ ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ. ನಮ್ಮ ಭಾಗದಲ್ಲೂ ಅಡಕೆ ಇದೆ. ಆದರೆ ನೀರಿಲ್ಲದೇ ಒಣಗಿ ಹೊಗುತ್ತಿವೆ. ನಾವೂ ಕೂಡ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಒಳಗಿದ್ದೇವೆ. ಹೊರಗಿನವರಿಗೆ ಊಟ ಹಾಕುವ ಬದಲು ಮನೆ ಮಕ್ಕಳಿಗೆ ಮೊದಲು ಊಟ ಹಾಕಿ. ಇಬ್ಬಂದಿ ಧೋರಣೆ ಮಾಡುವುದು ಸರಿಯಲ್ಲ” ಎಂದು ಸಲಹೆ ನೀಡಿದರು.
“ಮುಖ್ಯವಾಗಿ ಚಾನಲ್‌ಗಳಲ್ಲಿ ಅನಧಿಕೃತ ಪಂಪ್‌ಸೆಟ್‌ಗಳನ್ನು ಕಂಟ್ರೋಲ್ ಮಾಡಬೇಕು. ತೆರವು ಕಾರ್ಯಾಚರಣೆಗೆ ಹೋದ ಎಂಜಿನಿಯರ್ ಹಾಗೂ ಪೊಲೀಸರಿಗೆ ಬೆದರಿಕೆ ಹಾಕುವ ಪರಿಸ್ಥಿತಿ ಇದೆ. ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ನಮ್ಮ ಭಾಗಕ್ಕೆ ಕಳೆದ ಬಾರಿಯೂ ನೀರು ಸಿಗಲಿಲ್ಲ. ಇನ್ನಾದರೂ ಮಂಜೂರಾತಿ ಆಗಿರುವ ಕಡೆ ನೀರಾವರಿ ಸೌಲಭ್ಯ ನೀಡಬೇಕು. ಜಿಲ್ಲಾಧಿಕಾರಿ ಸಭೆ ಮಾಡುತ್ತಿದ್ದಾರೆ, ಅದರ ಪ್ರತಿಫಲ ಮಾತ್ರ ಶೂನ್ಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ನನ್ನದು ಟೀಕೆ ಟಿಪ್ಪಣಿಯ ರಾಜಕಾರಣವಲ್ಲ, ಅಭಿವೃದ್ಧಿಯ ರಾಜಕಾರಣ: ಮುದ್ದಹನುಮೇಗೌಡ
“ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ಸರಿಪಡಿಸಬೇಕು. ದಾವಣಗೆರೆ, ಶಿವಮೊಗ್ಗ ಜಿಲ್ಲಾಧಿಕಾರಿಗಳು, ಶಾಸಕರು ಸಚಿವರ ಮುಲಾಜಿಲ್ಲದಂತೆ ನೀರು ತಲುಪಿಸಬೇಕು. ಇಲ್ಲವಾದಲ್ಲಿ ನಾವು ಅರೆಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ಮಾಡಲಿದ್ದೇವೆ. ಇನ್ನೆರಡು ದಿನದಲ್ಲಿ ಸರಿ ಮಾಡದಿದ್ದಲ್ಲಿ ಮುಂದಿನ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಅಂಗಡಿ ಚಂದ್ರಪ್ಪ, ಎ ಅಂಜಿನಪ್ಪ, ಸುನೀಲ್ ಸೇರಿದಂತೆ ಇತರ ರೈತರು ಇದ್ದರು.
