ಪ್ರಸ್ತುತ ಯುವಜನಾಂಗವು ಬಾಬು ಜಗಜೀವನ್ ರಾಂ ಅವರ ಸಿದ್ಧಾಂತಗಳನ್ನು ಅನುಸರಿಸಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಮಾದಿಗ ದಂಡೋರ ಎಂಆರ್‌ಪಿಎಸ್ ಉತ್ತರ ಕರ್ನಾಟಕದ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಹೇಳಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿರುವ ಇಂದಿರಾ ಗಾಜಿನಮನೆಯ ಆವರಣದಲ್ಲಿ ಧಾರವಾಡ ಜಿಲ್ಲಾ ಮಾದಿಗ ದಂಡೋರ ಎಂಆರ್‌ಪಿಎಸ್ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಹಸಿರುಕ್ರಾಂತಿಯ ಹರಿಕಾರ, ಕಾರ್ಮಿಕ ಕಾಯ್ದೆಗಳ ಶಿಲ್ಪಿ, ಭಾರತ ಕಂಡ ಅಪ್ರತಿಮ ರಾಜಕಾರಣಿಗಳಲ್ಲಿ ಅಗ್ರಗಣ್ಯ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಅವರ 117ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಕ್ಷಣೆ, ಕಾನೂನು, ಕಾರ್ಮಿಕ, ಸಂಚಾರ ಮತ್ತು ಸಂಪರ್ಕ ಇತ್ಯಾದಿ ಖಾತೆಗಳ ಸಚಿವರಾಗಿ ಬಾಬು ಜಗಜೀವನ್ ರಾಂ ಅವರು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳು ಅಪಾರ. ಪರಕೀಯರ ದಾಳಿಯನ್ನು ಸದೆಬಡಿದು, ಶತ್ರು ಸೈನ್ಯ ಶರಣಾಗುವಂತೆ ಮಾಡಿದ ಸ್ವತಂತ್ರ ಭಾರತದ ಪ್ರಪ್ರಥಮ ರಕ್ಷಣಾ ಮಂತ್ರಿ. ಅಲ್ಲದೆ ರಕ್ಷಣಾ ಇಲಾಖೆಯಲ್ಲಿ ಜಾತಿ ಆಧಾರಿತ ತುಕಡಿಗಳಲ್ಲಿ ಬೇರೆ ಜಾತಿಯವರನ್ನು ಸೇರಿಸುವಂತೆ ಮಾಡಿ ಸೈನ್ಯವು ಜಾತ್ಯತೀತ ಭಾವನೆಯುಳ್ಳದ್ದಾಗಿರಬೇಕೆಂದು ಯೋಚಿಸಿದ ದೂರದರ್ಶಿ ಬಾಬೂಜಿಯವರು” ಎಂದು ಸ್ಮರಿಸಿದರು.
“ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ “ಕನಿಷ್ಟ ಕೂಲಿ ಗೊತ್ತುವಳಿ ಶಾಸನ”ವನ್ನು ಜಾರಿಗೆ ತಂದರು. ಹರಿಜನರೇ ಹೆಚ್ಚಾಗಿರುವ ಕೃಷಿ ಕಾರ್ಮಿಕರಿಗೂ ಅಸಂಘಟಿತ ಕೂಲಿಕಾರರಿಗೂ ಇದು ಹೆಚ್ಚಿನ ಅನುಕೂಲ ಮಾಡಿತು. ಕಾರ್ಮಿಕರ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಇಎಸ್‌ಐ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ಆಹಾರ ಕ್ಷಾಮದಿಂದ ದೇಶ ಕಂಗೆಟ್ಟ ಸಂದರ್ಭದಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣಗಳು ದೊರೆಯುವಂತಹ ನೀತಿಗಳನ್ನು ಜಾರಿಗೆ ತಂದು ಹಸಿರುಕ್ರಾಂತಿಯ ಹರಿಕಾರರೆಂದು ಹೆಸರುವಾಸಿಯಾದರು” ಎಂದು ತಿಳಿಸಿದರು.
“ಬಾಬು ಜಗಜೀವನ್ ರಾಂ ಅವರ ಜೀವನವನ್ನು ಅಧ್ಯಯನ ಮಾಡಿ ಅವರ ಸಿದ್ಧಾಂತಗಳನ್ನು ತಿಳಿದು ಅನುಸರಿಸಿ ಇಂದಿನ ಯುವಜನಾಂಗವು ತಮ್ಮಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಸ್ತಿ ಪಂದ್ಯವಳಿ; ಬಾಲಕನನ್ನು ಸೋಲಿಸಿದ ಬಾಲಕಿ
ಧಾರವಾಡ ಜಿಲ್ಲಾ ಅಧ್ಯಕ್ಷ ಸತ್ಯನಾರಾಯಣ ಎಂ, ಕಾರ್ಯಾಧ್ಯಕ್ಷ ಗೋವಿಂದ ಬೆಲ್ಡೋಣಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ ಕನಮಕ್ಕಲ, ಹಿರಿಯ ಮುಖಂಡ ರಂಗನಾಯಕ ತಪೇಲ, ಯುವಘಟಕದ ಅಧ್ಯಕ್ಷರುಗಳಾದ ಸತ್ಯನಾರಾಯಣ ಸಾಕೆ, ಹರೀಶ ಅನಂತಪುರ, ಹಿರಿಯ ಸಮಾಜಸೇವಕರುಗಳಾದ ಸು ಕೃಷ್ಣಮೂರ್ತಿ, ಅಣ್ಣಪ್ಪ ಬಾಗಲಕೋಟ, ಪ್ರಕಾಶ ಗುಡಿಹಾಳ, ಅರುಣ ಹೊಸಮನಿ, ಪ್ರಸಾದ ಸೌದುಲ, ವೆಂಕಟೇಶ ಕೊಂಡಪಲ್ಲಿ ಸೇರಿದಂತೆ ಇತರರು ಇದ್ದರು.
