ಈದ್ಗಾ ಮೈದಾನ ಯಾರಪ್ಪನ ಆಸ್ತಿಯೂ ಅಲ್ಲ. ಈ ಮೈದಾನವನ್ನು ಈದ್ಗಾ ಮೈದಾನ ಎಂದು ಕರೆದರೆ, ಅವರು ಸಾಬರಿಗೆ ಹುಟ್ಟಿದಂತೆ, ಈ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನವೆಂದು ಹೇಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ದ್ವೇಷ ಬಿತ್ತುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬದಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹೈಕೋರ್ಟ್ ಅವಕಾಶ ನೀಡಿತ್ತು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆದಿದೆ. ಮೆರವಣಿಗೆಗೂ ಮುನ್ನ ಈದ್ಗಾ ಮೈದಾನದಲ್ಲಿ ಮಾತನಾಡಿರುವ ಯತ್ನಾಳ್ ಕೋಮು ದ್ವೇಷ ಬಿತ್ತುವ ಹೇಳಿಕೆಗಳನ್ನು ನೀಡಿದ್ದಾರೆ.
“ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿ ಅಲ್ಲ. ಅಂಜುಮನ್ ಆಸ್ತಿ ಅಲ್ಲಾ, ಪಾಕಿಸ್ತಾನದ ಆಸ್ತಿ ಅಲ್ಲ. ರಾಜ್ಯದ ವಕ್ಫ್ ಆಸ್ತಿ. ಇದನ್ನು ಸರ್ಕಾರದ ವಶಕ್ಕೆ ಪಡೆಯಲು ಹೋರಾಡುತ್ತಿದ್ದೇವೆ. ಮುಂದೆ ಇದೇ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ” ಎಂದು ಪ್ರಚೋದನಾಕಾರಿ ಮಾತುಗಳನ್ನಾಡಿದ್ದಾರೆ.
“2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗುತ್ತಾರೆ. ಆಗ ಪಾಕಿಸ್ತಾನದ ಲಾಹೋರ್ನಲ್ಲೂ ಗಣಪತಿ ಮೂರ್ತಿ ಕೂರಿಸುತ್ತೇವೆ. ಇಲ್ಲಿ ರಾಷ್ಟ್ರಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ. ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದಿದ್ದೇವೆ” ಎಂದು ಹೇಳಿದ್ದಾರೆ.
ಮಸೀದಿಯಲ್ಲಿ ಗಣೇಶ ಕೂರಿಸುತ್ತೇವೆ – ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡಿದ ಮುತಾಲಿಕ್
ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ನಡೆದಿದೆ. ಈಗ ಈದ್ಗಾ ಮೈದಾನ ಶುದ್ದಿಯಾಗಿದೆ. ಅಂಜುಮನ್ ಕಮಿಟಿಯವರು ನೀಚರು. ಹಿಂದೂ ಸಮಾಜವನ್ನು ಕೆಣಕಿದರೆ ನಾವು ಮಸೀದಿಯಲ್ಲಿ ಗಣಪತಿ ಕೂರಿಸುತ್ತೇವೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೋಮ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದಾರೆ.
“ಅಂಜುಮನ್ ಕೋರ್ಟ್ಗೆ ಹೋಗುತ್ತೇವೆ ಅನ್ನೋದು ಸರಿ ಅಲ್ಲ. ನಿಮ್ಮ ಸೊಕ್ಕು ಸರಿ ಅಲ್ಲ. ಇದೇನು ಪಾಕಿಸ್ತಾನ ಅಲ್ಲ, ಅಫಘಾನಿಸ್ತಾನ ಅಲ್ಲ. ಇದು ನಮ್ಮ ನೆಲ, ಮೈದಾನ ಪಾಲಿಕೆ ಆಸ್ತಿ” ಎಂದು ಮುತಾಲಿಕ್ ಹೇಳಿದ್ದಾರೆ.