ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ಏಳು ಕಡೆ ಇಂದಿರಾ ಕ್ಯಾಂಟೀನ್ ಆರಂಭಿಸಲು ತಯಾರಿ ನಡೆದಿದ್ದು, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ಐದು ಮತ್ತು ಧಾರವಾಡದಲ್ಲಿ ನಾಲ್ಕು ಒಟ್ಟು ಒಂಬತ್ತು ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ, ಧಾರವಾಡ ಹೊರತಾಗಿ ಇತರ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಇರಲಿಲ್ಲ.
ಈಗ, ಹುಬ್ಬಳ್ಳಿ ನಗರದಲ್ಲಿ ಎರಡು, ಕಲಘಟಗಿ, ಅಳ್ನಾವರ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣದಲ್ಲಿ ತಲಾ ಒಂದು ಕ್ಯಾಂಟೀನ್ ತೆರೆಯಲು ಯೋಜಿಸಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣದ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ನಿವೇಶನ ಗುರುತಿಸಿ ಕೇಂದ್ರ ಕಚೇರಿಗೆ ವಿವರ ಸಲ್ಲಿಸಿವೆ.
ರಾಜ್ಯದಲ್ಲಿ ಹೊಸದಾಗಿ 185 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜನವರಿ 2ರಂದು ಮಂಜೂರಾತಿ ಆದೇಶ ಹೊರಡಿಸಿತ್ತು.
ಇಂದಿರಾ ಕ್ಯಾಂಟೀನ್‌ನಲ್ಲಿ 5ರೂ.ಗೆ ಉಪಹಾರ, 10ರೂ.ಗೆ ಊಟ ದೊರೆಯುತ್ತದೆ. ಬೇರೆ ಊರುಗಳಿಂದ ಬರುವ ಜನರು, ವಿದ್ಯಾರ್ಥಿಗಳು ಈ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತಾರೆ. ಕಡಿಮೆ ದರದಲ್ಲಿ ಆಹಾರ ಸಿಗುವುದು ಅನುಕೂಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಇದನ್ನು ಓದಿದ್ದೀರಾ? ಎನ್‌ಡಿಎ ಗೆಲ್ಲುತ್ತದೆ ಎಂಬ ಸಮೀಕ್ಷೆಗಳಲ್ಲಿ ತಪ್ಪುಗಳಿವೆ; ವಾಸ್ತವದ ಬೆಳಕಿನಲ್ಲಿ ನೋಡುವ ಅಗತ್ಯವಿದೆ
ಕ್ಯಾಂಟೀನ್‌ಗಾಗಿ ನಿವೇಶನ ವಿಸ್ತೀರ್ಣ, ಮಣ್ಣು ಪರೀಕ್ಷೆ ವರದಿ ಮೂಲಸೌಕರ್ಯಗಳ ಬಗ್ಗೆ ಕೇಂದ್ರ ಕಚೇರಿಗೆ ವರದಿಯನ್ನು ಸಲ್ಲಿಸಲಾಗಿದೆ. ಬೆಂಗಳೂರಿನಿಂದ ಎಂಜಿನಿಯರ್‌ಗಳು ಬಂದು ಸ್ಥಳಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಿದ್ದಾರೆ. ಸ್ಥಳಕ್ಕೆ ಅವರು ಒಪ್ಪಿಗೆ ನೀಡಿದರೆ, ಕಾಮಗಾರಿ ಆರಂಭಿಸಲು ಅನುಮೋದನೆ ಸಿಗುತ್ತದೆ ಎಂದು ಇಂದಿರಾ ಕ್ಯಾಂಟೀನ್ ನಿರ್ವಹಣೆ ಜಿಲ್ಲಾ ನೋಡೆಲ್ ಅಧಿಕಾರಿಯಾಗಿರುವ ಬಿ.ಎಸ್. ರಮೇಶ್ ಮಾದ್ಯಮಗಳಿಗೆ ತಿಳಿಸಿದ್ದಾರೆ.