ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರದೊಂದಿಗೆ ಕೈಜೋಡಿಸುವ ಸಂಘ ಸಂಸ್ಥೆಗಳು, ಸಿಎಸ್ಆರ್ ನಿಧಿಗಳನ್ನ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, “ದಾನಿಗಳು, ಹಳೆ ವಿದ್ಯಾರ್ಥಿಗಳು, ಕಂಪನಿಗಳ ಸಿಎಸ್‌ಆರ್ ಅನುದಾನ ಪಡೆಯುವ ಜೊತೆಗೆ ‘ಕ್ರೌಡ್ ಸೋರ್ಸಿಂಗ್’, ದತ್ತು ಕಾರ್ಯಕ್ರಮ ರೂಪಿಸಬೇಕು” ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಜಿಲ್ಲೆಯ ಶಾಲೆಗಳು, ಅಂಗನವಾಡಿಗಳಿಗೆ ಅಗತ್ಯವಿರುವ ಬೆಂಚ್, ಹೆಚ್ಚುವರಿ ಕೊಠಡಿ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಲಾಗಿದೆ. ‘ಕ್ರೌಡ್ ಸೋರ್ಸಿಂಗ್’ ಬಗ್ಗೆ ಪೋರ್ಟಲ್ ಕೂಡ ರಚಿಸಲಾಗಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು. ಈ ಯೋಜನೆಗೆ ವಿದೇಶಗಳಲ್ಲಿರುವ ಜಿಲ್ಲೆಯ ಜನರನ್ನು ಸಹ ಒಳಗೊಳಿಸಿಕೊಂಡು, ರಾಯಭಾರಿಯನ್ನೂ ನೇಮಿಸಿ, ಮಾದರಿಯಾಗಿ ಮಾಡೋಣ ಎಂದು ಸಚಿವರು ಹೇಳಿದರು.
ಜಿಲ್ಲೆಯ 186 ಆರೋಗ್ಯ ಉಪಕೇಂದ್ರಗಳಲ್ಲಿ ಸ್ವಂತ ಕಟ್ಟಡ ಇಲ್ಲವಾಗಿದೆ. 73 ಕೇಂದ್ರಗಳಿಗೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ದೊರೆತಿದ್ದು, 113 ಉಪಕೇಂದ್ರಗಳಿಗೆ ಆರೋಗ್ಯ ಇಲಾಖೆ ಜಾಗ ಹುಡುಕಾಟ ನಡೆಸುತ್ತಿದೆ. ಜಲಸಿರಿ ಯೋಜನೆ ಕಾಮಗಾರಿಯನ್ನು 2025 ಏಪ್ರಿಲ್ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್ ಹೇಳಿದಾಗ, ‘ವಿವಿಧ ಕಾಮಗಾರಿಗಳ ಹೆಸರಿನಲ್ಲಿ ನಗರದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಕ್ಷೇಪಿಸಿದರು. ಜಲಸಿರಿ, ಗೇಲ್, ಮೆಸ್ಕಾಂ, ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ, ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಲು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸರ್ಕಾರದ ಪಿಂಚಣಿಗೆ ಆದಾಯ ಮಿತಿ ₹30 ಸಾವಿರ ಇದ್ದು, ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ₹1.20 ಲಕ್ಷ ಇದೆ. ಪಿಂಚಣಿ ಪಡೆಯುವ ಆದಾಯ ಮಿತಿ ಬದಲಾಗಬೇಕು ಎಂದು ಐವನ್ ಡಿಸೋಜ ಹೇಳಿದಾಗ, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಲೆಗಳ ಪರವಾನಗಿ ನವೀಕರಣಕ್ಕೆ ಸಂಬಂಧಿಸಿ, 62 ನಿಯಮಗಳನ್ನು ವಿಧಿಸಲಾಗಿದ್ದು, ಇದು ಪಾಲನೆಯಾದರೆ ಮಾತ್ರ ನವೀಕರಿಸುವುದಾಗಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಎಂದು ಭೋಜೇಗೌಡ ಆಕ್ಷೇಪಿಸಿದಾಗ, ನ್ಯಾಯಾಲಯದ ಆದೇಶದ ಆಧಾರದಲ್ಲಿ ಪರವಾನಗಿ ನವೀಕರಿಸಿ, ಅಗ್ನಿ ಸುರಕ್ಷೆ ಸೇರಿದಂತೆ ಎಲ್ಲ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಸೂಚಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ ಸಂಬಂಧಿಸಿ ಮಹಾನಗರ ಪಾಲಿಕೆ ಕಾರ್ಯಸೂಚಿಯಲ್ಲಿ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಿರುವ ಬಗ್ಗೆ ಆಕ್ಷೇಪಿಸಿದ ಎಂಎಲ್‌ಸಿ ಭೋಜೇಗೌಡ, “ಕನ್ನಡ ಫಲಕ ಕಡ್ಡಾಯ ಅನುಷ್ಠಾನಗೊಳಿಸುವ ನೀವೇ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುತ್ತೀರಿ, ಆಡಳಿತ ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ” ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಇನ್ಮುಂದೆ ಮೊಬೈಲ್ ಆ್ಯಪ್‌ನಲ್ಲೇ ಬಿಎಂಟಿಸಿ ಪಾಸ್ ಪಡೆಯಿರಿ!
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮೆಸ್ಕಾಂ ಎಂಡಿ ಪದ್ಮಾವತಿ, ಡಿಎಫ್‍ಒ ಆ್ಯಂಟನಿ ಮರಿಯಪ್ಪ ಇದ್ದರು.
