2034 ರ ವಿಶ್ವಕಪ್ ಫುಟ್‌ಬಾಲ್ (ಫಿಫಾ) ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಲಿದೆ. ಮಂಗಳವಾರದ (ಅ.31) ಗಡುವಿನ ದಿನದಂದು ಫುಟ್‌ಬಾಲ್‌ನ ಜಾಗತಿಕ ಆತಿಥ್ಯವನ್ನು ಬಿಡ್ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾ ಖಚಿತಪಡಿಸಿದ ನಂತರ ಸೌದಿ ಅರೇಬಿಯಾ ಆತಿಥ್ಯ ವಹಿಸುವುದು ಖಚಿತಗೊಂಡಿದೆ.
ಫಿಫಾ ಆಡಳಿತ ಮಂಡಳಿ 2034ರ ಫುಟ್‌ಬಾಲ್ ಆತಿಥ್ಯ ಆಯೋಜಿಸಲು ಏಷ್ಯಾ ಮತ್ತು ಓಷಿಯಾನಿಯಾ ಒಕ್ಕೂಟ ರಾಷ್ಟ್ರಗಳಿಂದ ಅಕ್ಟೋಬರ್ 31 ರೊಳಗೆ ಬಿಡ್‌ಗಳನ್ನು ಆಹ್ವಾನಿಸಿತ್ತು. ಆದರೆ ಓಷಿಯಾನಿಯಾ ಒಕ್ಕೂಟದ ಪ್ರಮುಖ ರಾಷ್ಟ್ರವಾದ ಆಸ್ಟ್ರೇಲಿಯಾ ಬಿಡ್‌ನಿಂದ ಹಿಂದೆ ಸರಿದ ನಂತರ ಸೌದಿ ಅರೇಬಿಯಾ ವಿಶ್ವದ ಜನಪ್ರಿಯ ಕ್ರೀಡೆ ಫುಟ್‌ಬಾಲ್ ವಿಶ್ವಕಪ್ ಅನ್ನು ಆಯೋಜಿಸುವುದು ಅಂತಿಮಗೊಂಡಿದೆ.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ 2023 | ಶ್ರೀಲಂಕಾ ದಾಳಿಗೆ ಚಾಂಪಿಯನ್ ಇಂಗ್ಲೆಂಡ್ ಧೂಳೀಪಟ; ಲಂಕನ್ನರಿಗೆ ಭಾರಿ ಗೆಲುವು
ಅಕ್ಟೋಬರ್ 4 ರಂದು ಏಷ್ಯಾ ಮತ್ತು ಓಷಿಯಾನಿಯಾ ಬಿಡ್‌ಗಳಿಗೆ ಫಿಫಾ ಕರೆದ ಕೆಲವೇ ನಿಮಿಷಗಳಲ್ಲಿ ಸೌದಿ ಅರೇಬಿಯಾ ಬಿಡ್ ಮಾಡುವುದಾಗಿ ಘೋಷಿಸಿತು.
ಏಷ್ಯನ್ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷರು, ಆಸ್ಟ್ರೇಲಿಯಾ ಒಳಗೊಂಡಿರುವ ಓಷಿಯಾನಿಯಾ ಒಕ್ಕೂಟ ಆಡಳಿತ ಮಂಡಳಿ, ಏಷ್ಯಾ ಫುಟ್‌ಬಾಲ್ ಒಕ್ಕೂಟಗಳು ಸೌದಿ ಅರೇಬಿಯಾ ರಾಷ್ಟ್ರ ಸಲ್ಲಿಸುವ ಬಿಡ್‌ಗೆ ಬೆಂಬಲವಾಗಿ ಒಗ್ಗಟ್ಟಿನಿಂದ ನಿಲ್ಲುವುದಾಗಿ ತಿಳಿಸಿತು.
ಸೌದಿ ಅರೇಬಿಯಾ ಆತಿಥ್ಯ ವಹಿಸುವ ಬಿಡ್‌ಗೆ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರ ದೇಶಗಳು ಕೂಡ ಬೆಂಬಲ ನೀಡುವುದಾಗಿ ತಿಳಿಸಿವೆ.