ಪಾಕಿಸ್ತಾನ ತಂಡ ಐಸಿಸಿ ಏಕದಿನ ವಿಶ್ವಕಪ್ 2023 ರ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕು ಸೋಲಿನ ನಂತರ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಪಾಕ್ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 205 ರನ್ನುಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಬರ್ ಅಜಾಮ್ ನೇತೃತ್ವದ ಪಾಕಿಸ್ತಾನ ತಂಡ 32.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು.
ಫಕರ್ ಜಮಾನ್ (81) ಹಾಗೂ ಅಬ್ದುಲ್ಲಾ ಶಫೀಕ್ (68) ಅರ್ಧ ಶತಕ ಗಳಿಸಿ ಗೆಲುವಿನ ರೂವಾರಿಯಾದರು. ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಲು ವಿಫಲವಾಗಿದ್ದು, ಐದನೇ ಸ್ಥಾನ ಪಡೆಯಲು ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಜಯ; ಸೋಲಿನಲ್ಲೂ ಮಿಂಚಿದ ಪಾಕ್
ಮೊದಲು ಟಾಸ್ ಗೆದ್ದ ಬಾಂಗ್ಲಾದೇಶದ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಪಾಕಿಸ್ತಾನದ ಬ್ಯಾಟಿಂಗ್‌ಗೆ ತತ್ತರಿಸಿ ಕೇವಲ 45.1 ಓವರ್‌ಗಳಲ್ಲಿ 204 ರನ್ ಗಳಿಸಿ ಆಲೌಟ್ ಆಗಿತು.
ಮಹಮದುಲ್ಲಾ(56), ಲಿಟ್ಟನ್ ದಾಸ್ (45) ಹಾಗೂ ನಾಯಕ ಶಕೀಬ್ ಅಲ್ ಹಸನ್ ಜವಾಬ್ದಾರಿಯುತ ಆಟವಾಡಿದ ಪರಿಣಾಮ ತಂಡದ ಮೊತ್ತ 200ರ ಗಡಿ ದಾಟಲು ಕಾರಣವಾಯಿತು.
ಪಾಕ್ ಪರ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಲಾ ಮೂರು ವಿಕೆಟ್ ಪಡೆದರು. ರೌಫ್ ಎರಡು ವಿಕೆಟ್ ಪಡೆದರೆ, ಇಫ್ತಿಕರ್ ಮತ್ತು ಉಸಾಮಾ ಮಿರ್ ತಲಾ ಒಂದು ವಿಕೆಟ್ ಕಬಳಿಸಿದರು.