ದಲಿತರ ಮೇಲಿನ ಹಲ್ಲೆಯನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ತಾಜ್ ಸುಲ್ತಾನಪೂರ್ ರಿಂಗ್ ರೋಡ್ ರಸ್ತೆ ತಡೆದು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆಯ ತಾಜ್‌ಸುಲ್ತಾನಪೂರದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಸಾಮಾಜಿಕ ಹೋರಾಟಗಾರ್ತಿ ಅಶ್ವಿನಿ ಮದನಕರ ಮಾತನಾಡಿ, ಮಿಚ್ಗೊರಿ ಕ್ರಾಸ್ ಬಳಿ ಗೌಂಡಿ ಕೆಲಸಕ್ಕೆಂದು ಮಹಿಳೆಯರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಕೊಲೆಯಾದ ಮಹಿಳೆಯರು ತಾಜಸುಲ್ತಾನಪೂರ ಗ್ರಾಮದ ಚೆಂದಮ್ಮ ಬಾಬುರಾವ್, ಕೆರೆ ಅಂಬಲಗಾ ಗ್ರಾಮದ ಶರಣಮ್ಮ ಅಣ್ಣಪ್ಪ ಗಡದನ ಎಂದು ತಿಳಿದುಬಂದಿದೆ ಎಂದರು.
ಘಟನೆ ನಡೆದು 24 ಗಂಟೆ ಕಳೆದರೂ ಇನ್ನೂ ಕೂಡ ಅಪರಾಧಿಗಳು ಯಾರೆಂದು ತಿಳಿದು ಬಂದಿಲ್ಲ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ದಲಿತ ಮಹಿಳೆಯರ ಕೊಲೆಯಾಗಿ 24 ಗಂಟೆ ಕಳೆದರೂ ಕಾರ್ಮಿಕ ಇಲಾಖೆಯಾಗಲಿ, ಸಮಾಜ ಕಲ್ಯಾಣ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಬಂದು ಸಾಂತ್ವನ ಹೇಳದೇ ದಲಿತರ ಕೊಲೆಯನ್ನು ಹಗುರವಾಗಿ ಪರಿಗಣಿಸಿದೆ. ಸರಿಯಾದ ತನಿಖೆಯಾಗಬೇಕು. ನೊಂದ ಕುಟುಂಬಕ್ಕೆ ಜೀವನೋಪಾಯಕ್ಕೆ ಒಂದು ಉದ್ಯೋಗ ನೀಡಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕು. ಈ ಪ್ರಕರಣವನ್ನು ಒಂದು ವೇಳೆ ಹಗುರವಾಗಿ ಪರಿಗಣಿಸಿದರೆ ತಕ್ಷಣದಲ್ಲೇ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.