ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲ ಹಾಗೂ ಸರ್ಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿಯರ ಶೌಚಾಲಯಕ್ಕೆ ಬಾಗಿಲು ಇಲ್ಲದಿರುವ ಕುರಿತಂತೆ ಸೆ.28ರಂದು ‘588 ವಿದ್ಯಾರ್ಥಿಗಳಿಗೆ ಶೂನ್ಯ ಶೌಚಾಲಯ’ ಎಂಬ ಶೀರ್ಷಿಕೆಯಲ್ಲಿ ಈ ದಿನ.ಕಾಮ್ ವರದಿ ಮಾಡಿತ್ತು.
ಈ ವರದಿಗೆ ಸ್ಪಂದಿಸಿರುವ ರಾಮದುರ್ಗ ತಾಲೂಕು ಪಂಚಾಯತ್ ಅಧಿಕಾರಿ ಪ್ರವೀಣ್ ಕುಮಾರ್ ಸಾಲಿ, “ಅಕ್ಟೋಬರ್ ರಜೆ ಮುಗಿಯುವುದರೊಳಗೆ ಶೌಚಾಲಯ ನಿರ್ಮಿಸಿಕೊಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಸಾಲಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 207 ವಿದ್ಯಾರ್ಥಿನಿಯರು ಮತ್ತು 156 ವಿದ್ಯಾರ್ಥಿಗಳಿದ್ದು ಈ ಶಾಲೆಯಲ್ಲಿ ಶೌಚಾಲಯವೆ ಇಲ್ಲದ ಪರಿಣಾಮ ಶಾಲಾ ವಿದ್ಯಾರ್ಥಿನಿಯರು ಪಕ್ಕದ ಪ್ರೌಢ ಶಾಲೆಯ ಶೌಚಾಲಯವನ್ನು ಬಳಸುವ ಅನಿವಾರ್ಯತೆ ಬಂದಿದೆ. ಸರ್ಕಾರಿ ಪ್ರೌಢ ಶಾಲೆಯ ಶೌಚಾಲಯಲ್ಲಿ 99 ವಿದ್ಯಾರ್ಥಿನಿಯರು ಹಾಗೂ 126 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯ ವಿದ್ಯಾರ್ಥಿನಿಯರು ಅರ್ಧಕ್ಕೆ ನಿಂತಿರುವ ಹಾಗೂ ಬಾಗಿಲುಗಳೇ ಇಲ್ಲದ ಶೌಚಾಲಯವನ್ನು ಉಪಯೋಗಿಸಲು ಮುಜುಗರಕ್ಕೆ ಈಡಾಗುತ್ತಿದ್ದಾರೆ.
ಈ ಸಮಸ್ಯೆ ಕುರಿತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಮೂಲ್ಯ ವಗ್ಗರ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ನಮ್ಮ ಶಾಲೆಗೆ ಶೌಚಾಲಯವಿಲ್ಲ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ನಾವು ಪ್ರೌಢ ಶಾಲಾ ಶೌಚಾಲಯಕ್ಕೆ ಹೋಗಬೇಕೆಂದರೆ ಮುಜುಗರ ಅನುಭವಿಸುತ್ತೇವೆ. ಶೌಚಾಲಯ ಕಟ್ಟಿಸಿ” ಎಂದು ಮನವಿ ಮಾಡಿದರು.
ವಿದ್ಯಾರ್ಥಿನಿ ಲಕ್ಷ್ಮೀ ಬರಿಗಾಲ ಮಾತನಾಡಿ, ನಾವು ಹೋಗುವ ಹೈಸ್ಕೂಲ್ ಶಾಲೆಯ ಶೌಚಾಲಯ, ಅಲ್ಲಿಯವರಿಗೇ ಸರಿಯಾಗಿ ಹೊಂದುವುದಿಲ್ಲ. ಅದನ್ನೇ ಅರ್ಧಂಬರ್ಧ ಕಟ್ಟಿದ್ದು ಬಾಗಿಲು ಇಲ್ಲ. ಅಲ್ಲಿಯ ಶಿಕ್ಷಕಿಯರಿಗೂ ಸಹ ಮುಜುಗರ ಉಂಟಾಗುತ್ತಿದೆ ಎಂದು ತಿಳಿಸಿದ್ದರು.
“ನಮಗೆ ಶೌಚಾಲಯವಿಲ್ಲದೆ ತೊಂದರೆ ಆಗ್ತಿದೆರಿ. ನಾವು ಹೈಸ್ಕೂಲ್ ಅಕ್ಕಾಗೊಳ ಶಾಲೆಗೆ ಹೋಗ್ತಿವಿ. ಅಲ್ಲಿ ಮುಳ್ಳುಕಂಟಿ ಅದಾವ್ರಿ. ಈ ಶಾಲಿಗಿ ಬಂದು ಎರಡು ವರ್ಷ ಆದ್ರೂ ಶೌಚಾಲಯ ಇಲ್ಲ” ಎಂದು ವಿದ್ಯಾರ್ಥಿನಿ ಸೌಜನ್ಯ ಬೆಳವಲದ ವಿದ್ಯಾರ್ಥಿನಿ ಈ ದಿನ.ಕಾಮ್ಗೆ ತಿಳಿಸಿದ್ದರು.
ಇದನ್ನು ಓದಿದ್ದೀರಾ? ಬೆಳಗಾವಿ | ಅಕ್ಟೋಬರ್ 7, 9ರಂದು ಎರಡು ಕಂತಿನ ʼಗೃಹಲಕ್ಷ್ಮಿʼ ಹಣ ಜಮೆ : ಹೆಬ್ಬಾಳ್ಕರ್
ಈ ಕುರಿತು ಈ ದಿನ.ಕಾಮ್ ರಾಮದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಮತ್ತು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಇವರ ಗಮನಕ್ಕೆ ತಂದಿತ್ತು. ಅಕ್ಟೋಬರ್ ರಜೆ ಮುಗಿಯುವುದರೊಳಗೆ ಸಾಲಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು