ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಭೇಟಿಕೊಟ್ಟು ಅಲ್ಲಿರುವ ಮೂಲಭೂತ ಸಮಸ್ಯೆಗಳ ಕುರಿತು ಈದಿನ.ಕಾಮ್ ವರದಿ ಮಾಡಿ ಸುದ್ಧಿ ಪ್ರಸಾರ ಮಾಡಿತ್ತು. ಸುದ್ಧಿಯನ್ನು ಅಂಗನವಾಡಿಗಳು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಹರಿಸಿತ್ತು.
ಈದಿನ.ಕಾಮ್ ಅಧಿಕಾರಿಗಳ ಬೆಂಬಿಡದೆ ಸಮಸ್ಯೆಗಳ ಬಗೆಹರಿಸಲು ತಿಳಿಸಿ, ವರದಿಯನ್ನೂ ಮಾಡಲಾಗಿತ್ತು. ಅದರಂತೆ ತಾಲೂಕಿನ ಶಿರೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಚಿಣ್ಣರನ್ನು ಶಿಥಿಲಗೊಂಡ ಕಟ್ಟಡದಿಂದ ನೂತನ ಹೊಸ ಕಟ್ಟಡವಾದ ಬೇರೆ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ.

ಶಿಥಿಲಾವಸ್ಥೆಗೆ ತಲುಪಿದ್ದ ಪಂಚಾಯತ್ ಕಟ್ಟಡದಲ್ಲಿದ್ದ ಅಂಗನವಾಡಿ
ಸಮಸ್ಯೆ ಏನಿತ್ತು?
ಶಿರೂರ ಗ್ರಾಮದ ಅಂಗನವಾಡಿ ಕೇಂದ್ರವೊಂದನ್ನು ಹಲವಾರು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಗ್ರಾಮ ಪಂಚಾಯತಿ ಕಟ್ಟಡದಲ್ಲೇ, ಅದೂ ಆಗಲೊಈಗಲೊ ಬೀಳುವ ಹಂತದಲ್ಲಿದ್ದ ಕಟ್ಟಡದಲ್ಲೇ ನಡೆಸುತ್ತಿದ್ದರು.
ಅದೇ ಕಟ್ಟಡದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೂ ಕಾರ್ಯನಿರ್ವಹಿಸುತ್ತಿದ್ದರು. ಜನಜಂಗುಳಿ ಹೆಚ್ಚಾದಾಗ ಚಿಣ್ಣರನ್ನು ಪಕ್ಕದಲ್ಲಿರುವ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಅಲ್ಲಿಯೇ ಪಾಠ ಹೇಳಿಕೊಡುವ ಪರಿಪಾಠ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಾ ಬಂದಿತ್ತು. ಅಲ್ಲದೇ, ಈ ಬಗ್ಗೆ ಸ್ಥಳೀಯರು ಕೂಡ ನಮಗೆ ಮಾಹಿತಿ ನೀಡಿದ್ದರು.

ಈ ಕುರಿತು ಗ್ರಾಮಸ್ಥರು ಹಲವುಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿರಲಿಲ್ಲ. ಇದೀಗ ಈದಿನ.ಕಾಮ್ ವರದಿಗೆ ಸ್ಪಂದಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿಥಿಲಗೊಂಡ ಕಟ್ಟಡದಲ್ಲಿದ್ದ ಮಕ್ಕಳನ್ನು ಪಂಚಾಯತಿ ಪಕ್ಕದಲ್ಲಿರುವ ಮತ್ತೊಂದು ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ.
