ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆ ಜರುಗುವ ನಿಟ್ಟಿನಲ್ಲಿ ಲಿಂಗಾಯತ ವೋಟ್ ಬ್ಯಾಂಕ್ ತನ್ನತ್ತ ಸೆಳೆಯುವ ಉದ್ದೇಶದಿಂದ ಬಿಜೆಪಿ ರಾಜ್ಯ ಘಟಕಕ್ಕೆ ಬಿ ವೈ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ತಂತ್ರಗಾರಿಕೆ ರೂಪಿಸಿದೆ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಅವರು ಮಾತನಾಡಿದರು. “ಹಿಂದಿನ ಬಿಜೆಪಿ ಆಡಳಿತದಲ್ಲಿ ಲಿಂಗಾಯತ ಸಮಾಜದಲ್ಲಿ ಹಿರಿಯಣ್ಣನಂತಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದೆ, ಪಂಚಮಸಾಲಿ ಸಮಾಜವನ್ನು ಮೀಸಲಾತಿಯಿಂದ ದೂರವಿಟ್ಟು ಅಲಕ್ಷ್ಯ ಮಾಡಿದ್ದನ್ನು ಪಂಚಮಸಾಲಿಗರು ಇನ್ನೂ ಮರೆತಿಲ್ಲ. ಹೀಗಿರುವಾಗ ವಿಜಯೇಂದ್ರರನ್ನು ನೇಮಕ ಮಾಡುವ ಮೂಲಕ ಲಿಂಗಾಯತರ ಮತ ಬೇಟೆಗೆ ಹೊರಟಿರುವ ಬಿಜೆಪಿ ಸಾಧನೆ ಫಲ ಕೊಡಲಾರದು” ಎಂದು ಅವರು ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ಇನ್ನಾದರೂ ಕುಟುಂಬ ರಾಜಕಾರಣದ ಕುರಿತು ಮಾತನಾಡುವುದನ್ನು ನಿಲ್ಲಿಸಬೇಕು: ಆಯನೂರ್ ಮಂಜುನಾಥ್
ಗಂಗಾಧರ ದೊಡ್ಡವಾಡ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಡಾ. ಈಶ್ವರ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೆ ಬಿ ಡಿ ಜತ್ತಿ, ನಿಜಲಿಂಗಪ್ಪ, ಎಸ್ ಆರ್ ಕಂಠಿ, ವೀರೇಂದ್ರ ಪಾಟೀಲ್‌ರಂತಹ ನಾಲ್ಕು ಜನ ಮೇಧಾವಿಗಳನ್ನು ಮುಖ್ಯಮಂತ್ರಿ ಮತ್ತು ಉಪರಾಷ್ಟ್ರಪತಿ ಸ್ಥಾನದವರೆಗೆ ಕಳುಹಿಸಿ ಕಾಂಗ್ರೆಸ್ ಗೌರವಿಸಿದ್ದನ್ನು ಲಿಂಗಾಯತರು ಮರೆತಿಲ್ಲ. ಹೀಗಿರುವಾಗ ಲಿಂಗಾಯತರನ್ನು ತನ್ನತ್ತ ಸೆಳೆಯಲು ಬಿಜೆಪಿ ಏನೇ ತಂತ್ರಗಾರಿಕೆ ರೂಪಿಸಿದರೂ ಅದು ಯಶಸ್ಸು ಕಾಣಲಾಗದು” ಎಂದರು.