ಕುಲಾಂತರಿ ತಳಿಯು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ. ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣದ ಸಾವಯವ ಕೃಷಿ ಪದ್ಧತಿ ವಿರುದ್ಧವಾಗಿದೆ. ಇದನ್ನು ನಾವು ಒಗ್ಗಟ್ಟಾಗಿ ತಡೆಯಲೇಬೇಕು. ಕುಲಾಂತರಿ ತಳಿ ಮುಕ್ತ ದೇಶ ಎಂದು ನಮ್ಮ ದೇಶವನ್ನು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ತುಮಕೂರಿನ ಹೊನ್ನುಡುಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಗಾಂಧಿ ಸಹಜ ಬೇಸಾಯ ಆಶ್ರಮ ದೊಡ್ಡಹೊಸೂರು ಗ್ರಾಮದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ವಾಯುಗುಣ ವೈಪರೀತ್ಯ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವಾಯುಗುಣಕ್ಕೆ ಪೂರಕವಾಗುವ ಬೆಳೆ ಪದ್ದತಿಗೆ ಒತ್ತು ನೀಡಬೇಕು ಎಂದು ರಾಜ್ಯ ಮತ್ತು ಒಕ್ಕೂಟ ಸರ್ಕಾರವನ್ನು ಆಗ್ರಹಿಸಿ, ಒಕ್ಕೊರಲಿನ ನಿರ್ಣಯ ಅಂಗೀಕರಿಸಲಾಯಿತು.
ಬಯೋ ಟೆಕ್ನಾಲಜಿ ಹಾಗೂ ಕುಲಾಂತರಿ ತಳಿಗಳ ಸಂಶೋಧನೆಗೆ ಸರ್ಕಾರ ನೆರವು ನೀಡುವುದನ್ನು ನಿಲ್ಲಿಸಬೇಕು. ಕಾರ್ಪೊರೇಟ್ ಕಂಪನಿಗಳು ಇಂತಹ ಕಾರ್ಯಗಳಿಗೆ ಹಣಕಾಸಿನ ನೆರವು ನೀಡದಂತೆ ತಡೆಯೊಡ್ಡಬೇಕು. ಕುಲಾಂತರಿ ತಳಿಗಳ ಅಭಿವೃದ್ದಿ ಕುರಿತು ಶಿಕ್ಷಣ, ಸಂಶೋಧನೆ, ಹಾಗೂ ವಿಸ್ತರಣೆಗೆ ಬಹುರಾಷ್ಟ್ರೀಯ ಕಂಪನಿಗಳು ಹಣ ನೀಡುವುದನ್ನು ನಿಷೇಧಿಸಬೇಕು. ಬಿಯರ್ ಕಂಪನಿ ಹಾಗೂ ಐಸಿಎಆರ್‌ಗೆ ಆಗಿರುವ ಒಪ್ಪಂದ ತಕ್ಷಣವೇ ರದ್ದುಪಡಿಸಬೇಕು. ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಸಹಜ ಬೇಸಾಯಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಲಾಯಿತು.

ಈ ನಿರ್ಣಯಗಳ ಜಾರಿಗೆ ಪ್ರತಿ ಜಿಲ್ಲೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ತೀರ್ಮಾನ ಕೈಗೊಂಡ ಸಭೆಯು, ಆಯಾ ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು ಹಾಗು ರಾಜಕೀಯ ಮುಖಂಡರ ಸಭೆಯನ್ನು ಪಕ್ಷಾತೀತವಾಗಿ ಕರೆದು ಕುಲಾಂತರಿ ತಳಿಯ ಆಹಾರ ತಿರಸ್ಕರಿಸುವ ಕುರಿತು ನಿರ್ಣಯಿಸಬೇಕು. ಸರ್ಕಾರಗಳ ಗಮನ ಸೆಳೆದು ಕುಲಾಂತರಿ ತಳಿ ಆಹಾರ, ದೇಶ ಪ್ರವೇಶಿಸುವುದನ್ನ ತಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ರೈತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಹಾಗು ನಾಗರಿಕ ಸಮೂಹ ತೀರ್ಮಾನಿಸಿತು.
ಈ ಸಭೆಯಲ್ಲಿ ಕೃಷಿ ವಿಜ್ಞಾನಿ ಡಾ. ಮಂಜುನಾಥ್, ಕೃಷಿ ವಿವಿಯ ನಿವೃತ್ತ ಕುಲಪತಿ ಡಾ. ನಾರಾಯಣಗೌಡ, ಮೈಸೂರು ಜಿಲ್ಲೆಯ ರೈತ ಮುಖಂಡ ಉಗ್ರ ನರಸಿಂಹೇಗೌಡ, ಮಂಡ್ಯ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಸೇರಿದಂತೆ ಚಾಮರಾಜನಗರ, ರಾಮನಗರ, ದಾವಣಗೆರೆ, ತುಮಕೂರು ಜಿಲ್ಲೆಯ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಚಿಕ್ಕಬಳ್ಳಾಪುರ | ರಾಜಕೀಯ ಮೀಸಲಾತಿಯಿಂದ ಕಾರ್ಮಿಕ, ದಲಿತರ ಬದುಕು ಸುಧಾರಣೆಯಾಗಿಲ್ಲ: ಸಿಪಿಐಎಂ ಮುಖಂಡ ಕೆ.ಪ್ರಕಾಶ್
ಜಿಲ್ಲಾವಾರು ಪ್ರತಿನಿಧಿಗಳು ಹಾಗೂ ಜನರನ್ನು ಒಳಗೊಂಡ ವಿಚಾರಗೋಷ್ಠಿಯು ಸೆ -30, ಅಕ್ಟೋಬರ್ 1 ಹಾಗೂ 2ನೇ ತಾರೀಖಿನವರೆಗೆ ದೊಡ್ಡ ಹೊಸೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಜರುಗಲಿದೆ.
