ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಗೃಹಜ್ಯೋತಿ ಯೋಜನೆಯ ಚಾಲನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನಡೆದುಕೊಂಡ ರೀತಿ ಸರಿಯಲ್ಲ. ಪ್ರಧಾನಿಯವರು ಜನರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿಯೇ ಇಲ್ಲ ಎಂದು ಹರಿಹರ ಶಾಸಕ ಬಿ.ಪಿ ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನ ಮುಖಂಡರು ಅಧಿಕಾರಕ್ಕೆ ಬರುವ ಮುನ್ನ ಕರೆಂಟ್ ‘ನಿಮಗೂ ಉಚಿತ – ನಮಗೂ ಉಚಿತ’ ಎಂದು ಹೇಳಿದ್ದರು. ಇದೀಗ ಕಂಡಿಷನ್ ಜೊತೆಗೆ ಯೋಜನೆ ಜಾರಿ ಮಾಡಿದ್ದಾರೆ. ಆದರೆ, ಕಾರ್ಯಕ್ರಮದಲ್ಲಿ ‘ಪ್ರಧಾನಿಯವರು 15 ಲಕ್ಷ ಹಾಕಲಿಲ್ಲ’ ಎಂದು ಸಚಿವರು ಪದೇ ಪದೇ ಹೇಳುವುದು ಸರಿಯಲ್ಲ. ಪ್ರಧಾನಿಯವರು 15 ಲಕ್ಷ ರೂಪಾಯಿಯ ಭರವಸೆ ನೀಡಿರುವ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ” ಎಂದು ಹೇಳಿದ್ದಾರೆ.
“ಗೃಹಜ್ಯೋತಿ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಒಬ್ಬ ಐಎಎಸ್ ಅಧಿಕಾರಿ ಕಾಂಗ್ರೆಸ್ ವಕ್ತಾರರಂತೆ ವರ್ತಿಸಿರುವುದು ಸರಿಯಲ್ಲ. ಅಧಿಕಾರಿಯೊಬ್ಬರು ಕಾಂಗ್ರೆಸ್‌ಗೆ ಮತ ಹಾಕಿದ್ದೀರಾ, ನಿಮಗೆ ಶೂನ್ಯ ಬಿಲ್ ಬಂದಿದೆ ನೋಡಿ ಎಂದು ಹೇಳಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅಧಿಕಾರಿಗಳು ಹೀಗೆ ಮಾತನಾಡುವುದು ಉತ್ತಮ ನಡೆಯಲ್ಲ” ಎಂದು ಹೇಳಿದ್ದಾರೆ.
“ಇಂದಿರಾಗಾಂಧಿ ಕಾಲದಿಂದಲೂ ಗರೀಬಿ ಹಠಾವೋ ಎನ್ನುವ ಕಾಂಗ್ರೆಸ್‌ನವರಿಗೆ ದೇಶ ಬಡತನದಲ್ಲಿರುವುದೇ ಬೇಕು ಎನಿಸುತ್ತದೆ. ಕೋವಿಡ್ ಅವಧಿಯಲ್ಲಿ ಹಗರಣವಾಗಿದ್ದರೆ ತನಿಖೆ ಮಾಡಲಿ. ಹರಿವೆ ಹಾವು ಬಿಡುವುದು ಬೇಡ” ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, “ಗೃಹಜ್ಯೋತಿ ಯೋಜನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ ಹರೀಶ್ ಭಾಗವಹಿಸಿದ್ದರು. ಈ ವೇಳೆ ಪ್ರಧಾನಿಯವರು ಅನ್ನಭಾಗ್ಯ ಯೋಜನೆಗೆ ಸ್ಪಂದಿಸಲಿಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದನ್ನು ಖಂಡಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ. ಶಾಸಕರು ಎಂದು ನೋಡದೆ ಅವಾಚ್ಯವಾಗಿ ನಿಂದಿಸಿದ್ದಾರೆ” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ಲಿಂಗರಾಜ್, ಮಂಜಾನಾಯಕ್ ಇದ್ದರು….