ಪಡಿತರದಲ್ಲಿ ಸ್ಥಳೀಯ ಆಹಾರ ಧಾನ್ಯ, ಅಡುಗೆ ಎಣ್ಣೆ ಮತ್ತು ಬೇಳೆ ನೀಡುವುದು ಹಾಗೂ ಮನರೇಗಾ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಾರ್ಮಿಕ ಚೀಟಿ ನೀಡುವಂತೆ ಕಲಘಟಗಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಲಘಟಗಿ ಗ್ರಾಕೂಸ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಗ್ರಾಕೂಸ ಸಂಚಾಲಕಿ ನಿಂಗಮ್ಮ ಸವಣೂರ ಮಾತನಾಡಿ, “ರೈತರ ಮತ್ತು ಕಾರ್ಮಿಕರ ಹಿತ ದೃಷ್ಟಿಯಿಂದ, ಪೌಷ್ಠಿಕಾಂಶದ ಕೊರತೆ ನೀಗುವುದಕ್ಕಾಗಿ ಆಯಾಯ ಪ್ರದೇಶಕ್ಕನುಗುಣವಾಗಿ ಅಕ್ಕಿಯೊಂದಿಗೆ ಪ್ರತಿ ವ್ಯಕ್ತಿಗೆ ಜೋಳ ಅಥವಾ ಸ್ಥಳೀಯ ಆಹಾರ ಧಾನ್ಯ, 1 ಕೆಜಿ ತೊಗರಿಬೇಳೆ, 1 ಕೆಜಿ ಅಡುಗೆ ಎಣ್ಣೆ ಅನುಕೂಲಕರ ದರದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಕಲ್ಪಿಸುವಂತಾಗಬೇಕು” ಎಂದು ಆಗ್ರಹಿಸಿದರು.
“ಸ್ಥಳೀಯ ಆಹಾರ ಧಾನ್ಯಗಳನ್ನು ವಿತರಣೆ ಮಾಡುವುದರಿಂದ ರೈತರ ಬೆಳೆಗೂ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆಯ ಲಭ್ಯತೆ, ಗ್ರಾಮೀಣ ಭಾಗದಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ, ಕಾರ್ಮಿಕರಿಗೆ ವಿಶೇಷವಾಗಿ ಅಪೌಷ್ಟಿಕತೆ ಹೆಚ್ಚುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಅಪೌಷ್ಠಿಕತೆ ನೀಗಿಸುವ ಪೌಷ್ಟಿಕ ಆಹಾರವೂ ಸಿಕ್ಕಂತಾಗುತ್ತದೆ. ಆಗ ಮಾತ್ರ ಆಹಾರ ಭದ್ರತೆಗೆ ಸರಿಯಾದ ಅರ್ಥ ಬರುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯ
“ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 90 ದಿನಗಳಿಗೂ ಹೆಚ್ಚಿನ ಮಾನವ ದಿನಗಳನ್ನು ಮುಗಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಬಿಒಸಿಡಬ್ಲ್ಯೂ ಅಡಿಯಲ್ಲಿ ಕಾರ್ಮಿಕ ಚೀಟಿಗಳನ್ನು ನೀಡಬೇಕು. ಉದ್ಯೋಗ ಖಾತ್ರಿಯಲ್ಲಿ ಹೆಚ್ಚುವರಿ 100 ದಿನ ಮಾನವ ದಿನಗಳ ಕೆಲಸ ನೀಡಬೇಕು. ಇವೆರಡೂ ಅಪೌಷ್ಠಿಕತೆ ನೀಗಿಸುವ ಆಹಾರ ಭದ್ರತೆ, ಆರೋಗ್ಯ, ಶಿಕ್ಷಣದಂಥ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳಾಗಿದ್ದು, ರೈತರ ಮತ್ತು ಕಾರ್ಮಿಕರಿಗೆ ಏಕಕಾಲಕ್ಕೆ ಪ್ರಯೋಜನ ದೊರಕಲಿರುವ ಜನಪರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.