ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

Date:

ಇಂಡಿಯಾ ಒಕ್ಕೂಟ ಮೈತ್ರಿ ಹುಟ್ಟಿದ್ದೇ ಒಂದು ಚಮತ್ಕಾರ. ಸೀಟು ಹೊಂದಾಣಿಕೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದ ಮಾಯಾವತಿ ಹೊರಗೇ ಉಳಿದರು. ಮಮತಾ ಅವರು ಮತ್ತಷ್ಟು ಬಲಿಷ್ಠವಾಗಿ ತಲೆಯೆತ್ತಿದರೆ, ಮಾಯಾವತಿಯವರ ರಾಜಕೀಯ ಬೀಳು ಮುಂದುವರೆದಿದೆ.

 

ಛಿದ್ರಗೊಂಡಿರುವ ಜನಮನದ ಕನ್ನಡಿಯನ್ನು ಕೂಡಿಸುವುದು ದೈತ್ಯಸವಾಲು. ಸುದೀರ್ಘ ಕತ್ತಲ ಸುರಂಗದ ಆಚೆ ತುದಿಯಲ್ಲಿ ಬೆಳಕು ಕಂಡಿದೆ. 2024ರ ಲೋಕಸಭಾ ಚುನಾವಣೆಗಳು ಆಶಾವಾದದ ಆಶ್ವಾಸನೆ ನೀಡಿವೆ. ಎಲ್ಲ ಚುನಾವಣೆಗಳಲ್ಲಿ ಗೆಲ್ಲುವುದು ಬಿಜೆಪಿಗೆ ನೀರು ಕುಡಿದಷ್ಟು ಸಲೀಸು ಎಂಬ ಭಾವನೆ ಬದಲಾಗಿದೆ. ಆಳುವ ವ್ಯವಸ್ಥೆ ಪ್ರತಿಪಕ್ಷಗಳಿಗೆ ನಿರ್ಮಿಸಿದ ಮಿತಿಗಳು, ಆಕ್ರಮಣಗಳು, ಅಡೆತಡೆಗಳು ಹಲ್ಲೆಗಳು, ಅಸಮಾನ ಚುನಾವಣಾ ಸ್ಪರ್ಧಾಕಣದ ನಡುವೆಯೂ ತುರುಸಿನ ಸ್ಪರ್ಧೆಯ ಚಿತ್ರ ಮೂಡಿತು. ಮೋದಿಯವರನ್ನು ಬಿಟ್ಟರೆ ಬೇರೆ ಯಾರಿದ್ದಾರೆ ಎಂಬ ಮನಸ್ಥಿತಿ ಮೊದಲಿನಷ್ಟು ಗಟ್ಟಿಯಾಗಿಲ್ಲ.

ದೇಶದ ಸಾಮಾಜಿಕ ಧಮನಿಗಳಿಗೆ ತುಂಬುತ್ತಿರುವ ದ್ವೇಷದ ವಿಷ ಇಳಿದಿಲ್ಲ. ಮೋದಿ ಜನಪ್ರಿಯತೆಗೆ ಇನ್ನೂ ಮುಪ್ಪು ಮುಸುಕಿಲ್ಲ. ಆದರೆ ಅವರು ಅಜೇಯರಲ್ಲ ಎಂಬ ನಿಚ್ಚಳ ಸೂಚನೆಗಳು ಪ್ರಕಟವಾಗಿವೆ.

ಪ್ರತಿಪಕ್ಷ ರಾಜಕಾರಣದ ಗುಂಡಿಗೆ ಬಡಿತ ನಿಂತೇ ಹೋಯಿತೆಂಬ ಕಳವಳಕ್ಕೆ ಕಾರಣವಿಲ್ಲ ಎಂದು ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ತಮಿಳುನಾಡಿನ ಫಲಿತಾಂಶಗಳು ತೋರಿಸಿಕೊಟ್ಟಿವೆ. ಬಿಜೆಪಿ ಬೇರೂರಿರುವ ಕೆಲವು ರಾಜ್ಯಗಳಲ್ಲಿ ಪ್ರತಿಪಕ್ಷಗಳ ಹಸಿರು ಚಿಗುರುಗಳು ಕಾಣಿಸಿಕೊಂಡಿವೆ. ವಾರಾಣಸಿಯಿಂದ ಕರ್ನಾಟಕದ ತನಕ ಬಿಜೆಪಿಯ ಗೆಲುವಿನ ಅಂತರಗಳು ಕುಗ್ಗಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದೂವರೆ ತಿಂಗಳ ಹಿಂದಿನ ತನಕ ಮೋದಿ ಬಿಟ್ಟರೆ ಬೇರೆ ಯಾರಿದ್ದಾರೆ, ಅವರಿಗೆ ಪರ್ಯಾಯವೇ ಇಲ್ಲ ಎಂಬ ಅಂಶ ಬಲವಾಗಿ ಬೇರೂರಿತ್ತು. ಮೋದಿಯವರ ದೈತ್ಯ ಪ್ರಚಾರಾಂದೋಲನ ದೇಶದ ಉದ್ದ ಅಗಲಗಳನ್ನು ವ್ಯಾಪಿಸಿ ಕವಿದದ್ದು ಹೌದು. ಈ ಅಬ್ಬರಕ್ಕೆ ಗೋದಿ ಮೀಡಿಯಾ ಧ್ವನಿವರ್ಧಕ ಹಿಡಿದದ್ದೂ ಹೌದು. ಆದರೆ ಬಿಜೆಪಿಗೆ ಸ್ಪರ್ಧೆಯೇ ಇಲ್ಲ ಎಂಬ ಭಾವ ದಿನ ಕಳೆದಂತೆ ಬದಲಾಯಿತು. ಬಿಜೆಪಿಯ ಅತಿಯಾದ ಆತ್ಮವಿಶ್ವಾಸದ ಬೆಟ್ಟ ತುಸು ತುಸುವೇ ಕರಗಿತು.

ಸಂವಿಧಾನ ಬದಲಿಸಲು 400 ಸೀಟುಗಳು ಬೇಕು ಮೋದಿಯವರಿಗೆ ಎಂಬ ಬಿಜೆಪಿ ಸಂಸದರ ಮಾತುಗಳು ಮುಳುವಾದವು. ಸಂವಿಧಾನ ಬದಲಿಸಿದರೆ ಮೀಸಲಾತಿಗೆ ಗಂಡಾಂತರ ಎಂದು ಕಾಂಗ್ರೆಸ್ ಪ್ರಚಾರ. ಬಿಜೆಪಿ ಆಕ್ರಮಣವನ್ನು ತೊರೆದು ರಕ್ಷಣಾತ್ಮಕ ಆಟ ಆಡಬೇಕಾಯಿತು. ಸ್ಥಳೀಯ ವಿಚಾರಗಳು ಚರ್ಚೆಗೆ ಬಂದವು. ಪ್ರಧಾನಿ ಮೋದಿ ಮುಖದ ಮೇಲೆ ಆತಂಕದ ಮೋಡಗಳು ಕವಿದಿದ್ದವು. ಹತ್ತು ವರ್ಷದ ಸಾಧನೆಯನ್ನು ಹೇಳದೆ ನೇರವಾಗಿ ಅವರು ಹಿಂದು-ಮುಸ್ಲಿಮ್ ಧೃವೀಕರಣ ಸೂತ್ರಕ್ಕೆ ಶರಣಾದರು. ಮುಸ್ಲಿಂ, ಮಂಗಳಸೂತ್ರ, ಮಾಂಸ, ಮೀನು, ಎಮ್ಮೆ, ಶಹಜಾದಾ, ಶಹಜಹಾನ್, ಬಿರಿಯಾನಿ, ಪಾಕಿಸ್ತಾನ, ಮುಲ್ಲಾ, ಮೀಸಲಾತಿ ಮುಂತಾಗಿ ದನಿಯೇರಿಸಿದರು. ತಾವು ಹಿಂದು-ಮುಸ್ಲಿಮ್ ರಾಜಕಾರಣವನ್ನು ಮಾಡಿಯೇ ಇಲ್ಲವೆಂದರು. ಸಾಲು ಸಾಲು ಸುಳ್ಳುಗಳನ್ನು ಹೇಳಿದರು.

ವೋಟುಗಳಿಗಾಗಿ ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯರನ್ನು ಪರಸ್ಪರರ ವಿರುದ್ಧ ಕೆರಳಿಸಿ ಎತ್ತಿ ಕಟ್ಟುವ ಅಪಾಯಕಾರಿ ಹೇಳಿಕೆ ನೀಡಿದರು. ಬೆಲೆ ಏರಿಕೆ ಮತ್ತು ನಿರುದ್ಯೋಗ ಉಂಟು ಮಾಡಿರುವ ಸಾಮಾಜಿಕ-ಆರ್ಥಿಕ ಸಂಕಟ ಕುರಿತು ಪ್ರಧಾನಿಯವರು ಉಸಿರೆತ್ತಲಿಲ್ಲ. ಮೋದಿ ಮತ್ತು ಅಮಿತ್ ಶಾ ಅವರು ಕಾರ್ಯಸೂಚಿ ಅಥವಾ ಕಥಾನಕವೊಂದನ್ನು ಸೃಷ್ಟಿಸುವುದು ಮತ್ತು ಪ್ರತಿಪಕ್ಷಗಳು ಅದಕ್ಕೆ ಪ್ರತಿಕ್ರಿಯಿಸುವುದು ಕಳೆದ ಹತ್ತು ವರ್ಷಗಳಿಂದ ಅನೂಚಾನವಾಗಿ ಹೋಗಿತ್ತು. ಆದರೆ ಲೋಕಸಭಾ ಚುನಾವಣೆಗಳಲ್ಲಿ ಈ ಪ್ರವೃತ್ತಿ ಸಾಕಷ್ಟು ಮಟ್ಟಿಗೆ ತಿರುವುಮುರುವಾಯಿತು. ಪ್ರತಿಪಕ್ಷ ರಚಿಸುವ ಕಾರ್ಯಸೂಚಿ ಅಥವಾ ಕಥಾನಕಕ್ಕೆ ಪ್ರಧಾನಿ ಮತ್ತು ಅಮಿತ್ ಶಾ ಪ್ರತಿಕ್ರಿಯಿಸಬೇಕಾಗಿ ಬಂತು. ಸಂವಿಧಾನ ಬದಲಾಗಲ್ಲ, ಮೀಸಲಾತಿ ರದ್ದಾಗುವುದಿಲ್ಲ ಎಂಬ ಭರವಸೆ ನೀಡಬೇಕಾಯಿತು.

ಇಂಡಿಯಾ ಒಕ್ಕೂಟ ಮೈತ್ರಿ ಹುಟ್ಟಿದ್ದೇ ಒಂದು ಚಮತ್ಕಾರ. ಸೀಟು ಹೊಂದಾಣಿಕೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದ ಮಾಯಾವತಿ ಹೊರಗೇ ಉಳಿದರು. ಮಮತಾ ಅವರು ಮತ್ತಷ್ಟು ಬಲಿಷ್ಠವಾಗಿ ತಲೆಯೆತ್ತಿದರೆ ಮಾಯಾವತಿಯವರ ರಾಜಕೀಯ ಬೀಳು ಮುಂದುವರೆದಿದೆ.

2014ರಲ್ಲಿ ಕೇವಲ 44 ಮತ್ತು 2019ರಲ್ಲಿ 52 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಅಧಿಕೃತ ಪ್ರತಿಪಕ್ಷದ ಸ್ಥಾನಮಾನವನ್ನೂ ಕಳೆದುಕೊಂಡು ಅಪಮಾನ ಅನುಭವಿಸಿತ್ತು. ಈ ಸಲ ಕೇವಲ 328 ಸೀಟುಗಳಲ್ಲಿ ಸ್ಪರ್ಧಿಸಿದೆ. ತನ್ನ ಅಗ್ರಪೀಠದಿಂದ ಕೆಳಗಿಳಿದು ಮಿತ್ರಪಕ್ಷಗಳತ್ತ ನಡೆದು ಬಂದು ಕೈ ಕುಲುಕಿದೆ. ಸಮಾಜವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಜನತಾದಳವನ್ನು ಯೂಪಿ- ಬಿಹಾರದಲ್ಲಿ ಅಣ್ಣಂದಿರೆಂದು ಒಪ್ಪಿಕೊಂಡಿದೆ.

ಬಹುಕಾಲ ಬಿಜೆಪಿ ಜೊತೆಗಿದ್ದ ಒಡಿಶಾದ ನವೀನ್ ಪಟ್ನಾಯಕ್ ಈ ಸಲ ದೂರ ಸರಿದರು. ಈ ವೇಳೆಗಾಗಲೇ ತಡವಾಗಿ ಹೋಗಿತ್ತು. ಬಿಜೆಡಿಯ ಹಡಗು ಸದ್ಯಕ್ಕಂತೂ ಮುಳುಗಿದೆ. ತನಗೆ ಊರುಗೋಲಾದ ಪಕ್ಷಗಳನ್ನು ಬಳಸಿ ಬಿಸಾಡುವ ಬಿಜೆಪಿಯ ಅವಕಾಶವಾದಿತನದ ಮೇಲೆ ಈ ಚುನಾವಣೆ ಮತ್ತಷ್ಟು ಬೆಳಕು ಚೆಲ್ಲಿದೆ.

ಉತ್ತರಪ್ರದೇಶದ ಸೋಲಿನ ಹಿನ್ನೆಲೆಯಲ್ಲಿ ಅಲ್ಲಿನ ಮಿತ್ರಪಕ್ಷಗಳಾಗಿದ್ದ ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಮತ್ತು ನಿಷಾದ್ ಪಾರ್ಟಿಯನ್ನು ನೆನ್ನೆ ಜರುಗಿದ ಎನ್.ಡಿ.ಎ ಸಭೆಗೆ ಆಹ್ವಾನಿಸಿಯೇ ಇಲ್ಲ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮತ್ತು ಉದ್ಧವ ಠಾಕ್ರೆಯವರ ಪಾರ್ಟಿಗಳನ್ನು ಒಡೆದು ಮುಖ ಜಜ್ಚಿಸಿಕೊಂಡಿದೆ ಬಿಜೆಪಿ. ಕೇಸರಿ ಪಕ್ಷದ ಕುಮ್ಮಕ್ಕಿನಿಂದ ತಮ್ಮದೇ ನಿಜವಾದ ಎನ್.ಸಿ.ಪಿ. ಎಂದು ಸಾರಿದ್ದ ಅಜಿತ್ ಪವಾರ್ ನೆನ್ನೆ ಜರುಗಿದ ಮಹಾರಾಷ್ಟ್ರದ ‘ಮಹಾಯುತಿ’ ಸಭೆಯಿಂದ ದೂರ ಉಳಿದಿರುವ ವರದಿಗಳಿವೆ.

ಜನಮನದ ಕನ್ನಡಿ ಒಡೆದು ಹೋಗಿದೆ. ಕೋಮು ಧೃವೀಕರಣ ಕಲ್ಲುಗಳನ್ನೆಸೆದು ಛಿದ್ರಗೊಳಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಸಾವಕಾಶವಾಗಿ ಆದರೆ ಸದೃಢವಾಗಿ ಅದನ್ನು ಒಂದು ಮಾಡುವುದು ಪ್ರತಿಪಕ್ಷಗಳು ಮತ್ತು ನಾಗರಿಕ ಸಂಘಟನೆಗಳ ಮುಂದಿರುವ ದೈತ್ಯ ಸವಾಲು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...