ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಒಂದು ರೀತಿಯಲ್ಲಿ, ಅಧಿಕಾರದಲ್ಲಿ ಇಲ್ಲದಿದ್ದಾಗ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ ಎಂದು ಶ್ರೀರಾಮಸೇನೆ ಆಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಆರೋಪಿಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಲಾಗಿತ್ತು. ಆ ವೇಳೆ, ರಾತ್ರಿ 10 ಗಂಟೆ ಒಳಗೆ ಮೆರವಣಿಗೆ ಮುಗಿಸಲು ಸಾಧ್ಯವಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದರು.
ಅವರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜು ಖಾನಪ್ಪನವರ, “ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ (ಕಳೆದ ವರ್ಷ) ರಾತ್ರಿ 10 ಗಂಟೆ ಒಳಗೆ ಗಣೇಶ ವಿಸರ್ಜನೆ ಮೆರವಣಿಗೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಒತ್ತಡ ಹಾಕಿದ್ದರು. ಆದರೆ, ಈ ವರ್ಷ ರಾತ್ರಿ 10 ಗಂಟೆ ಒಳಗೆ ಮೆರವಣಿಗೆ ಮುಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜೋಶಿ ಅವರು ಅಧಿಕಾರದಲ್ಲಿದ್ದಾಗ ಒಂದು ರೀತಿ, ಇಲ್ಲದಿದ್ದಾಗ ಇಂದು ರೀತಿಯ ಹೇಳಿಕೆ ನೀಡುತ್ತಾರೆ. ಇದು ಅವರ ದ್ವಿಮುಖ ನೀತಿಯನ್ನು ತೋರುತ್ತದೆ” ಎಂದು ಹೇಳಿದ್ದಾರೆ.
“ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾಸೆಗೆ ಹೀಗೆ ಮಾಡುತ್ತಿರುವುದು ಸರಿಯಲ್ಲ. ರಾಜಕಾರಣಿಗಳಿಂದಲೇ ಹಿಂದುಗಳ ಹಬ್ಬ ಹಾಳಾಗುತ್ತಿದೆ. ತಮ್ಮ ರಾಜಕೀಯ ಲಾಭಕ್ಕೋಸ್ಕರ ಹಿಂದುಗಳನ್ನು ಯಾಮಾರಿಸುತ್ತಾರೆ” ಎಂದು ಕಿಡಿಕಾರಿದ್ದಾರೆ.