ಸಾಮಾನ್ಯ ಸಭೆಗೆ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಬರುವಂತಹ ಸದಸ್ಯರಿಗೆ ಅವಕಾಶ ನೀಡಬೇಕೋ, ನೀಡಬಾರದೋ ಎಂಬ ವಿಚಾರವಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಪ್ರಾರಂಭದಲ್ಲೇ ತೀವ್ರ ಚರ್ಚೆಗೆ ಕಾರಣವಾಯಿತು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ಅಗತ್ಯ ಕೋರಂ ಹಾಜರಿದ್ದರು. 27 ಸದಸ್ಯರ ಕೋರಂ ಇರುವ ಕಾರಣಕ್ಕೆ ಸಭೆ ಪ್ರಾರಂಭ ಮಾಡಬೇಕು. ಸಭೆಗೆ ವಿಳಂಬವಾಗಿ ಬಂದವರಿಗೆ ಅವಕಾಶ ನೀಡಬಾರದು ಎಂದು ಬಿಜೆಪಿಯ ಕೆಲ ಸದಸ್ಯರು ಒತ್ತಾಯಿಸಿದರು. ಇದರಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಇದು ಚುನಾವಣೆ ಅಲ್ಲ. ಸಾಮಾನ್ಯ ಸಭೆಗೆ ವಿಳಂಬವಾಗಿ ಬರುವ ಸದಸ್ಯರಿಗೆ ಅವಕಾಶ ನೀಡಬಾರದೆಂದು ಯಾವ ಕಾನೂನು ಇದೆ ಎಂದು ಕಾಂಗ್ರೆಸ್ ಸದಸ್ಯರುಗಳಾದ ಕೆ ಚಮನ್ ಸಾಬ್, ಅಬ್ದುಲ್ ಲತೀಫ್ ಆಕ್ರೋಶ ವ್ಯಕ್ತಪಡಿಸಿದರು.
“ಸಭೆಗೆ ತಡವಾಗಿ ಬಂದವರನ್ನು ವಾಪಸ್ ಕಳಿಸಿ ಎಂದು ಕಾಂಗ್ರೆಸ್ ಸದಸ್ಯೆ ಆಶಾ ಉಮೇಶ್ ಹೇಳಿದರು. ಸಾಮಾನ್ಯ ಸಭೆಗೆ ಇಂತಿಷ್ಟು ಕೋರಂ ಇರಬೇಕು ಎಂಬುದು ಇದೆ. ಆದರೆ, ತಡವಾಗಿ ಬಂದವರಿಗೆ ಅವಕಾಶ ನೀಡಬಾರದು ಎಂದೇನಿಲ್ಲ” ಎಂದು ಆಯುಕ್ತ ಜಿ. ರೇಣುಕಾ ತಿಳಿಸಿದರು.
ತಡವಾಗಿ ಬಂದವರಿಗೆ ಅವಕಾಶ ನೀಡುವ ವಿಚಾರವಾಗಿ ನಡೆದ ಚರ್ಚೆ ನಂತರ ಸಭೆ ಪ್ರಾರಂಭವಾಯಿತು.
ಮಾಜಿ ಮೇಯರ್ ಎಸ್ ಟಿ ವೀರೇಶ್ ಮಾತನಾಡಿ, “ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಮಾಡುವ ಮೂಲಕ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುವ ಕೆಲಸ ಮಾಡಿರುವ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸುವ ನಿರ್ಣಯ ತೆಗೆದುಕೊಳ್ಳಿ” ಎಂದು ಒತ್ತಾಯಿಸಿದರು.
ಸಭೆಯಲ್ಲಿ ಚಪ್ಪಾಳೆಯ ಮೂಲಕ ಅಭಿನಂದನಾ ನಿರ್ಣಯ ಕೈಗೊಂಡರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಅಬ್ದುಲ್ ಲತೀಫ್, ನಗರಪಾಲಿಕೆಯಲ್ಲಿನ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಗಳಿಗೆ ನಾಮಫಲಕವನ್ನೂ ಹಾಕಿಲ್ಲ. ಕೊಠಡಿಯಲ್ಲಿ ಆಸನ ಒಳಗೊಂಡಂತೆ. ಸರಿಯಾದ ವ್ಯವಸ್ಥೆ ಇಲ್ಲ. ಸಭೆಯಲ್ಲೇ ಮೈಕ್ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಶಿವಪ್ರಕಾಶ್ ಮಾತನಾಡಿ, “ಕೆಲ ಅಧಿಕಾರಿಗಳು, ʼನಗರಪಾಲಿಕೆ ಸದಸ್ಯರು ಅವರೇನು ಮಾಡುತ್ತಾರೆ. ಅವರೇನು ಬಹಳ ದಿನ ಇರುವುದಿಲ್ಲʼ ಎಂದು ಹೇಳಿದ್ದಾರೆ. ಇದು ಇಡೀ ಮಹಾನಗರ ಪಾಲಿಕೆ ಸದಸ್ಯರಿಗೆ ಮಾಡಿರುವ ಅವಮಾನ. ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಗ್ರಾಮ ಪಂಚಾಯತಿ ಕರ್ತವ್ಯಕ್ಕೆ ಅಡ್ಡಿ ಆರೋಪ; ಸದಸ್ಯರ ವಿರುದ್ಧ ದೂರು
“ಬಿಲ್ ಕಲೆಕ್ಟರ್ ಒಬ್ಬರು ʼಇಂತಹ ಕಾರ್ಪೊರೇಟರ್‌ಗಳನ್ನು ಬಹಳ ಜನರನ್ನು ನೋಡಿದ್ದೇನೆಂದು ಹೇಳಿದ್ದಾರೆ. ಇಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ಮಾಜಿ ಮೇಯರ್ ಅಜಯ್ ಕುಮಾರ್ ಪಟ್ಟು ಹಿಡಿದರು.
ಈ ವೇಳೆ ಉಪಮೇಯರ್ ಯಶೋಧ ಯೋಗೇಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು.