ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಕೂಲಿ ಕಾರ್ಮಿಕರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು, ರಾಜ್ಯಾದ್ಯಂತ ಮುಂಗಾರು ವಿಫಲವಾಗಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಅವಳಿ ಜಿಲ್ಲೆ ಹುಬ್ಬಳ್ಳಿ-ಧಾರವಾಡವನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ದೀಪಾ ಧಾರವಾಡ ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಮುಂಗಾರು ತಡವಾಗಿ ಪ್ರವೇಶ ಮಾಡಿತು. ತಡವಾದರೂ ಕೂಡ ಬಹುತೇಕ ಜಿಲ್ಲೆಗಳಲ್ಲಿ ಬಿತ್ತನೆ ಮಾಡಲಾಯಿತು. ಮಳೆಯಿಲ್ಲದೆ ಬೆಳೆ ನಷ್ಟವಾಗಿದೆ. ಕೆಲವೆಡೆ ಮತ್ತೊಮ್ಮೆ ಬಿತ್ತನೆ ಮಾಡಿಯೂ ಕೂಡ ರೈತರು ಮಳೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮುಂಗಾರುಮಳೆ ಕ್ಷೀಣವಾಗುತ್ತಿದ್ದು, ಬಿತ್ತಿದ ಬೆಳೆಯು ಒಣಗುತ್ತಿದೆ. ಸಾಲ ಮಾಡಿ ಬಿತ್ತನೆಗೆ ಖರ್ಚು ಮಾಡಿದ ಹಣ ವಾಪಸ್ ಬರುವಂತೆ ಕಾಣುತ್ತಿಲ್ಲ. ಈ ಪರಿಸ್ಥಿತಿಯನ್ನು ಮನಗಂಡ ರೈತರು ಕಂಗಾಲಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕೃಷಿ ಚಟುವಟಿಕೆ ಸಾಲ ಮಾಡದೆ ನಡೆಯುವುದೇ ಇಲ್ಲ. ಬೀಜ, ಗೊಬ್ಬರ ಇನ್ನಿತರೆ ಎಲ್ಲ ಒಳಸುರಿವುಗಳ ಬೆಲೆ ಗಗನಕ್ಕೇರಿದೆ. ಇದನ್ನೆಲ್ಲ ಸರಿದೂಗಿಸಲು ರೈತರು ಹೆಚ್ಚಿನ ಸಾಲಕ್ಕೆ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಮುಂಗಾರು ಮಳೆ ವೈಫಲ್ಯದಿಂದ 2022-23ನೇ ಸಾಲಿನಲ್ಲಿ 76 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಕೃಷಿ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ. ಇಷ್ಟೆಲ್ಲ ಆದರೂ ಸರ್ಕಾರ ಎಚ್ಚೆತ್ತುಕೊಳ್ಳದೆ, ಬರಗಾಲವೆಂದು ಘೋಷಿಸದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ” ಎಂದು ಆರೋಪಿಸಿದರು.
ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿ, “ದೇಶದ ಬೆನ್ನೆಲುಬು ಆಗಿರುವ ರೈತನ ಬೆನ್ನೆಲುಬೇ ಮುರಿಯುತ್ತಿದೆ. ದೇಶದ ಪ್ರಗತಿ ರೈತನ ಬದುಕಿನ ಮೇಲೆ ನಿಂತಿದೆ. ಹಾಗಾಗಿ ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು. ದೇಶದ ರೈತರು ಸರ್ಕಾರದ ಸಹಾಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಕೃಷಿ ಕಾರ್ಮಿಕರು, ಮನರೇಗಾ ಕೂಲಿ ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ಮನರೇಗಾ ಕೂಲಿ ಕಾರ್ಮಿಕರಿಗೆ ದುಡಿದ ಹಣ ಕೈ ಸೇರುತ್ತಿಲ್ಲ. ನಿತ್ಯವೂ ಕೂಲಿ ಮೇಲೆ ಜೀವನ ಮಾಡುವ ಕೋಟ್ಯಾಂತರ ಮನರೇಗಾ ಕೂಲಿ ಕಾರ್ಮಿಕರ ಬದುಕು ಹೇಳತೀರದು. ಕೆಲವೆಡೆ 2 ತಿಂಗಳ ಹಣ ಬಾಕಿ ಇದೆ. ಸಮರ್ಪಕವಾಗಿ ಕೆಲಸವನ್ನೂ ನೀಡುತ್ತಿಲ್ಲ. ಇಂತಹ ಬರ ಪರಿಸ್ಥಿತಿಯಲ್ಲಿ 50 ಮಾನವ ದಿನಗಳ ಕೆಲಸವನ್ನು ಹೆಚ್ಚುವರಿಯಾಗಿ ನೀಡಬೇಕೆಂದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಹೆಚ್ಚುವರಿ 50 ದಿನಗಳ ಕೆಲಸ ನೀಡಿಲ್ಲ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಒತ್ತಾಯ
ಕಾರ್ಯನಿರ್ವಾಹಕ ಅಧಿಕಾರಿ ಮನವಿ ಸ್ವೀಕರಿ ಮಾತನಾಡಿ, “ಕೂಡಲೇ ಪಿಡಿಒಗಳ ಸಭೆ ಕರೆದು, ಮನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗಳಾದ ನಿರಂತರ ಕೆಲಸ ನೀಡದಿರುವುದು, ಕೆಲಸ ನೀಡುವಲ್ಲಿ ವಿಳಂಬ ಮತ್ತು ಹೊಸ ಜಾಬ್ ಕಾರ್ಡ್ ನೀಡುವ ಸಮಸ್ಯೆಗಳು ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳಿದ್ದರು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದ್ದರು.
ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ, ಮಾರುತಿ ಪೂಜಾರ, ಮುತ್ತು ಇಂಚಲ, ಜಗದೀಶ ಪೂಜಾರ, ಬಸಪ್ಪ ದರೋಜಿ, ಮಂಜು ಬೆಣ್ಣಿ, ಫಕೀರಪ್ಪ ಬಾಗೋಡಿ, ರಸೂಲ ಜಮಾದಾರ್, ನಾರಯಣ ಮೇಗಾಣಿ, ಈರಪ್ಪ ಅಂಗಡಿ ಸೇರಿದಂತೆ ಇತರರು ಇದ್ದರು.