ಎನ್‌ಡಿಎ ಗೆಲ್ಲುತ್ತದೆ ಎಂಬ ಸಮೀಕ್ಷೆಗಳಲ್ಲಿ ತಪ್ಪುಗಳಿವೆ; ವಾಸ್ತವದ ಬೆಳಕಿನಲ್ಲಿ ನೋಡುವ ಅಗತ್ಯವಿದೆ

Date:

ಎನ್‌ಡಿಎ ಗೆಲ್ಲುತ್ತದೆ ಎಂಬ ಇಂಡಿಯಾ ಟುಡೇ- ಮೈ ಆಕ್ಸಿಸ್‌ ಅಲ್ಲ, ಸಿ ವೋಟರ್‌ ಸಂಸ್ಥೆ ಮಾಡುವ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯು ಅತ್ಯಂತ ತಪ್ಪಾದ ವಿಧಾನಗಳನ್ನು ಅಳವಡಿಸಿಕೊಂಡಿರುವುದು ಮತ್ತು ವೈಜ್ಞಾನಿಕ ಸಮೀಕ್ಷಾ ವಿಧಾನದಲ್ಲಿ ಮೂರ್ನಾಲ್ಕು ದೊಡ್ಡ ತಪ್ಪುಗಳನ್ನು ಎಸಗಿರುವುದು ಎದ್ದು ಕಾಣುತ್ತದೆ. ಹೀಗಾಗಿ ಈ ಸಮೀಕ್ಷೆಯ ಫಲಿತಾಂಶಗಳನ್ನು ವಾಸ್ತವದ ಬೆಳಕಿನಲ್ಲಿ ನೋಡುವ ಅಗತ್ಯವಿದೆ. ಅದನ್ನು ನೋಡಬೇಕಾದ ವಿಧಾನ, ಇಲ್ಲಿದೆ

ಲೋಕಸಭಾ ಚುನಾವಣೆಯ ಕುರಿತಂತೆ ಕಳೆದ ವಾರ ಎರಡು ಸಮೀಕ್ಷೆಗಳು ಹೊರಬಂದವು. ಇಂಡಿಯಾ ಟುಡೇ ಸಂಸ್ಥೆಯು ಸಾಮಾನ್ಯವಾಗಿ ಮೈ ಆಕ್ಸಿಸ್‌ ಜೊತೆಗೆ ಸೇರಿ ಮಾಡುವ ಚುನಾವಣೋತ್ತರ ಸಮೀಕ್ಷೆಗೆ ಹೆಚ್ಚು ವಿಶ್ವಾಸಾರ್ಹತೆ ಇರುವುದರಿಂದ, ಇಂಡಿಯಾ ಟುಡೇ ಸಮೀಕ್ಷೆಯು ಸ್ವಲ್ಪ ಹೆಚ್ಚು ಗಮನ ಸೆಳೆದಿದೆ. ಆದರೆ, ಈ ಸಮೀಕ್ಷೆಗಳ ವಿಧಾನದಲ್ಲೇ ದೊಡ್ಡ ಸಮಸ್ಯೆಯಿದ್ದು ಅವು ಬಿಜೆಪಿ ಪರವಾಗಿ ವಾಲಿರುವುದಕ್ಕೆ ಆ ವಿಧಾನದಲ್ಲಿನ ಸಮಸ್ಯೆಯೇ ಕಾರಣವೆಂಬುದು ಎದ್ದು ಕಾಣುತ್ತದೆ. ಈ ಸಮೀಕ್ಷೆಯನ್ನು ಮಾಡಿರುವುದು ಇಂಡಿಯಾ ಟುಡೇ– ಮೈ ಆಕ್ಸಿಸ್‌ ಅಲ್ಲ, ಸಿ ವೋಟರ್‌ ಸಂಸ್ಥೆ ಮಾಡುವ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯನ್ನು ಇಂಡಿಯಾ ಟುಡೇ ಪ್ರಕಟಿಸಿದೆ.

ಈದಿನ ಸಂಸ್ಥೆಯು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯು ಕರಾರುವಾಕ್ಕಾಗಿ ಬಂದಿದ್ದರಿಂದ ಮತ್ತು ಆ ಸಂದರ್ಭದಲ್ಲಿ ಸಮೀಕ್ಷೆಯ ವಿಜ್ಞಾನದ ಕುರಿತು ನಾವು ಸಾಕಷ್ಟು ಮಾತನಾಡಿದ್ದರಿಂದ ಹಲವರು ನಮ್ಮ ಅಭಿಪ್ರಾಯವನ್ನು ಕೇಳಿದರು. ನಮ್ಮ ಈ ಅನಿಸಿಕೆಗಳನ್ನು ಮುಂದಿಡುವಾಗ, ಈಗಾಗಲೇ ಶ್ರೇಯಸ್‌ ಸರ್ದೇಸಾಯಿ (ಹಿಂದೆ ಸಿಎಸ್‌ಡಿಎಸ್‌ನಲ್ಲಿದ್ದ ಪರಿಣಿತರು) ಮುಂದಿಟ್ಟಿರುವ ಸಂಗತಿಗಳನ್ನೂ ಬಳಸಿಕೊಂಡಿದ್ದೇವೆ.

  1. ಟೆಲಿಫೋನ್‌ ಸರ್ವೇ ಮುಖಾಂತರ ಸಾಮಾನ್ಯವಾಗಿ ಬಿಜೆಪಿಯ ಕುರಿತು ಕಡಿಮೆ ಒಲವು ಇರುವ ನಾಲ್ಕನೇ ಒಂದು ಭಾಗದಷ್ಟು ಜನರನ್ನು ಸಮೀಕ್ಷೆಯಲ್ಲಿ ಒಳಗೊಂಡೇ ಇಲ್ಲ.

ಇಂಡಿಯಾ ಟುಡೇ ಮ್ಯಾಗಜೀನ್‌ನಲ್ಲಿ ಸಿವೋಟರ್‌ ಪ್ರಕಟಿಸಿದ ಸಮೀಕ್ಷೆಯನ್ನು CATI (Computer Assisted Telephonic Interviews of adults) ಅಥವಾ ವಯಸ್ಕರ ಜೊತೆಗೆ ನಡೆಸಿದ ಕಂಪ್ಯೂಟರ್ ಟೆಲಿಫೋನಿಕ್ ಸಂದರ್ಶನಗಳನ್ನು ಆಧರಿಸಿ ಮಾಡಲಾಗಿದೆ. ಆದರೆ ಇಡೀ ಸಮೀಕ್ಷೆಯನ್ನು ಕೇವಲ ಫೋನ್ ಮೂಲಕವೇ ನಡೆಸಲಾಗಿದೆಯೇ ಹೊರತು ಕ್ಷೇತ್ರಕಾರ್ಯ ನಡೆಸಿಲ್ಲ. ಆದ್ದರಿಂದ, ಎಲ್ಲಾ ಸಮುದಾಯಗಳನ್ನು ಒಳಗೊಳ್ಳಲಾಗಿದೆ ಎಂದು ಬಿಂಬಿಸಲಾಗಿರುವ ಇಂಡಿಯಾ ಟುಡೆಯ ಈ ಸಮೀಕ್ಷೆಯು ತನ್ನ ‘ಮೂಡ್ ಆಫ್ ದಿ ನೇಷನ್’ ಎಂಬ ಶೀರ್ಷಿಕೆಗೆ ವಿರುದ್ಧವಾಗಿ, ಭಾರತದಲ್ಲಿ ಮೊಬೈಲ್ ಫೋನ್ ಹೊಂದಿರುವ ವಯಸ್ಕರ ಮನಸ್ಥಿತಿಯನ್ನು ಮಾತ್ರ ಬಳಸಿಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಸುಮಾರು 70-75% ರಷ್ಟು ಜನ ಮೊಬೈಲ್‌ ಬಳಕೆದಾರರಿದ್ದಾರೆ. ಉದಾಹರಣೆಗೆ, 2020-21ರ ಎನ್‌ಎಸ್‌ಎಸ್‌ 78ನೇ ಸುತ್ತಿನ ವರದಿಯಲ್ಲಿ, 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 72.7% ಜನರು ಸಕ್ರಿಯ ಸಿಮ್ ಕಾರ್ಡ್‌ನೊಂದಿಗೆ ಮೊಬೈಲ್ ಫೋನ್ ಬಳಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಈ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ 67.8% ಮತ್ತು ನಗರ ಪ್ರದೇಶಗಳಲ್ಲಿ 83.7% ರಷ್ಟಿದೆ. ಅಂತೆಯೇ, 2022ರ ವರ್ಷಾರಂಭದಲ್ಲಿ ‘ಭಾರತದಲ್ಲಿ ಮಾಧ್ಯಮ: ಪ್ರವೇಶಿಕೆ, ಅಭ್ಯಾಸ, ಕಾಳಜಿ ಮತ್ತು ಪರಿಣಾಮಗಳು’ (Media in India: Access, Practices, Concerns and Effects) ಎಂಬ ಶೀರ್ಷಿಕೆಯಡಿಯಲ್ಲಿ ಲೋಕನೀತಿ-ಸಿಎಸ್‌ಡಿಎಸ್ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು 15ಕ್ಕಿಂತ ಮೇಲ್ಪಟ್ಟ ವಯಸ್ಸಿನ ಭಾರತೀಯರಲ್ಲಿ 69% ರಷ್ಟು ಜನ ತಮ್ಮದೇ ಆದ ಮೊಬೈಲ್ ಫೋನನ್ನು ಹೊಂದಿದ್ದಾರೆ ಎಂಬುದನ್ನು ಕಂಡುಹಿಡಿದಿದೆ. ಸಿಎಸ್‌ಡಿಎಸ್ ಸಮೀಕ್ಷೆಯಾಗಿ 2 ವರ್ಷಗಳು ಕಳೆದಿವೆ ಎಂದು ಅಂದುಕೊಂಡರೂ, ಸದ್ಯ ಈ ಸಂಖ್ಯೆ 75% ಮತ್ತು 80% ರ ನಡುವೆ ಇರಬಹುದು. ಇದರರ್ಥ ಇನ್ನೂ ಸುಮಾರು 20-25% ಭಾರತೀಯ ವಯಸ್ಕರು ತಮ್ಮದೇ ಆದ ಫೋನ್ ಹೊಂದಿಲ್ಲ. ಇದಲ್ಲದೆ, NSS ನಂತೆ, CSDS ಸಮೀಕ್ಷೆಯು ಸ್ಥಳೀಯ ಮಟ್ಟದಲ್ಲಿ ಫೋನ್ ಬಳಕೆದಾರರಲ್ಲಿರುವ ಪ್ರಮುಖ ವ್ಯತ್ಯಾಸಗಳನ್ನು ಕಂಡುಹಿಡಿದಿದೆ. ಒಟ್ಟಾರೆಯಾಗಿ, ನಗರ ಪ್ರದೇಶಗಳಲ್ಲಿ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದವರಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಜನ ತಮ್ಮದೇ ಆದ ಮೊಬೈಲ್ ಫೋನ್ ಹೊಂದಿಲ್ಲ ಎಂದು ವರದಿ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಇಲ್ಲದವರ ಸಂಖ್ಯೆ ಸುಮಾರು ಮೂರನೇ ಒಂದು ಭಾಗದಷ್ಟು ಹೆಚ್ಚಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದೇ ರೀತಿ, ವಯೋಮಾನ, ಲಿಂಗ, ಆರ್ಥಿಕ ವರ್ಗ, ಶಿಕ್ಷಣ, ಜಾತಿ-ಸಮುದಾಯ ಮತ್ತು ಪ್ರದೇಶಗಳ ನಡುವೆ ಫೋನ್ ಬಳಕೆಯಲ್ಲಿ ಪ್ರಮುಖ ವ್ಯತ್ಯಾಸಗಳಿವೆ. ವೃದ್ಧರು, ಮಹಿಳೆಯರು, ಬಡವರು, ಅನಕ್ಷರಸ್ಥರು, ದಲಿತರು ಮತ್ತು ಆದಿವಾಸಿಗಳಲ್ಲಿ ಮೊಬೈಲ್ ಫೋನ್ ಬಳಕೆ ಕಡಿಮೆ ಇರುವುದು ಕಂಡುಬಂದಿದೆ. ಇವುಗಳಲ್ಲಿ ಬಹುತೇಕ ವರ್ಗ/ಸಮುದಾಯಗಳು ಇತರ ವರ್ಗಗಳಿಗಿಂತ ಬಿಜೆಪಿಗೆ ಕಡಿಮೆ ಬೆಂಬಲವನ್ನು ನೀಡುತ್ತವೆ. ಆದ್ದರಿಂದ ಬಿಜೆಪಿ/ಎನ್‌ಡಿಎಗೆ (45%) ಇಂಡಿಯಾ ಟುಡೇ ಸಮೀಕ್ಷೆ ನೀಡಿದ ಮತ ಹಂಚಿಕೆಯ ಅಂದಾಜು ತಪ್ಪುಅಂದಾಜು ಆಗಿದೆ. ಇನ್ನೂ ಒಂದು ಆಶ್ಚರ್ಯಕರ ಸಂಗತಿ ಇದೆ. 2022 ರಲ್ಲಿ ಸಿಎಸ್‌ಡಿಎಸ್ ಮಾಧ್ಯಮ ಸಮೀಕ್ಷೆಯಲ್ಲಿ ಮತ ಯಾರಿಗೆ ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಫೋನ್ ಬಳಕೆ ಮಾಡುವ ವಯಸ್ಕರಲ್ಲಿ ಬಿಜೆಪಿಗೆ 41% ಮತ ಹಾಕುತ್ತೇವೆಂದು ಹೇಳಿದ್ದರೆ, ಫೋನ್ ಇಲ್ಲದ ವಯಸ್ಕರಲ್ಲಿ ಬಿಜೆಪಿ ಮೇಲೆ ಒಲವು 6% ಅಂಕಗಳು ಕಡಿಮೆ ಇದೆ (35%) ಎಂಬುದು ಕಂಡುಬಂದಿತ್ತು!

ಈದಿನ ಸಂಸ್ಥೆಯು ಟೆಲಿಫೋನಿಕ್‌ ಸರ್ವೇಗಳನ್ನು ನಡೆಸುವುದಿಲ್ಲ. ಖುದ್ದಾಗಿ ಮುಖಾಮುಖಿ ಸರ್ವೇ ಮಾತ್ರ ನಡೆಸುತ್ತದೆ.

2. ಟೆಲಿಫೋನ್‌ ಸಮೀಕ್ಷೆಯಲ್ಲೂ ಯಾವ ರೀತಿಯ Sampling ಮಾಡಿದೆವು ಎಂಬುದರಲ್ಲೂ ಇರುವ ದೊಡ್ಡ ಸಮಸ್ಯೆ

ಸರ್ವೇ ನಡೆಸುವ ಯಾವ ರೀತಿಯಲ್ಲಿ ಉತ್ತರ ನೀಡಬೇಕಾದ ಜನರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. Scientific random sampling ಮಾಡಿದಾಗ ಮತ್ತು Sample size ಅಗತ್ಯವಿರುವಷ್ಟು ಪ್ರಮಾಣದಲ್ಲಿ ಇದ್ದಾಗ ಒಂದು ಸೋಜಿಗದ ಸಂಗತಿಯನ್ನು ಕಾಣುತ್ತೇವೆ. ಅಂದರೆ ನಾವು ಉತ್ತರ ನೀಡಬೇಕಾದ ಜನರನ್ನು ಜಾತಿ, ಲಿಂಗ, ವಯಸ್ಸು ಇತ್ಯಾದಿಗಳ ಮೂಲಕ ಆಯ್ಕೆ ಮಾಡಿಕೊಳ್ಳುವುದಿಲ್ಲ. ಮತದಾರರ ಪಟ್ಟಿಯನ್ನು ಆಧರಿಸಿ ವೈಜ್ಞಾನಿಕ ವಿಧಾನದ ಮೇಲೆ ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ, ಅಂತಿಮವಾಗಿ ನೋಡಿದರೆ ರಾಜ್ಯದಲ್ಲಿ ಎಷ್ಟು ಭಾಗ ಯಾವ್ಯಾವ ಜಾತಿ/ಧರ್ಮ/ಲಿಂಗ/ವಯೋಮಾನದ ಜನರು ಇರುತ್ತಾರೋ, ಹೆಚ್ಚು ಕಡಿಮೆ ಅಷ್ಟೇ ಪ್ರಮಾಣದಲ್ಲಿ ಆಯಾ ಸಮುದಾಯದವರನ್ನು ನಮ್ಮ ಗಣತಿದಾರರು ಮಾತಾಡಿಸಿರುವುದು ಕಂಡು ಬರುತ್ತದೆ. ಸಮೀಕ್ಷೆಯೊಂದು ಸರಿಯಾಗಿ ನಡೆದಿದೆ ಎನ್ನುವುದಕ್ಕೆ ಅದೂ ಒಂದು ಮಾನದಂಡ. ಕೆಲವೊಮ್ಮೆ ಹಾಗಾಗುವುದಿಲ್ಲ. ಉದಾಹರಣೆಗೆ, ಅಂತಿಮವಾಗಿ ತೆರೆದು ನೋಡಿದರೆ ಶೇ.12ರಷ್ಟು ಪರಿಶಿಷ್ಟ ಜಾತಿಯವರನ್ನು ನಾವು ಮಾತಾಡಿಸಿರುತ್ತೇವೆ. ಆದರೆ ರಾಜ್ಯದಲ್ಲಿ ಶೇ.17ರಷ್ಟು ಪ.ಜಾತಿಯವರು ಇರುತ್ತಾರೆ ಎಂದಿಟ್ಟುಕೊಳ್ಳಿ ಅಥವಾ ಶೇ.49ರಷ್ಟು ಮಹಿಳೆಯರು ಇರುತ್ತಾರೆ, ಆದರೆ ನಾವು ಶೇ.40ರಷ್ಟು ಮಾತ್ರ ಮಹಿಳೆಯರನ್ನು ಮಾತಾಡಿಸಿರುತ್ತೇವೆ ಎಂದಿಟ್ಟುಕೊಳ್ಳಿ. ಆಗ ನಾವು ಆ ಸಮುದಾಯದವರ ಅನಿಸಿಕೆಯನ್ನು ಪ್ರಮಾಣಾತ್ಮಕವಾಗಿ ಹಿಗ್ಗಿಸಿ ಲೆಕ್ಕ ಹಾಕಬೇಕಿರುತ್ತದೆ.

ಇಲ್ಲಿ ಇಂಡಿಯಾ ಟುಡೇ ಮತ್ತು ಸಿವೋಟರ್ ತಮ್ಮ ವಿಧಾನದ ಟಿಪ್ಪಣಿಯಲ್ಲಿ ತಮ್ಮ ಡೇಟಾವನ್ನು ಲಿಂಗ, ವಯಸ್ಸು, ಶಿಕ್ಷಣ, ಆದಾಯ, ಧರ್ಮ, ಜಾತಿ ಮತ್ತು ಕಳೆದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳ ವೋಟಿಂಗ್‌ ಮಾಹಿತಿ ಸೇರಿದಂತೆ ಜನಗಣತಿಯ ಪ್ರೊಫೈಲ್‌ ಜೊತೆಗೆ ತುಲನೆ ಮಾಡಿ ನೋಡಲಾಗಿದೆ ಎಂದು ಉಲ್ಲೇಖಿಸಿವೆ. ಆದರೆ, ಎಷ್ಟು ಪ್ರಮಾಣದಲ್ಲಿ ಯಾರ್‍ಯಾರನ್ನು ಮಾತಾಡಿಸಲಾಯಿತು ಎಂಬ ಬಗ್ಗೆಯಾಗಲೀ, ಯಾವ್ಯಾವ ಸಮುದಾಯದವರ ಲೆಕ್ಕವನ್ನು ಪ್ರಮಾಣಾತ್ಮಕವಾಗಿ ಹಿಗ್ಗಿಸಲಾಯಿತು ಎಂಬ ಬಗ್ಗೆಯಾಗಲೀ ಏನನ್ನೂ ಹೇಳುವುದಿಲ್ಲ.

ಉದಾಹರಣೆಗೆ, ಕಳೆದ ವಿಧಾನಸಭೆಯ ಈದಿನದ ಸರ್ವೇಯನ್ನೇ ನೋಡುವುದಾದರೆ, ಅದರಲ್ಲಿ ನಾವು ಶೇ.45ರಷ್ಟು ಮಹಿಳೆಯರನ್ನೂ, ಶೇ.55ರಷ್ಟು ಪುರುಷರನ್ನೂ ಮಾತಾಡಿಸಿದ್ದೆವು. ಆದರೆ, ರಾಜ್ಯದ ಜನಸಂಖ್ಯೆಯಲ್ಲಿ ಮಹಿಳೆಯರು ಶೇ.49 ಮತ್ತು ಪುರುಷರು ಶೇ.51ರಷ್ಟು ಇದ್ದಾರೆ. ಆದರೂ ನಾವು ಮಹಿಳೆಯರ ಅನಿಸಿಕೆಗೆ ಶೇ.4ರಷ್ಟು ಹೆಚ್ಚುವರಿ ಮತ್ತು ಪುರುಷರ ಅನಿಸಿಕೆಯನ್ನು ಶೇ.4ರಷ್ಟು ಕಡಿಮೆ ಮಾಡಲಿಲ್ಲ. ಏಕೆಂದರೆ ಮಹಿಳೆಯರ ಮತದಾನದ ಪ್ರಮಾಣವೇ ಕಡಿಮೆ ಇರುವ ಸಾಧ್ಯತೆ ಇದೆ. ಆದರೆ, ಇಂಡಿಯಾ ಟುಡೇ – ಸಿವೋಟರ್‌ ಟೆಲಿಫೋನಿಕ್‌ ಸರ್ವೆಯಲ್ಲಿ ಯಾರ ಮತ ಲೆಕ್ಕಕ್ಕೇ ಬಂದಿಲ್ಲ ಎಂದರೆ, ಯಾರು ಅತ್ಯಂತ ಹೆಚ್ಚು ಈ ದೇಶದಲ್ಲಿ ಮತದಾನ ಮಾಡುತ್ತಾರೋ ಅವರದ್ದು.

ಅಷ್ಟೆ ಅಲ್ಲದೇ, ಅವರ ಸಮೀಕ್ಷೆಯ ಅಂತಿಮ ವೋಟರ್ ಪ್ರೊಫೈಲ್ ಬಗ್ಗೆ ಮಾಹಿತಿಯನ್ನೇ ಅವರು ನೀಡಿಲ್ಲ. ಫೋನ್ ಸಮೀಕ್ಷೆಗಳ ಜನಸಂಖ್ಯಾ ಮಿತಿಗಳನ್ನು ಗಮನಿಸಿದರೆ, ಸರ್ವೇ ಏಜೆನ್ಸಿಯು ಸಮೀಕ್ಷೆಗೆ ಪ್ರತಿಕ್ರಿಯಿಸಿದ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ಜನರ ಶೇಕಡಾವಾರು ಅಂಕಿಅಂಶವನ್ನು ಅಂತಿಮ ಮಾದರಿಯಲ್ಲಿ ಟೇಬಲ್/ಚಾರ್ಟ್‌ನಲ್ಲಿ ಒದಗಿಸಬೇಕು. ಇದು ಸಮೀಕ್ಷೆಯ ಗುಣಮಟ್ದದ ಬಗ್ಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಸಿಎಸ್‌ಡಿಎಸ್ ನಂತಹ ಸರ್ವೇ ಏಜೆನ್ಸಿಗಳು ಇಂಥವನ್ನು ತಪ್ಪದೇ ಮಾಡುತ್ತವೆ. ಇದಲ್ಲದೆ, ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂಡಿಯಾ ಟುಡೇ-ಸಿವೋಟರ್ ರಾಜ್ಯ ಮಟ್ಟದಲ್ಲೂ ಮತ ಹಂಚಿಕೆ ಮತ್ತು ಸೀಟು ಹಂಚಿಕೆಯ ಬಗ್ಗೆ ಅಂದಾಜು ನೀಡಿರುವುದರಿಂದ, ಇದರಲ್ಲಿ ಪಾರದರ್ಶಕತೆ ಇರುವುದು ಹೆಚ್ಚು ಅಗತ್ಯವಾಗಿತ್ತು. ರಾಜ್ಯ ಮಟ್ಟದಲ್ಲಿ ಅಲ್ಲದಿದ್ದರೂ, ಅಂತಹ ಪ್ರೊಫೈಲ್ ಅನ್ನು ಕನಿಷ್ಠ ಪ್ರಾದೇಶಿಕ ಮಟ್ಟಕ್ಕೆ (ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ) ತರಬೇಕು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ

ಹಲವು ರಾಜ್ಯಗಳಲ್ಲಿ (ಉದಾಹರಣೆಗೆ ಕರ್ನಾಟಕದಂತಹ ರಾಜ್ಯಗಳಲ್ಲಿ) ಎರಡು ಮೈತ್ರಿಕೂಟಗಳ ನಡುವೆ (ಕಾಂಗ್ರೆಸ್‌ ವರ್ಸಸ್‌ ಜೆಡಿಎಸ್‌-ಬಿಜೆಪಿ ಮೈತ್ರಿ) ಹತ್ತಿರದ ಮತ್ತು ನೇರ ಪೈಪೋಟಿಯಿರುವಾಗ ಶೇ.2ರಷ್ಟು ವ್ಯತ್ಯಾಸವೂ ಸಹಾ ಹತ್ತರಿಂದ ಹದಿನೈದು ಸೀಟುಗಳ ವ್ಯತ್ಯಾಸ ತಂದುಬಿಡಬಹುದು.

  1. ಡಿಸೆಂಬರ್-ಜನವರಿ ಸಮೀಕ್ಷೆಯನ್ನು ಆಗಸ್ಟ್‌ ಸಮೀಕ್ಷೆಯ ಜೊತೆಗೆ ಬೆಸೆದು ನೋಡುವುದು – ಸೀಟು ಹಂಚಿಕೆಯ ದೃಷ್ಟಿಯಿಂದ ಸರಿಯಲ್ಲ

ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಮತ ಹಂಚಿಕೆ ಮತ್ತು ಸೀಟು ಹಂಚಿಕೆಯ ಬಗ್ಗೆ ಒಳನೋಟದ ಲೆಕ್ಕಾಚಾರ ಮಾಡಲು ಡಿಸೆಂಬರ್ 15, 2023 ಮತ್ತು ಜನವರಿ 28, 2024ರ ನಡುವೆ ಸಂಗ್ರಹಿಸಿದ ಸುಮಾರು 36,000 ಸಂದರ್ಶನಗಳ ಮಾದರಿಯನ್ನು ಬಳಸಿರುವುದಾಗಿ ಹೇಳಿಕೊಂಡಿದೆ. ಅಷ್ಟೆ ಆಗಿದ್ದರೆ, ಇದೇ ಸಂದರ್ಭದಲ್ಲಿ ದೇಶದಲ್ಲಿ ಆದ ಘಟನೆಗಳ ಪ್ರಭಾವ ಹೆಚ್ಚಿರುತ್ತದೆ ಎಂಬುದನ್ನು ಹೊರತುಪಡಿಸಿದರೆ ದೊಡ್ಡ ಸಮಸ್ಯೆಯಿಲ್ಲ. ಆದರೆ ಅದರ ಜೊತೆಗೆ ಆಗಸ್ಟ್ 2023 ರಿಂದ ”ರೆಗ್ಯುಲರ್ ಟ್ರ್ಯಾಕರ್ ಡೇಟಾ”ದಿಂದ ಸಂಗ್ರಹಿಸಲಾದ 1.13 ಲಕ್ಷ ಸಂದರ್ಶನಗಳನ್ನು ಇದರ ಜೊತೆಗೆ ಬೆಸೆಯಲಾಗಿದೆ. ಇದು ಮೂರನೇ ವೈಧಾನಿಕ ಸಮಸ್ಯೆಯನ್ನು ಮುಂದೆ ತರುತ್ತದೆ. ಟ್ರೆಂಡ್‌ ಬದಲಾಗಿದೆ ಎಂದು ಹೇಳಲು ಈ ರೀತಿಯ ದೀರ್ಘಾವಧಿಯ ಸಮೀಕ್ಷೆಗಳನ್ನು ಗಣನೆಗೆ ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ, ಮತ ಮತ್ತು ಸೀಟು ಹಂಚಿಕೆಗಳನ್ನು ನಿರ್ಧರಿಸಲು 5-6 ತಿಂಗಳ ದೀರ್ಘಾವಧಿಯ ಸಂದರ್ಶನಗಳ ಬಳಕೆ ಅಸಂಬದ್ದ.

  1. ಟೆಲಿಫೋನ್‌ ಸರ್ವೆಯಲ್ಲಿ 20-25 ಪ್ರಶ್ನೆಗಳು ಕೇಳಿದರೆ, ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ.

ಇನ್ನೂ ಒಂದು ದೊಡ್ಡ ಸಮಸ್ಯೆ ಈ ಸಮೀಕ್ಷೆಯಲ್ಲಿ ಇದೆ. ಅದೇನೆಂದರೆ, ಇಂಡಿಯಾ ಟುಡೇ ಮ್ಯಾಗಜೀನ್‌ನಲ್ಲಿ ಪ್ರಕಟವಾದ ವರದಿಯನ್ನು ನೋಡಿದಾಗ, MOTN ನ ಈ ಸುತ್ತಿನಲ್ಲಿ ಮತದಾರರಿಗೆ 20-25 ಪ್ರಶ್ನೆಗಳನ್ನು ಕೇಳಲಾಗಿದೆ. ಖುದ್ದಾಗಿ ಭೇಟಿ ಮಾಡಿದಾಗಲೇ 20 ಪ್ರಶ್ನೆಗಳನ್ನು ದಾಟುತ್ತಿದ್ದ ಹಾಗೆ ಗಣತಿದಾರರು ಮತ್ತು ಉತ್ತರ ನೀಡುತ್ತಿರುವ ಮತದಾರರು ಇಬ್ಬರೂ ಆತುರಕ್ಕೆ ಬಿದ್ದಿರುತ್ತಾರೆ. ಇನ್ನು ಸಾಕು ಎಂಬ ಪರಿಸ್ಥಿತಿ ಶುರುವಾಗಿರುತ್ತದೆ. ಆದರೆ ಫೋನ್ ಮೂಲಕ 25 ಪ್ರಶ್ನೆಗಳಿಗೆ ಉತ್ತರಿಸಲು ಕೇಳಿದಲ್ಲಿ, ಉತ್ತರಿಸುವವರು ತಮ್ಮ ಫೋನಿನಲ್ಲಿ 1, 2, 3, 4 ಹೀಗೆ ಒತ್ತುವಷ್ಟು ವ್ಯವಧಾನ ಹೊಂದಿರುವುದಿಲ್ಲ. ಫೋನ್ ಸಮೀಕ್ಷೆಗಳಲ್ಲಿ ಅಂತಹ ದೀರ್ಘ ಸಂದರ್ಶನಗಳನ್ನು ನಡೆಸಲು ಸಾಧ್ಯವಿಲ್ಲ. ಇದರಿಂದ ಡೇಟಾದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಇವೆಲ್ಲಾ ಕಾರಣಗಳಿಂದ ಮೇಲಿನ ಸಮೀಕ್ಷೆಯು ಅತ್ಯಂತ ತಪ್ಪಾದ ವಿಧಾನಗಳನ್ನು ಅಳವಡಿಸಿಕೊಂಡಿರುವುದು ಮತ್ತು ವೈಜ್ಞಾನಿಕ ಸಮೀಕ್ಷಾ ವಿಧಾನದಲ್ಲಿ ಮೂರ್ನಾಲ್ಕು ದೊಡ್ಡ ತಪ್ಪುಗಳನ್ನು ಎಸಗಿರುವುದು ಎದ್ದು ಕಾಣುತ್ತದೆ. ಹೀಗಾಗಿ ಈ ಸಮೀಕ್ಷೆಯ ಫಲಿತಾಂಶಗಳನ್ನು ಮೇಲಿನ ಸಂಗತಿಗಳ ಬೆಳಕಿನಲ್ಲಿ ನೋಡುವುದು ಅಗತ್ಯವೆಂದು ನಾವು ಭಾವಿಸುತ್ತೇವೆ.

-ಡಾ.ವಾಸು ಎಚ್‌.ವಿ., ಭರತ್‌ ಹೆಬ್ಬಾಳ್‌

(ಇಬ್ಬರೂ ಸಹಾ ಈದಿನ.ಕಾಮ್‌ನ ಸಮೀಕ್ಷೆಯಲ್ಲಿ ಆರಂಭದಿಂದಲೂ ತೊಡಗಿಸಿಕೊಂಡಿರುವವರು)

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಗೋದಿ ಮೀಡಿಯಾಗಳು ಪ್ರಚಾರ ಮಾಡುತ್ತಿರುವುದು ಮೂಡ್ ಆಫ್ ನೇಶನ್ ಅಲ್ಲ,,,, ಮೂಡ್ ಆಫ್ ಸೂಟ್ಕೇಸ್, ಚುನಾವಣೆ ಪ್ರಚಾರವನ್ನು ಗುತ್ತಿಗೆ ಪಡೆದಿರುವಂತೆ ಚರ್ಚೆ ರೂಪಿಸುವರು,, ಕಾಂಗ್ರೆಸ್ ನ್ಯಾಯ ಯಾತ್ರೆಯಲ್ಲಿ ಜನಜಂಗುಳಿ ನೋಡಿ ಭಾಳಾ ಚಿಂತೆ ಆಗಿ ಹೊಸಾ ಹೊಸಾ ನಾಟಕಗಳನ್ನು ಮಾರ್ಕೆಟಿಗೆ ದಬ್ಬುವರು,,, ದಿಲ್ಲಿ ದರ್ಬಾರಿನ ನೆರೆಟಿವ್ ಪುಂಗ್ಲಿಲ್ಲಾಂದ್ರೆ, ದಿಲ್ಲಿ ಬಾದಶಾ ಇವರ ವೈರ್ ಕಟ್ ಮಾಡಿಬಿಡಬಹುದು,,
    ಮಾರಿಕೊಂಡ , ಕೂಗುಮಾರಿ ಮಾಧ್ಯಮಗಳು ಹತ್ತು ವರ್ಷಗಳಲ್ಲಿ
    ಎಂದಾದರೂ ವಾಸ್ತವ ಚಿತ್ರಣ ಕೊಟ್ಟಿರುವರಾ,,,,

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ

"ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ...

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಪ್ರಕರಣ ಮುಚ್ಚಿಹಾಕಲು ಸರ್ಕಾರದಿಂದ ನಿರ್ದೇಶನ: ಆರ್‌ ಅಶೋಕ್‌ ಆರೋಪ

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ, ಬಹು ಸಂಖ್ಯಾತರ ಮೇಲೆ...

ಜೂ.15ರೊಳಗೆ ಮುಖ್ಯ ಕಚೇರಿಯಲ್ಲಿನ ಒತ್ತುವರಿ ಜಾಗ ಖಾಲಿ ಮಾಡಿ: ಎಎಪಿಗೆ ಸುಪ್ರೀಂ ಕೋರ್ಟ್ ಆದೇಶ

ಎಎಪಿ ಪಕ್ಷ ತನ್ನ ಮುಖ್ಯ ಕಚೇರಿಯಲ್ಲಿ ದೆಹಲಿ ಹೈಕೋರ್ಟ್‌ನ ಜಾಗವನ್ನು ಒತ್ತುವರಿ...

ದೇವರು-ಧರ್ಮದ ಹೆಸರಲ್ಲಿ ಮರುಳು ಮಾಡಿ ನಾವು ಅಧಿಕಾರ ನಡೆಸಲ್ಲ: ಸಿದ್ದರಾಮಯ್ಯ

ನಾವು ನಿಮ್ಮನ್ನು ದೇವರು-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ. ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ...