ಹರಿಹರ ನಗರದ ವಾರ್ಡ್ ನಂ. 8, 9 ರ ಮದ್ಯದ ತೆಗ್ಗಿನಕೇರಿ-ದೊಡ್ಡಿಬೀದಿ ಮುಖ್ಯ ರಸ್ತೆಗೆ ಬರುವ ಚರಂಡಿ ಆಳವಿದ್ದು, ತಡೆಗೋಡೆ ಇಲ್ಲದೇ ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಅಪಘಾತಗಳಾಗಿ ಅನಾಹುತಗಳಾಗಿರುವ ಘಟನೆಗಳಾಗಿವೆ. ಆದ್ದರಿಂದ ಕೂಡಲೇ ತಡೆಗೋಡೆ ನಿರ್ಮಿಸಬೇಕು ಎಂದು ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆ ಪೌರಾಯುಕ್ತರಿಗೆ ಜಯಕರ್ನಾಟಕ ಸಂಘಟನೆ ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ಹರಿಹರ ನಗರದ ವ್ಯಾಪ್ತಿಯ ವಾರ್ಡ್ ನಂ. 8 ಮತ್ತು 9 ತೆಗ್ಗಿನಕೇರಿ ಮತ್ತು ದೊಡ್ಡಬೀದಿ ಮುಖ್ಯ ರಸ್ತೆಯ ಪಕ್ಕ ಆಳವಾದ ಚರಂಡಿ ಗುಂಡಿಗೆ ಕಾಮಗಾರಿ ಮಾಡದೇ ತಡೆಗೋಡೆ ಇಲ್ಲದಿರುವುದರಿಂದ ಕಳೆದ 6-7 ವರ್ಷಗಳಿಂದ ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಅಪಘಾತ ನಡೆದಿವೆ. ಈ ಘಟನೆಗಳನ್ನು ಇಲ್ಲಿನ ಸಾರ್ವಜನಿಕರು ಆಗಾಗ್ಗೆ ಅನುಭವಿಸುತ್ತಿರುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಬಗ್ಗೆ ನಗರಸಭೆ ಕಛೇರಿ, ನಗರಸಭಾ ಸದಸ್ಯರಿಗೆ ಹಲವಾರು ಬಾರಿ ಮನವಿ ಅರ್ಜಿಗಳನ್ನು ಸಲ್ಲಿಸಿದ್ದು, ತಾವುಗಳು ಈ ಹಿಂದೆ ಖುದ್ದು ಸ್ಥಳ ತನಿಖೆ ಮಾಡಿದ್ದರೂ. ಇದುವರೆಗೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ತೆಗ್ಗಿನಕೇರಿ ರಸ್ತೆಗೆ ತಡೆಗೋಡೆ ಇಲ್ಲದಿರುವುದರಿಂದ ಅತ್ಯಂತ ಅಪಾಯದ ಸ್ಥಿಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಆದುದರಿಂದ ಬೃಹತ್ ಚರಂಡಿಗೆ ತಡೆಗೋಡೆ ನಿರ್ಮಿಸಿಕೊಬೇಕೆಂದು ಸಂಘಟನೆಯಿಂದ ಆಗ್ರಹಿಸುತ್ತೇವೆ. ನಿರ್ಲಕ್ಷ್ಯ ವಹಿಸಿದರೆ ಮುಂದೆ ಯಾವುದೇ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ತಾವುಗಳೇ ಹೊಣೆಗಾರರಾಗಿರುತ್ತೀರಿ. ಚರಂಡಿ ಮತ್ತು ತಡೆಗೋಡೆ ನಿರ್ಮಿಸಿಕೊಟ್ಟು ಈ ಭಾಗದ ನಿವಾಸಿಗರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ಸಿಗೂ, ಮುಸ್ಲಿಮರಿಗೂ ಎಚ್ಚರಿಕೆ ಗಂಟೆ ಕಟ್ಟಿದ ದಾವಣಗೆರೆ ರಾಜಕಾರಣ: ಮುಸ್ಲಿಮರ ಮುಂದಿನ ನಡೆಯೇನು?
ಈ ವೇಳೆ ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್ ಗೋವಿಂದ, ಉಪಾಧ್ಯಕ್ಷ ಆನಂದ್ ಎಂ ಆರ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಸೋಯಾಬ್ ಮಲ್ಲಿಕ್, ಇಸ್ಮಾಯಿಲ್ ಹಕ್ತರ, ಅಬ್ದುಲ್ ಸಾಬ್, ರಮೇಶಣ್ಣ, ಜೀವನ್, ಸುನಿಲ್ ಮತ್ತು ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.






