ಸರ್ಕಾರಿ ಶಾಲೆಯ ಶಿಕ್ಷಕಿಯರ ನಡುವಿನ ಸಂಘರ್ಷಕ್ಕೆ ಬೇಸತ್ತ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶಾಲೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉರುಲಕಟ್ಟೆ ಗ್ರಾಮದಲ್ಲಿ ನಡೆದಿದೆ.
“ಉರುಲಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ಎಂಬುವವರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಯಾವಾಗೆಂದರೆ ಆಗ ಶಾಲೆಗೆ ಬರುತ್ತಾರೆ. ಬಂದಾಗಲೂ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರ ಜೊತೆ ಗಲಾಟೆ ಮಾಡುತ್ತಾರೆ. ಮಕ್ಕಳಿಗೆ ಬುದ್ಧಿ ಹೇಳಬೇಕಾದ ಶಿಕ್ಷಕರೇ ಸಂಕುಚಿತವಾಗಿ ವರ್ತಿಸುತ್ತಿದ್ದಾರೆ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿದ್ದಾರೆ.
“ಶಾಲೆ ಸಮಯ ಬೆಳಿಗ್ಗೆ 10 ಗಂಟೆಗೆ ಶಿಕ್ಷಕರು ಬರಬೇಕು. ಆದರೆ, ಮುಖ್ಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿಲ್ಲ. ಮುಖ್ಯ ಶಿಕ್ಷಕಿ ಮತ್ತು ಸಹ ಶಿಕ್ಷಕಿ ನಡುವೆ ಹೊಂದಾಣಿಕೆ ಇಲ್ಲ” ಎಂದು ಆರೋಪಿಸಿದ್ದಾರೆ.

“ಇಬ್ಬರ ಜಗಳದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಪಾಠ ಮಾಡುವುದಿಲ್ಲ. ಸಣ್ಣ ವಿಷಯಕ್ಕೂ ಜಗಳವಾಡುತ್ತಾರೆ. ಇಂತಹ ಶಿಕ್ಷಕಿಯರು ಒಟ್ಟಿಗೆ ಇದ್ದರೆ ಮಕ್ಕಳಿಗೆ ಅನ್ಯಾಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ಇಬ್ಬರನ್ನೂ ವರ್ಗಾವಣೆ ಮಾಡಿ. ಇವರ ಸಹವಾಸವೇ ಬೇಡ. ಬೇರೆ ಶಿಕ್ಷಕರನ್ನು ನೇಮಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ರಾಯಚೂರು: ಕಂದುಗಡ್ಡೆ ಮಾರಮ್ಮದೇವಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ
ಪ್ರತಿಭಟನೆ ನಡೆಯುತ್ತಿದ್ದ ಉರುಲಕಟ್ಟೆ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಭೇಟಿ ನೀಡಿದ್ದು, ಮುಖ್ಯ ಶಿಕ್ಷಕಿ, ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಜೊತೆಗೆ ಸಭೆ ನಡೆಸಿದ್ದಾರೆ.
“ಶಿಕ್ಷಕರು ಮಕ್ಕಳ ಮುಂದೆ ಜಗಳವಾಡಿದರೆ, ಮಕ್ಕಳೂ ಕೂಡ ಹಾಗೆ ಮಾಡುತ್ತಾರೆ. ಶಿಕ್ಷಕರು ತಾಳ್ಮೆಯಿಂದ ವರ್ತಿಸಬೇಕು. ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ಪಾಠ ಮಾಡಬೇಕು” ಎಂದು ಶಿಕ್ಷಕರಿಗೆ ಶಿಕ್ಷಣಾಧಿಕಾರಿ ಬುದ್ಧಿ ಹೇಳಿದರು.