ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ

Date:

Advertisements

ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾರಿಸಿ ಅವರು ಮಾತನಾಡಿದರು. “ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿರುವ ನಮಗೆ ಸ್ವಾತಂತ್ರ್ಯವು ಎಷ್ಟು ದುಬಾರಿಯಾದ ಸಂಗತಿ ಎಂಬುದು ಅರಿವಿಗೆ ಬರಲೇಬೇಕು. ಇಲ್ಲದಿದ್ದರೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಗೆ ಅರ್ಥವೇ ಇರುವುದಿಲ್ಲ. ಸ್ವಾತಂತ್ರ್ಯ ಎಂಬುದು ಮನುಷ್ಯರ ಜೀವಕ್ಕಿಂತ ಮಿಗಿಲು ಎಂದು ಸ್ವಾತಂತ್ರ್ಯ ಹೋರಾಟಗಾರರು ಭಾವಿಸಿದ್ದರು. ಆದ್ದರಿಂದಲೇ ಎಲ್ಲ ಮಹನೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ತ್ಯಾಗ ಬಲಿದಾನಗಳನ್ನು ದೇಶವು ಶ್ರದ್ಧಾಪೂರ್ವಕವಾಗಿ ಸ್ಮರಿಸಲೇಬೇಕು” ಎಂದರು.

“ವಸಾಹತುವಾದ ಮತ್ತು ಸಾಮ್ರಾಜ್ಯವಾದಗಳು ಜೀವಂತವಾಗಿದ್ದಾಗ, ಸ್ವಾತಂತ್ರ್ಯ ಗಳಿಸಿದರೆ ಸಾಕು ಅಭಿವೃದ್ಧಿ ಎಂಬುದು ತನ್ನಿಂದ ತಾನೆ ಸಾಧ್ಯವಾಗುತ್ತದೆ ಎಂದು ಭಾವಿಸಿ ನಮ್ಮ ಹಿರಿಯರು ಹೋರಾಟ ಮಾಡಿದ್ದರು. ಇದು ಸತ್ಯ ಕೂಡ ಆಗಿತ್ತು. ಸ್ವಾತಂತ್ರ್ಯವೇನೊ ಲಭಿಸಿತು. ಆದರೆ ನವ ಉದಾರವಾದಿ ನೀತಿಗಳು ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತು. ಇಂದು ನಮ್ಮಲಿಯೇ ಶೇ.10 ರಷ್ಟು ಜನ ಶೇ.78 ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ ಯಜಮಾನಿಕೆ ಹೊಂದಿದ್ದಾರೆ. ಬ್ರಿಟಿಷ್ ಭಾರತದಲ್ಲಿ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಹೊತ್ತೊಯ್ದರು. ಆದರೆ ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಿಗರ ಬಳಿ ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ ಅಭಿವೃದ್ಧಿ ಸಾಧ್ಯವೆ?” ಎಂದು ಹೇಳಿದರು.

Advertisements

ಕುವೆಂಪು ಅವರು ತಮ್ಮದೊಂದು ಪದ್ಯದಲ್ಲಿ- ‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೆ?’ ಎಂದಿದ್ದಾರೆ. ಇದನ್ನೆಲ್ಲ ಮನಗಂಡೆ ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೆ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮಾರ್‍ತ್ಯ ಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯೆ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

WhatsApp Image 2023 08 15 at 10.24.22 AM

“ಬ್ರಿಟಿಷರು ಭಾರತದ ಸ್ಥಳೀಯ ಉತ್ಪಾದನಾ ವಿಧಾನಗಳ ಕೈ ಬೆರಳುಗಳನ್ನು ಕತ್ತರಿಸಿ ಹಾಕಿ ಮಾರುಕಟ್ಟೆಯ ಮೇಲೆ ಯಜಮಾನಿಕೆಯನ್ನು ಸಾಧಿಸಿದ್ದರು. ಇದರಿಂದಾಗಿ ದೇಶದ ಆರ್ಥಿಕತೆ ಪೂರ್ತಿ ಪಾತಾಳಕ್ಕೆ ಕುಸಿದಿತ್ತು. ಬ್ರಿಟಿಷರು ದೇಶದ ಜನರ ಮೇಲೆ ಸಾಲವನ್ನು, ಕೈಗಳಿಗೆ ನಿರುದ್ಯೋಗವನ್ನು, ಹೊಟ್ಟೆ ತುಂಬ ಹಸಿವನ್ನು ಬಳುವಳಿಯಾಗಿ ಕೊಟ್ಟು ಹೋಗಿದ್ದರು. ಇಂಥ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾರ್ಯಯೋಜನೆಗಳು ದೇಶವನ್ನು ಪಾತಾಳದಿಂದ ಮೇಲೆತ್ತಲು ಸಾಧ್ಯ ಮಾಡಿದವು. ಇವರೆಲ್ಲರ ಕೊಡುಗೆಯಿಂದ ಭಾರತವು ಇಂದು ಜಗತ್ತಿನಲ್ಲಿ ಅತ್ಯಂತ ಪ್ರಬಲ ದೇಶವಾಗಿ ಬೆಳೆದಿದೆ” ಎಂದರು.

“ಬೆಲೆ ಏರಿಕೆ, ನಿರುದ್ಯೋಗ, ಜಾತಿ-ಧರ್ಮಗಳ ಕಾರಣಕ್ಕಾಗಿ ತಾರತಮ್ಯ, ಭ್ರಷ್ಟಾಚಾರ ಮುಂತಾದ ಕಾರಣಗಳಿಗಾಗಿ ನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ಜನರ ತಲಾದಾಯ ಹಿಂದೆ ಆಡಳಿತ ನಡೆಸಿದ್ದ ನಮ್ಮ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಆ ನಂತರದ ಅವಧಿಯಲ್ಲಿ ಏರಿಕೆಯಾಗದೆ ಬಡತನ ಇನ್ನಷ್ಟು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ನಮ್ಮ ಸರ್ಕಾರ ಜನರ ಆರ್ಥಿಕ, ಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ [Universal Basic income] ಎಂಬ ಹೊಸ ಆರ್ಥಿಕ ಪ್ರಮೇಯವನ್ನು ಅಳವಡಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ” ಎಂದು ವಿವರಿಸಿದರು.

“ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಿಂದ ಸುಮಾರು 2 ಕೋಟಿ ಗ್ರಾಹಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 13,910 ಕೋಟಿ ರೂ.ಗಳಷ್ಟು ವಿನಿಯೋಗಿಸುತ್ತಿದೆ. ‘ಅನ್ನ ಭಾಗ್ಯʼ ಯೋಜನೆಗೆ ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಅಸಹಕಾರದ ನಡುವೆಯೂ ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಕೇಂದ್ರವು ನೀಡುವ 5 ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲು ಕ್ರಮ ತೆಗೆದುಕೊಳ್ಳುತ್ತಿದೆ. ಈವರೆಗೆ 1.04 ಕೋಟಿ ಕುಟುಂಬಗಳು ನಗದು ಸೌಲಭ್ಯ ಪಡೆಯುತ್ತಿವೆ. ಉಳಿದ ಕುಟುಂಬಗಳಿಗೆ ಸದ್ಯದಲ್ಲಿಯೇ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಿದ್ದೇವೆ” ಎಂದರು.

“ಡಾ.ಬಿ.ಆರ್. ಅಂಬೇಡ್ಕರ್ ಅವರು ‘ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿದೆ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳನ್ನು ಬದುಕಿನ ತತ್ವಗಳೆಂದು ಗುರುತಿಸುವ ಜೀವನ ವಿಧಾನವಾಗಿದೆ’ ಎಂದು ಹೇಳಿದ್ದಾರೆ. ರಾಜಕೀಯ ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕಾದರೆ ಅದರ ತಳಹದಿಯಾದ ಸಾಮಾಜಿಕ ಪ್ರಜಾಪ್ರಭುತ್ವವು ಸುಭದ್ರವಾಗಿರಬೇಕು ಎಂಬ ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಸರ್ಕಾರ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದೆ” ಎಂದು ತಿಳಿಸಿದರು.

“ಅವಕಾಶ ವಂಚಿತ ಸಮುದಾಯಗಳ ಹಿತರಕ್ಷಣೆ ಹಾಗೂ ಅವರ ಅಭ್ಯುದಯ ನಮ್ಮ ಕಾಳಜಿಯಾಗಿದೆ. ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ರೈತರು ಹಾಗೂ ಇತರ ಶೋಷಿತ ವರ್ಗದವರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಪರಿಶಿಷ್ಟ ಜಾತಿ, ಪಂಗಡದವರಿಗೆ ಹಂಚಿಕೆಯಾದ ಭೂಮಿಯ ಅಕ್ರಮ ಪರಭಾರೆ ವಿರುದ್ಧ ದೂರು ನೀಡಲು ಯಾವುದೇ ಕಾಲಮಿತಿ ಇಲ್ಲ ಎಂಬುದನ್ನು ನಿಚ್ಚಳಗೊಳಿಸಿದೆ” ಎಂದರು.

“ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ವಿಶೇಷ ಯೋಜನೆ ಕಾಯ್ದೆ 2013ರ ಸೆಕ್ಷನ್ 7(ಡಿ) ಯನ್ನು ರದ್ದುಪಡಿಸುವ ಮೂಲಕ ಡೀಮ್ಡ್ ವೆಚ್ಚದ ಹೆಸರಲ್ಲಿ ಈ ಸಮುದಾಯಗಳಿಗೆ ಮೀಸಲಿರುವ ಅನುದಾನ ಇತರೆ ಕಾರ್ಯಗಳಿಗೆ ದುರ್ಬಳಕೆಯಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

“ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆ 1993 ಜಾರಿ ಹಾಗೂ ಸಂವಿಧಾನದ 73ನೇ ವಿಧಿಯ ತಿದ್ದುಪಡಿ ಮಾಡಿದ 30ನೇ ವರ್ಷದಲ್ಲಿ ನಾವಿದ್ದೇವೆ. ಪ್ರಜಾಪ್ರಭುತ್ವದ ವಿಕೇಂದ್ರೀಕರಣದಲ್ಲಿ ಕರ್ನಾಟಕ ಎಂದಿಗೂ ಮುಂಚೂಣಿಯಲ್ಲಿದೆ. ಪಂಚಾಯತ್‍ರಾಜ್ ಸಂಸ್ಥೆಗಳ ಮೂಲಕ ಸ್ಥಳೀಯಾಡಳಿತ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದ ಹೇಳಿದರು.

“ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡುವ, ಸಾಮರಸ್ಯ ಕದಡುವ ಯತ್ನ ಮತ್ತು ‘ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿʼ ಹೆಸರಿನಲ್ಲಿ ನಡೆಯುವ ಅನೈತಿಕ ದಬ್ಬಾಳಿಕೆಯನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ. ಸರ್ಕಾರದ ಪ್ರಧಾನ ಧ್ಯೇಯ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಅವರ ಆಶಯವನ್ನು ಈಡೇರಿಸುವುದೇ ಆಗಿದೆ. ನಾಡ ಜನರು, ವಿಶೇಷವಾಗಿ ಯುವಜನರು ಇಂತಹ ವಿಚ್ಛಿದ್ರಕಾರಿ ಶಕ್ತಿಗಳ ಪ್ರಚೋದನೆಗೆ ಒಳಗಾಗದೆ ಸಾಮರಸ್ಯ, ಸಹಬಾಳ್ವೆಯ ಮಹತ್ವವನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡುತ್ತೇನೆ” ಎಂದರು.

“ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಉದ್ದೇಶದಿಂದ ದಿವಂಗತ ರಾಜೀವ್ ಗಾಂಧಿಯವರು ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದರು. ತಂತ್ರಜ್ಞಾನದ ಅಸೀಮ ಸಾಧ್ಯತೆಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್‍ರವರ ನೇತೃತ್ವದ ಯುಪಿಎ ಸರ್ಕಾರ ‘ಆಧಾರ್’ ವ್ಯವಸ್ಥೆಯನ್ನು ಜಾರಿಗೆ ತಂದಿತು. ‘ಆಧಾರ್’ ಬಂದ ನಂತರ ಫಲಾನುಭವಿಗಳಿಗೆ ಸವಲತ್ತನ್ನು ನೇರವಾಗಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಈಗ ನಾವು ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಇದೇ ವ್ಯವಸ್ಥೆಯನ್ನೇ ಬಳಸುತ್ತಿದ್ದೇವೆ. ವರ್ಷಕ್ಕೆ 50 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನಯಾಪೈಸೆಯಷ್ಟು ಭ್ರಷ್ಟಾಚಾರದ ಸೋಂಕು ಇಲ್ಲದೆ ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ವಿವರಿಸಿದರು.

“ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶವು ವಿಪರೀತ ಆತಂಕಿತಗೊಂಡಿದೆ. ಸಮಾಜಗಳಲ್ಲಿ ವಿನಾಕಾರಣ ದ್ವೇಷ, ಹಿಂಸೆ, ಗುಮಾನಿ, ಶತ್ರುತ್ವ ಭಾವ, ಅಸಹನೆಗಳು ಬೆಳೆಯುತ್ತಿವೆ. ಕೆಟ್ಟದ್ದನ್ನು ಉತ್ಪಾದಿಸಿ ಅದಕ್ಕೆ ಎಲ್ಲರ ಒಪ್ಪಿಗೆ ಇದೆ ಎಂಬ ಭಾವನೆಯನ್ನು ಸೃಷ್ಟಿಸಲು ಸಮಾಜದ ಕೆಲವು ವರ್ಗಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಈ ರೀತಿಯ ನಕಾರಾತ್ಮಕ ಧೋರಣೆಯನ್ನು ನಾವು ಹಿಮ್ಮಟ್ಟಿಸಲೇಬೇಕು. ಶಾಂತಿ ಸುವ್ಯವಸ್ಥೆಗಳಿದ್ದರೆ ಸಮಾಜವು ಅಭಿವೃದ್ಧಿಯತ್ತ ಸಾಗುತ್ತದೆ. ಹಿಂಸೆ, ಗೊಂದಲಗಳು ಇರುವ ಸಮಾಜಗಳು, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದ ವ್ಯವಸ್ಥೆಗಳಲ್ಲಿ ಬಡತನ ಹೆಚ್ಚುತ್ತದೆ. ಪ್ರತಿ ವರ್ಷ ಲಕ್ಷಾಂತರ ಪ್ರತಿಭಾವಂತರು ನಮ್ಮ ಹೆಮ್ಮೆಯ ದೇಶದ ನಾಗರಿಕತ್ವವನ್ನು ತೊರೆದು ಹೋಗುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳು ಅಪ್ರತಿಮ ಪ್ರತಿಭಾವಂತರನ್ನು, ವೈಜ್ಞಾನಿಕ, ವೈಚಾರಿಕ ಸ್ಫೂರ್ತಿಯುಳ್ಳ ಜ್ಞಾನಿಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X