ಶಿವಮೊಗ್ಗ ನಗರದ ಹೃದಯ ಭಾಗವಾದ ಅಮೀರ್ ಅಹಮದ್ ವೃತ್ತದಲ್ಲಿ ಕೆಲವು ವರ್ಷಗಳ ಹಿಂದೆ ಅಂಡರ್‌ಪಾಸ್ ನಿರ್ಮಾಣ ಮಾಡಿದ್ದು, ತದನಂತರ ಸಮರ್ಪಕ ಸೇವೆ ಒದಗಿಸುವಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವಿಫಲವಾಗಿತ್ತು.
ಸಾರ್ವಜನಿಕರಿಗೆ ಅನುಕೂಲವಾಗಬೇಕಿದಿದ್ದ ಅಂಡರ್‌ಪಾಸ್ ರಸ್ತೆ ಮುಚ್ಚಿರುವುದರಿಂದ ಜನಸಾಮಾನ್ಯರು ಅನಾನುಕೂಲಕ್ಕೆ ಈಡಾಗಿದ್ದರು. ಇದರಲ್ಲಿ ಕೊಳಚೆ ನೀರು, ಕಸ ಕಡ್ಡಿ ಸೇರಿಕೊಂಡು ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿತ್ತು. ನಗರದ ಹೃದಯ ಭಾಗದಲ್ಲಿ ಈ ಸಮಸ್ಯೆ ಯಾರ ಗಮನಕ್ಕೆ ಬಂದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು.
ಈ ಬಗ್ಗೆ ಕಳೆದ ಸೆಪ್ಟೆಂಬರ್ 1 ರಂದು ಈ ದಿನ.ಕಾಮ್ , “ಶಿವಮೊಗ್ಗ | ಅಂಡರ್‌ಪಾಸ್ ಬಳಕೆ ಸ್ಥಗಿತ; ಮಹಾನಗರ ಪಾಲಿಕೆ, ಜಿಲ್ಲಾಡಳಿತದ ನಿರ್ಲಕ್ಷ್ಯ, ಆರೋಪ” ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ಈ ವರದಿಯ ಬಳಿಕ ಎಚ್ಚೆತ್ತುಕೊಂಡ ಶಿವಮೊಗ್ಗ ಇಂಜಿನಿಯರ್, ಅಂಡರ್‌ಪಾಸ್‌ನಲ್ಲಿ ನಿಂತಿದ್ದ ನೀರನ್ನು ಖಾಲಿ ಮಾಡಿಸಿದ್ದಾರೆ.
ಸುದ್ದಿ ಪ್ರಕಟಿಸಿದ ನಂತರ ಸ್ಪಂದಿಸಿದ ಎಲೆಕ್ಟ್ರಿಕಲ್ ಮುಖ್ಯ ಇಂಜಿನಿಯರ್ ನಾಗರಾಜ್ ಅವರು ಅಂಡರ್‌ಪಾಸ್‌ನಲ್ಲಿದ್ದ ನೀರನ್ನು ಇಂದು ಮೋಟಾರ್ ಮೂಲಕ ಆಚೆಗೆ ತೆಗಿಸಿದ್ದಾರೆ. ಇದರ ಕುರಿತು ಈ.ದಿನ.ಕಾಮ್ ಜೊತೆಗೆ ಮಾತನಾಡಿದ ಅವರು, ಇನ್ನು ಎರಡು ದಿವಸದಲ್ಲಿ ಸ್ವಚ್ಛತೆ ಮಾಡಿಸುವದಾಗಿ ತಿಳಿಸಿದ್ದಾರೆ.
ಸಾರ್ವಜನಿಕರ ಮನವಿಯಂತೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಬಳಕೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಇದನ್ನು ಮುಕ್ತ ಅವಕಾಶ ಕಲ್ಪಿಸಿಕೊಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
