2017ರ ವಿಧಾನಸಭೆ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತೆ ಅಧಿಕಾರಕ್ಕೆ ಬರಲಿದೆ, ಸರ್ಕಾರ ರಚಿಸಲಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಮ್ಮೊಂದಿಗಿರುತ್ತದೆ. ವಿರೋಧ ಪಕ್ಷಗಳ ಮೈತ್ರಿ ಅಖಂಡವಾಗಿ ಉಳಿಯುತ್ತದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಕಂಡ ಎಸ್‌ಪಿ, ವಿಧಾನಸಭೆ ಚುನಾವಣೆಯಲ್ಲಿಯೂ ಅಧಿಕ ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ರೇವಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, “2027ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ” ಎಂದು ಸೂಚನೆ ನೀಡಿದರು. “ಇಂಡಿಯಾ ಒಕ್ಕೂಟ ಇರಲಿದೆ. ನಮ್ಮೊಂದಿಗೆ ಕಾಂಗ್ರೆಸ್ ಇರುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು: ಲೋಕಸಭೆಯಲ್ಲಿ ‘ಶಾಯರಿ’ ಮೂಲಕ ಎನ್‌ಡಿಎ ಕಾಲೆಳೆದ ಅಖಿಲೇಶ್
“ಸೀಟು ಹಂಚಿಕೆಯು ಸಂಖ್ಯೆಗಳಿಗಿಂತ ಚುನಾವಣಾ ಬಲವನ್ನು ಆಧರಿಸಿರುತ್ತದೆ. ಎಷ್ಟು ಸ್ಥಾನಗಳು ಎಂಬುದಕ್ಕಿಂತ ಗೆಲುವಿನ ಸಾಧ್ಯತೆಯ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತದೆ. ಗೆಲ್ಲಬಲ್ಲವರಿಗೆ ಟಿಕೆಟ್ ಸಿಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಇನ್ನು ಈ ಸಂದರ್ಭದಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, “ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಕಾಣಲಿದೆ. ಸದನದಲ್ಲಿ (ಸಂಸತ್ತು) ಸೋತವರು ಹೊರಗೆ ಸೋಲುವುದು ಸಹಜ” ಎಂದು ಹೇಳಿದರು.
ಇದಕ್ಕೂ ಮುನ್ನ ಲಕ್ನೋದಲ್ಲಿರುವ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಾದವ್, “ಕೇಂದ್ರದಲ್ಲಿ ಆಡಳಿತ ನಡೆಸುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ಬಿಜೆಪಿ ವಿರೋಧ ಪಕ್ಷವನ್ನು ಮಹಿಳಾ ವಿರೋಧಿ ಎಂದು ಕರೆಯುತ್ತದೆ. ವಾಸ್ತವದಲ್ಲಿ, ಬಿಜೆಪಿ ಮಹಿಳಾ ವಿರೋಧಿ. ಮಹಿಳೆಯನ್ನು ಎಂದಿಗೂ ತನ್ನ ಮುಖ್ಯಸ್ಥೆಯಾಗಿ ಮಾಡದ ಮತ್ತು ಮತಗಳ ಅಗತ್ಯವಿದ್ದಾಗ ಮಾತ್ರ ‘ನಾರಿ’ ಘೋಷಣೆಯನ್ನು ನೀಡಿದ ಪಕ್ಷದ ನಿಜಮುಖ ಬಯಲಾಗಿದೆ” ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್
ಉತ್ತರ ಪ್ರದೇಶದಲ್ಲಿ ಎಸ್‌ಪಿ ಆಡಳಿತ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು (ಎಸ್‌ಪಿ) ಈವರೆಗೆ ಒಟ್ಟು ನಾಲ್ಕು ಬಾರಿ ಅಧಿಕಾರ ನಡೆಸಿದೆ. ಎಸ್‌ಪಿ ಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ. 2012ರಿಂದ 2017ರವರೆಗೆ ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಪ್ರಮುಖ ವಿರೋಧ ಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2017ರ ಬಳಿಕ ಬಿಜೆಪಿ ಸರ್ಕಾರ ಬಂದಿದೆ. ಸದ್ಯ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಕ್ಷೇತ್ರಗಳಲ್ಲಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟವು ಒಟ್ಟು 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಸ್‌ಪಿ 37 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಗೆದ್ದಿದೆ. ಬಿಜೆಪಿ 33 ಸ್ಥಾನಗಳನ್ನಷ್ಟೇ ಗೆದ್ದು ಹಿನ್ನಡೆ ಕಂಡಿದೆ. ಆದ್ದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕ ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಅಖಿಲೇಶ್ ಯಾದವ್ ಹೊಂದಿದ್ದಾರೆ.





