ಕೆಂದ್ರಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಜಿ ಘೋಷಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಜನರಿಗೆ ದ್ರೋಹ ಮಾಡಿದಂತೆ ಆಗಲಿದೆ. ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ, ಎಂದು ಹೇಳಿದರು.
ನೊಂದ ಜನರು ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯ ಹೊರತುಪಡಿಸಿದರೆ ಕುರುಬ ಸಮುದಾಯ ದೊಡ್ಡದು. ಆದರೆ, ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ, ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹೈಕಮಾಂಡ್ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ. ಶೇ.2ರಷ್ಟು ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಪಸಿದರು.
ಪ್ರಹ್ಲಾದ್ ಜೋಷಿ ಅವರು ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಅಲ್ಲದೆ, ನಮ್ಮ ಸಮುದಾಯವನ್ನು ಜೋಷಿ ತುಳಿದು ರಾಜಕಾರಣ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಪ್ರಹ್ಲಾದ್ ಜೋಷಿ ಅವರೇ ಕಾರಣ ಎಂದು ಅವರು ಆರೋಪಿಸಿದರು.
