ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ 45 ಕೋಟಿ ರೂ. ವ್ಯಯದೊಂದಿಗೆ 100 ಹೊಸ ಬಸ್‌ಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ನಿಗದಿಯಂತೆ ನಡೆದರೆ ಮುಂದಿನ ಐದು ತಿಂಗಳಲ್ಲಿ ಅವಳಿ ನಗರಗಳಿಗೆ ಹೆಚ್ಚುವರಿಯಾಗಿ 100 ಹೊಸ ಬಸ್‌ಗಳು ಬರಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಅವಳಿ ನಗರದಲ್ಲಿ ಪ್ರತಿದಿನ ಅಂದಾಜು ಮೂರು ಲಕ್ಷ ಮಂದಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದರಿಂದ ಹೊಸ ಹೆಚ್ಚುವರಿ ಬಸ್‌ಗಳ ಅವಶ್ಯಕತೆಯಿದೆ. ಹಾಗಾಗಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು 23.4 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಧಾರವಾಡದ ಸಿಟಿ ಬಸ್ ನಿಲ್ದಾಣವನ್ನು 13.1 ಕೋಟಿ ರೂ.ಗಳ ವೆಚ್ಚದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಿಯುಎಲ್ ಟಿ) ಆರ್ಥಿಕ ನೆರವಿನೊಂದಿಗೆ ಪುನರ್ ನಿರ್ಮಿಸಲಾಗುವುದು” ಎಂದು ಸಚಿವರು ಹೇಳಿದರು.
“ಎಲೆಕ್ಟ್ರಿಕ್ ಬಸ್ ಖರೀದಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ಅದು ಪುನರಾರಂಭಗೊಂಡರೆ, ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಇದು ಸಹಾಯ ಮಾಡುತ್ತದೆ. ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಒಟ್ಟು ವೆಚ್ಚದ ಗುತ್ತಿಗೆ (ಜಿಸಿಸಿ) ಮಾದರಿಯಲ್ಲಿ 450 ಎಲೆಕ್ಟ್ರಿಕ್ ಬಸ್ಸುಗಳನ್ನು ಹೊಂದುವ ಎನ್‌ಡಬ್ಲ್ಯೂಕೆಆರ್‌ಟಿಸಿಯ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ನಿರ್ವಹಿಸಲು 15 ಕೋಟಿ ರೂ. ವೆಚ್ಚದಲ್ಲಿ ಬಸ್ ಡಿಪೋಗಳನ್ನು ಆಧುನೀಕರಿಸಲು ನಿರ್ಧರಿಸಲಾಗಿದೆ” ಎಂದರು.
“9 ಕೋಟಿ ರೂ.ಗಳ ವೆಚ್ಚದಲ್ಲಿ 20 ನಾನ್ ಎಸಿ ಸ್ಲೀಪರ್ ಬಸ್ಸುಗಳು ಮತ್ತು 7 ಕೋಟಿ ರೂ.ಗಳ ವೆಚ್ಚದಲ್ಲಿ ನಾಲ್ಕು ಮಲ್ಟಿ ಆಕ್ಸಲ್ ಬಸ್ಸುಗಳನ್ನು ಖರೀದಿಸಲು ಎನ್‌ಡಬ್ಲ್ಯೂಕೆಆರ್‌ಟಿಸಿಗೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ‘ಶಕ್ತಿ’ ಯೋಜನೆಯನ್ನು ಪ್ರಾರಂಭಿಸಿದ ಬಳಿಕ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ದಿನಕ್ಕೆ 82 ಲಕ್ಷದಿಂದ 1.1 ಕೋಟಿ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲಾಗಿದ್ದು, 13,000 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ಹೇಳಿದರು.
ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾತನಾಡಿ, “ಶಕ್ತಿ ಯೋಜನೆ ಪ್ರಾರಂಭವಾದ ನಂತರ ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ದಿನಕ್ಕೆ 16 ಲಕ್ಷದಿಂದ 24 ಲಕ್ಷಕ್ಕೆ ಏರಿದೆ” ಎಂದರು.
ಇದೇ ವೇಳೆ ಅಪಘಾತ ರಹಿತ ಚಾಲನೆ ಮಾಡಿದ 242 ಚಾಲಕರಿಗೆ ಬೆಳ್ಳಿ ಪದಕ ಮತ್ತು ಅಪಘಾತ ವಿಮೆಯ ಚೆಕ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಇತರರು ಇದ್ದರು.