ಬೀಜ ಕಂಪನಿಗಳು ನಕಲಿ ಬಿತ್ತನೆ ಬೀಜ ನೀಡಿ ಮುಗ್ಧ ರೈತರನ್ನು ವಂಚಿಸುವುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಭೂಪ ನಕಲಿ ಆಧಾರ್ ಕಾರ್ಡ್, ನಕಲಿ ಲೈಸೆನ್ಸ್ ನೀಡಿ ಬೀಜ ಕಂಪನಿ, ವಿತರಕರನ್ನೇ ಮೋಸಗೊಳಿಸಿ ಕೋಟ್ಯಂತರ ರೂಪಾಯಿಗಳೊಂದಿಗೆ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ನಕಲಿ ಬಿತ್ತನೆ ಬೀಜ ಮಾರಾಟಗಾರನೊಬ್ಬ ಬೀಜ ಮಾರಾಟದ ನೆಪದಲ್ಲಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ. ಜಗಳೂರು ನಗರದ ದಾವಣಗೆರೆ ರಸ್ತೆಯಲ್ಲಿ’ ಕಿಸಾನ್ ಆಗ್ರೋ’ ಹೆಸರಿನಲ್ಲಿ ಬೀಜ ಮತ್ತು ಗೊಬ್ಬರ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯ ಮೂಲದ ಕುಮಾರ್ ಗೌಡ ಎಂಬ ಹೆಸರಿನ ವ್ಯಕ್ತಿ ವಿವಿಧ ಬೀಜ ಕಂಪನಿಗಳ ವಿತರಕರಿಗೆ ಕೋಟಿಗಟ್ಟಲೆ ವಂಚನೆ ಮಾಡಿ ಪರಾರಿಯಾಗಿದ್ದಾನೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮಾರಾಟ ಮಾಡುವ ಉದ್ದೇಶದಿಂದ ಜಗಳೂರಿನ ಮರೇನಹಳ್ಳಿ ರಸ್ತೆಯ ಲೋಕೋಪಯೋಗಿ ಕಚೇರಿ ಎದುರಿನಲ್ಲಿ ಇರುವ ಫಕೀರ್ ಸಾಬ್ ಎಂಬುವವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ಬಾಡಿಗೆ ಪಡೆದಿದ್ದನು. ಪಯೋನಿಯರ್, ಕಾವೇರಿ, ರಾಶಿ, ಡಿಕೆಶಿ, ಅಡ್ವಾಂಟ, ಲಕ್ಷ್ಮೀ ಸೀಡ್ಸ್, ವಿಎನ್‌ಆರ್ ಮುಂತಾದ 20ಕ್ಕೂ ಹೆಚ್ಚು ಕಂಪನಿಗಳ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ರೈತರಿಗೆ ಮಾರಾಟ ಮಾಡಿದ್ದು, ಆ ಹಣವನ್ನು ಬೀಜ ಪೂರೈಕೆ ಮಾಡಿದ್ದ ಕಂಪನಿಗಳಿಗೆ ಕೊಡದೆ ರಾತ್ರೋರಾತ್ರಿ ಪಟ್ಟಣದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ವಿತರಕರು, ಕಂಪನಿ ಉದ್ಯೋಗಿಗಳು ಪೊಲೀಸರ ಮೊರೆ ಹೋಗಿದ್ದಾರೆ.
“ನಾನು ಇಡೀ ಜಿಲ್ಲೆಗೆ 30 ವರ್ಷದಿಂದ ಬಾಯರ್, ಕಾವೇರಿ, ಪಯೋನಿಯರ್, ಮುಂತಾದ ಕಂಪನಿಗಳ ಈರುಳ್ಳಿ, ಮೆಕ್ಕೆಜೋಳ ಮತ್ತಿತರೆ ಬಿತ್ತನೆ ಬೀಜಗಳನ್ನು ಮಾರಾಟಗಾರರಿಗೆ ಬೀಜ ಪೂರೈಸುತ್ತಿದ್ದೇನೆ. ಜಗಳೂರಿನಲ್ಲಿ ಬೀಜ ಮಾರಾಟ ಮಾಡುವ ಕುಮಾರ್ ಗೌಡ ಎಂಬ ವ್ಯಕ್ತಿಗೆ 1.75 ಕೋಟಿ ವೆಚ್ಚದ ಬಿತ್ತನೆ ಬೀಜ ಕೊಟ್ಟಿದ್ದೇನೆ. ನನಗೆ ಕೇವಲ ರೂ.35 ಲಕ್ಷ ಕೊಟ್ಟಿದ್ದು, ಉಳಿದ ಹಣ ಕೊಡುತ್ತೇನೆಂದು ಭರವಸೆ ನೀಡಿದ್ದ. ಆದರೆ ಈಗ ಮೋಸ ಮಾಡಿ ಓಡಿ ಹೋಗಿದ್ದಾನೆ. ಅವನ ಮೂಲದ ಬಗ್ಗೆ ಹೆಚ್ಚು ತಿಳಿದಿಲ್ಲ. ನಕಲಿ ಆಧಾರದ ಕಾರ್ಡ್ ಕೊಟ್ಟು ನಮಗೆ ದಿಕ್ಕು ತಪ್ಪಿಸಿದ್ದಾನೆ. ನನಗೆ ಕನಿಷ್ಟ ರೂ.1ಕೋಟಿಗೂ ಹೆಚ್ಚು ವಂಚಿಸಿದ್ದಾನೆ” ಎಂದು ದಾವಣಗೆರೆ ಮೂಲದ ವಿತರಕ ಶಿವಮೂರ್ತಿ ತಿಳಿಸಿದ್ದಾರೆ.
ಇದೇ ರೀತಿ 20ಕ್ಕೂ ಹೆಚ್ಚು ಬೀಜ ಕಂಪನಿಗಳಿಗೆ ಸೇರಿದ ವಿತರಕರು, ಉದ್ಯೋಗಿಗಳು ಕುಮಾರ್ ಗೌಡ ಎಂಬ ವ್ಯಕ್ತಿಯನ್ನು ನಂಬಿ ಐದಾರು ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜದ ದಾಸ್ತಾನನ್ನು ಕೊಟ್ಟಿದ್ದಾರೆ. ಐದಾರು ದಿನಗಳಿಂದ ಮಾರುಕಟ್ಟೆ ಬೆಲೆಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ತರಾತುರಿಯಲ್ಲಿ ಮಾರಾಟ ಮಾಡಿ ನಾಪತ್ತೆಯಾಗಿದ್ದಾನೆ.
ಬೀಜ ಕಂಪನಿಗಳಿಗೆ ಪಂಗನಾಮ ಹಾಕಿ ಪರಾರಿಯಾಗಿರುವ ವ್ಯಕ್ತಿಯ ನಿಜವಾದ ಹೆಸರು ಏನು ಎನ್ನುವುದು ಯಾರಿಗೂ ಮಾಹಿತಿ ಇಲ್ಲ. ನಾಲೈದು ಆಧಾರ್ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದ ವಂಚಕ, ಕುಮಾರ್ ಗೌಡ, ನಿಖಿಲ್, ಸಂತೋಷ್ ಮುಂತಾದ ಹೆಸರುಗಳಲ್ಲಿ ವಿವಿಧ ಜಿಲ್ಲೆಗಳ ವರ್ತಕರು, ವಿತರಕರೊಂದಿಗೆ ವ್ಯವಹರಿಸುತ್ತಿದ್ದ. ಸಮೀಪದ ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ರೈತನ ಹೆಸರಿನಲ್ಲಿ ಬಿತ್ತನೆ ಬೀಜ ಮಾರಾಟ ಲೈಸೆನ್ಸ್ ಪಡೆದಿದ್ದ. ಈ ಹಿಂದೆ ಆಂಧ್ರಪ್ರದೇಶ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಹಲವು ವಂಚನೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು ಎನ್ನಲಾಗಿದೆ.
ಕಂಪನಿಗಳಿಗೆ ಮೋಸ ಮಾಡಿ ಪರಾರಿಯಾದ ಘಟನೆ ತಿಳಿಯುತ್ತಿದ್ದಂತೆ ಮರೇನಹಳ್ಳಿ ರಸ್ತೆಯಲ್ಲಿರುವ ಮಳಿಗೆಗೆ ಸಾರ್ವಜನಿಕರು, ರೈತರು, ವರ್ತಕರು, ವಿತರಕರು ಜಮಾಯಿಸಿದ್ದರು. ಪೊಲೀಸರು ರಾತ್ರಿ ಸಮಯದಲ್ಲಿ ಮಳಿಗೆ ತೆರೆದು ಮಾರಾಟವಾಗದೇ ಉಳಿದಿರುವ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ವಿವಿಧ ಕಂಪನಿಯ ವಿತರಕರಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಅವರ 42ನೇ ಪುಣ್ಯತಿಥಿ ಆಚರಣೆ
“ವಂಚನೆ ಘಟನೆ ಬಗ್ಗೆ 17 ಮಂದಿ ವಿತರಕರು, ಬೀಜ ಕೊಟ್ಟಿರುವವರು ಓಡಿ ಹೋಗಿರುವ ವ್ಯಕ್ತಿಯ ವಿರುದ್ದ ಕೇವಲ ದೂರು ಅರ್ಜಿ ನೀಡಿದ್ದಾರೆ. ರೈತರಿಗೆ ಯಾವುದೇ ವಂಚನೆಯಾಗಿಲ್ಲ. ವಂಚನೆ ಘಟನೆ ಬಗ್ಗೆ ಯಾವುದೇ ಮೊಕದ್ದಮೆ ದಾಖಲಾಗಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
