ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ ಕುಟುಂಬದಲ್ಲಿ ಅರವತ್ತಕ್ಕೂ ಹೆಚ್ಚು ಸದಸ್ಯರಿದ್ದು, ಒಂದು ಸೂರಿನಡಿ ಅನ್ಯೋನ್ಯವಾಗಿರುವುದು ಎಲ್ಲರ ಗಮನ ಸೆಳೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ಜಾಲವಾಡಗಿ ಮನೆತನ ಎರಡು ತಲೆಮಾರುಗಳಿಂದಲೂ ಕೂಡು ಕುಟುಂಬ ಜೀವನ ಸಾಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಗದಗ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಅವಿಭಕ್ತ ಕುಟುಂಬ ಜಾಲವಾಡಗಿ ಮನೆತನ ಎಂದು ಹೇಳಿದರೂ ತಪ್ಪಾಗಲಾರದು. ಕೂಡಿ ಬಾಳಿದರೇ ಅದೇ ಸ್ವರ್ಗ ಎಂಬ ಮಾತಿಗೆ ಈ ಕುಟುಂಬ ಅರ್ಹವಾಗಿದೆ.
ಇಂದಿನ ಸಮಾಜದಲ್ಲಿ ಮದುವೆ ನಂತರದಲ್ಲಿ ತಂದೆ ತಾಯಿ ಮಕ್ಕಳು ಇಷ್ಟೆ ಸಾಕು ಎನ್ನುವ ವಿಭಕ್ತ ಕುಟುಂಬಗಳ ಸಂಖ್ಯೆ ಜಾಸ್ತಿಯೇ ಇದೆ. ಈ ನಡುವೆ ಅಜ್ಜ ಮುತ್ತಜ್ಜ ಕಾಲದಿಂದಲೂ ಒಟ್ಟಿಗೆ ವಾಸಿಸುವ ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ಇಂದಿಗೂ ಜಾಲವಾಡಗಿ ಮನೆತನ ಅನುಸರಿಸಿಕೊಂಡು ಬಂದಿದೆ. ಈ ಕುಟುಂಬದಲ್ಲಿ ಒಟ್ಟು ಅರವತ್ತಕ್ಕೂ ಹೆಚ್ಚು ಸದಸ್ಯರು ಇದ್ದು, ಅಣ್ಣತಮ್ಮಂದಿರು, ಸೊಸೆಯಂದಿರು, ಮಕ್ಕಳು ಮರಿಮೊಮ್ಮಕ್ಕಳು ಒಟ್ಟಾಗಿ ಒಂದೇ ಮನೆಯಲ್ಲಿ ವಾಸಿಸುತ್ತದ್ದಾರೆ. ಯಾವುದೇ ಮನಸ್ಥಾಪಗಳಿಲ್ಲದೇ ಎಲ್ಲರೂ ಪ್ರೀತಿ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಾ ಇಂದಿಗೂ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ.

ಜಾಲವಾಡಗಿ ಕುಟುಂಬಕ್ಕೆ ಕೃಷಿಯೇ ಆಧಾರ ಜಾಲವಾಡಗಿ ಕುಟುಂಬ ಹೆಚ್ಚಾಗಿ ಕೃಷಿಯನ್ನೇ ಆಧಾರಿಸಿ ಬದುಕು ಸಾಗಿಸುತ್ತಿದ್ದಾರೆ. ಒಟ್ಟು ನೂರು ಎಕರೆ ಜಮೀನು ಹೊಂದಿದ್ದು, ಹೊಲದಲ್ಲಿ ಕಬ್ಬು, ಮಕ್ಕೆಜೋಳ, ರೇಷ್ಮೆ, ಗೆಜ್ಜಿ ಶೇಂಗಾ, ಜೊತೆಗೆ ಇನ್ನಿತರೇ ಬೆಳೆಗಳನ್ನು ಬೆಳೆಯುತ್ತಾರೆ. ಇಪ್ಪತೈದು ಎಮ್ಮೆಗಳು, ಮೂನ್ನೂರು ಕುರಿಗಳು ಇವೆ. ಈ ಎಲ್ಲ ಕೆಲಸಗಳು ದಿನನಿತ್ಯ ಅವರವರು ಏನು ಕೆಲಸ ಮಾಡುವರು ಅವುಗಳನ್ನು ಮಾಡುವರು ಎಂದು ಕುಟುಂಬಸ್ಥರು ಹೇಳುವರು.
ಒಂದು ಹೊತ್ತಿನ ಊಟಕ್ಕೆ ಆರುಪಡಿ ಜೋಳದ ರೊಟ್ಟಿ, ಒಂದು ಪಡಿ ಅಕ್ಕಿಯ ಅಡುಗೆ ಜಾಲವಾಡಗಿ ಕುಟುಂಬದಲ್ಲಿ ದಿನನಿತ್ಯ ಮಾಡುತ್ತಿರುವರು. ರೊಟ್ಟಿ ಮಾಡುವ ಕೋಣೆಯಲ್ಲಿ ಮೂರು ಒಲೆಗಳು ಇವೆ. ಕುಟುಂಬದ ಎಲ್ಲರಿಗೂ ಒಂದು ಹೊತ್ತಿನ ಊಟಕ್ಕೆ ಮನೆಯ ಸೊಸೆಯಂದಿರು ಆರು ಪಡಿ(24 ಸೇರು ಜೊಳದ ಹಿಟ್ಟು) ಜೋಳದ ರೊಟ್ಟಿ ಮಾಡುವರು. ಎರಡು ಪಡಿ(ಎಂಟು ಸೇರು ಅಕ್ಕಿ)ಅಕ್ಕಿಯ ಅನ್ನ, ಸಾರು, ಪಲ್ಯ ಮಾಡುವರು. ಒಂದು ಹೊತ್ತಿಗೆ ಇಷ್ಟಾದರೆ ಮೂರು ಹೊತ್ತಿಗೆ ಎಷ್ಟು ಪಡಿ ಜೋಳದ ರೊಟ್ಟಿ, ಅನ್ನ ಸಾರು ಮಾಡುವರು ಯೋಚಿಸಬೇಕು. “ಪ್ರತಿನಿತ್ಯ ಐದು ನೂರರಿಂದ ಆರು ನೂರು ರೊಟ್ಟಿ ಒಲ್ಲೆಯಲ್ಲಿಯೇ ಬೇಯಿಸಿ ಯಾವುದೇ ಬೇಸರ ಇಲ್ಲದೇ ನಿತ್ಯವೂ ಸಂತೋಷದಿಂದ ಅಡುಗೆ ಮಾಡುತ್ತಾ, ಕೃಷಿ ಕೆಲಸ ಮಾಡುತ್ತಾ ಸಂತೋಷದಿಂದ ಇದ್ದೇವೆ” ಎಂದು ಸೊಸೆಯಂದಿರು ಹೇಳುವರು.
ಕುಟುಂಬದಲ್ಲಿ ಇವತ್ತಿನವರೆಗೂ ವರದಕ್ಷಿಣೆ ತೆಗೆದುಕೊಂಡಿಲ್ಲ: ಜಾಲವಾಡಗಿ ಕುಟುಂಬದಲ್ಲಿ ನಮ್ಮ ಅಜ್ಜನ ಕಾಲದಿಂದಲೂ ಗಂಡು ಮಕ್ಕಳ ಮದುವೆಯಲ್ಲಿ ಇವತ್ತಿನವರೆಗೂ ವರದಕ್ಷಿಣೆಯನ್ನು ತೆಗೆದುಕೊಂಡಿಲ್ಲ. ಮನೆಯಲ್ಲಿ ಮದುವೆ ಮಾಡಿದರೇ ಒಬ್ಬೊಬ್ಬರದೇ ಮದುವೆ ಮಾಡದೆ ಐದು ಮಕ್ಕಳ ಒಟ್ಟೊಟ್ಟಿಗೆ ಮಾಡುತ್ತಾ ಬಂದಿರುವರು. ಇಲ್ಲಿಯವರೆಗೂ ಮನೆಯಲ್ಲಿ ಮದುವೆಗಳು ಆಗಿರುವವೋ ಅವೆಲ್ಲವೂ ಮನೆ ಮುಂದೆಯೇ ಮದುವೆ ಮಾಡಿರುವರು.
ಜಾಲವಾಡಗಿ ಮನೆತನದ ಹಿರಿಯ ಯಜಮಾನ ಗುರುಪಾದಪ್ಪ ಜಾಲವಾಡಗಿ, “ನಮ್ಮ ಮೂಲ ಊರು ಜಾಳವಾಡಗಿ. ನಮ್ಮಜ್ಜರ ಮೂರು ಜನ. ಜಾಳವಾಡಗಿಯಿಂದ ಮಾಗಳಕ್ಕ ಇಬ್ಬರು ಬಂದರು. ಇನ್ನೊಬ್ಬ ಇಲ್ಲಿಗೆ ಬಂದ. ನಮ್ಮಜ್ಜನ ಹಿಂದಿನವರು ನನಗೆ ಗೊತ್ತಿಲ್ಲ. ನಮ್ಮಜ್ಜ ಭೀಮಪ್ಪನ ಹೊಟ್ಟಿಲೆ ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಮಗಳು, ಹೆಣ್ಮಗಳನ್ನ ಮದುವೆ ಮಾಡಿ ಕೊಟ್ರು. ಉಳಿದವರು ನಮ್ಮಪ್ಪ ಹಾಗೂ ನಮ್ಮ ಕಾಕಾ. ನಾವು ನಮ್ಮ ಕಾಕಾನ ಮಕ್ಕಳು ಕೂಡಿಯೇ ಇದ್ವಿ. ನಂತರ ನಮ್ಮ ಕಾಕಾನ ಮಕ್ಳು ಬ್ಯಾರೆ ಆದ್ರೂ. ನಾವು ಎಂಟು ಜನ ಅಣ್ಣತಮ್ಮಂದಿರು ಇಲ್ಲಿವರೆಗೂ ಒಟ್ಟಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದೇವೆ. ಮನೆಯಲ್ಲಿ ಸಣ್ಣ ಪುಟ್ಟ ಜಗಳುಗಳು ಬರುತ್ತವೆ. ಎಲ್ಲರೂ ಒಬ್ಬರಿಗೊಬ್ಬರು ಅರಿತುಕೊಂಡು, ಸುಧಾರಿಸುಕೊಂಡು ಹೋಗ್ತವಿ. ಹಿಂಗ ಕೂಡಿ ಇರುವುದರಿಂದ ಊರಲ್ಲಿ ನಮಗೆ ಬೆಲೆ ಇದೆ. ಎಲ್ಲರೂ ನಮಗೆ ಗೌರವ ಕೊಡ್ತಾರೆ” ಎನ್ನುವರು.

ಈದಿನ.ಕಾಮ್ ಜೊತೆಗೆ ಮಾತನಾಡಿದ ಜಾಲವಾಡಗಿ ಕುಟುಂಬದ ಸದಸ್ಯ ದೇವೆಂದ್ರಪ್ಪ ಜಾಲವಾಡಗಿ, “ನಾವು ಹಿಂದಿನಿಂದಲೂ ಕೂಡು ಕುಟುಂಬದಿಂದ ಬಂದವರು. ಸಣ್ಣಪುಟ್ಟ ಏನೇ ಬಂದರು, ಅದನ್ನೆಲ್ಲ ನಮ್ಮ ಯಜಮಾನ್ರು(ಕುಟುಂಬದ ಹಿರಿಯ ವ್ಯಕ್ತಿ) ಸಹಕರಿಸಿಕೊಂಡು ಹೋಗ್ತಾರೆ. ಹಿಂದಿನ ಯಜಮಾನ್ರು ಬಂದ ಹಾದಿಯಲ್ಲಿ ನಾವು ಹೊಂಟಿವಿ. ಒಂದು ನಾಲ್ಕು ಜನ ಕಮತ ಮಾಡ್ತಿವಿ, ಇನ್ನೊಂದು ನಾಲ್ಕ ಜನ ನೀರು ಹಾಯಿಸುತ್ತಾರ, ಎರಡು ಜನ ಕುರಿ ಕಾಯಾಕ ಹೋಗ್ತಾರ, ಹಿರಿ ಯಜಮಾನ ಇಡೀ ಮನೆತನ ನೋಡ್ಕೊಂಡು ಹೋಗ್ತಾರ, ನಮ್ಮ ಕಾಕಾರು ನೌಕರಿ ಮಾಡ್ತಾರ ಹಿಂಗ ಎಲ್ಲರೂ ಕೆಲಸ ಮಾಡ್ತಾರ. ನಮ್ಮಲ್ಲಿ ಜಗಳ ಇಲ್ಲ. ಎಲ್ಲರು ಸಹಕರಿಸಿಕೊಂಡು ಹೋಗ್ತಿವಿ. ನಮ್ಮ ಹಿರಿ ಯಜಮಾನ ಏನು ಹೇಳಿದ್ರು ಅದಕ್ಕ ಬದ್ಧರಾಗಿ ಇರ್ತಿವಿ. ಎಲ್ಲರೂ ಕೂಡಿ ಇದ್ದಿದ್ದರಿಂದ ಖುಷಿಯಾಗಿ ಇದ್ದೀವಿ. ಊರಾನ ಜನ ನಮ್ಮ ಕುಟುಂಬ ನೋಡಿ ಕುಷಿ ಪಡ್ತಾರ” ಎಂದು ಹೇಳುವರು.
ಜಾಲವಾಡಗಿ ಕುಟುಂಬದ ಸೊಸೆ ಹನಮವ್ವ ಮಾತನಾಡಿ, “ನಾನು ಈ ಮನಿಗೆ ಸೊಸಿಯಾಗಿ ಬಂದು ಇಪ್ಪತ್ತೈದು ವರ್ಷ ಆತು. ಈ ಮನಿಯಲ್ಲಿ ಒಟ್ಟು ಒಂಬತ್ತು ಸೊಸೆಯಂದಿರು ಇದ್ದಾರ. ಎಲ್ಲರೂ ಸೇರಿ ಅಡುಗೆ ಮಾಡ್ತಿವಿ. ದಿನಕ್ಕ ಒಂದು ಕೊಡ ಸಾರು, ಮೂನ್ನೂರು ರೊಟ್ಟಿ, ಎರಡು ಪಡಿ ಅಕ್ಕಿ ಅನ್ನ, ಎರಡು ಸೇರು ಪಲ್ಯ, ಎಲ್ಲದು ಅಡುಗೆ ಮಾಡ್ತಿವಿ. ಬೆಳಗ್ಗೆ ಅಡುಗಿ ಜಾಸ್ತಿ ಮಾಡ್ತಿವ. ಹೊಲಕ್ಕ ಹೋಗಾಕ ಜಾಸ್ತಿ ಅಡುಗೆ ಮಾಡ್ತಿವಿ. ಹೊಲ, ಮನಿ ಎಲ್ಲ ಕೆಲಸ ಸೊಸೆದಿರು ಅಡುಗೆಮಾಡೋರು ಅಡುಗೆ ಮಾಡ್ತಾರ, ಹೊಲಕ್ಕ ಹೋಗೋರು ಹೊಲಕ್ಕ ಹೊಗ್ತಾರ. ಹೊಂದ್ಕೊಂಡು ಎಲ್ಲ ಕೆಲಸ ಮಾಡ್ತೀವಿ. ಎಲ್ಲರೂ ಕುಟುಂಬದಲ್ಲಿ ಅನ್ಯೊನ್ಯವಾಗಿ ಇದ್ದೇವೆ” ಎಂದು ಹೇಳುವರು.

ಅಧುನಿಕ ಯುಗದಲ್ಲಿ ಕೇವಲ ಸ್ವಾರ್ಥ ಹಾದಿಯಲ್ಲಿ ಸಾಗುವ ಅದೆಷ್ಟೋ ವಿಭಕ್ತ ಕುಟುಂಬಗಳ ಮಧ್ಯೆ ಅವಿಭಕ್ತತೆಯಿಂದ ಬದುಕಿ ಬಾಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಜಾಲವಾಡಗಿ ಕುಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



