ಈ ವರ್ಷದ ‘ಶೈಕ್ಷಣಿಕ ವರ್ಷ’ ಶುರುವಾಗಿ ಈಗಾಗಲೇ ನಾಲ್ಕು ತಿಂಗಳು ಕಳೆದಿವೆ. ಈ ನಡುವೆಯೇ ರಾಜ್ಯ ಸರ್ಕಾರವು ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ. ಇದರಿಂದ ಸಾಕಷ್ಟು ಬಡ ಪಾಲಕರು ಬೇಸರಗೊಂಡಿದ್ದಾರೆ.
373 ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ (ದ್ವಿಭಾಷಾ) ವಿಭಾಗಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 2024-25ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಅನುಮತಿ ನೀಡಲಾಗಿತ್ತು. ಬೇಡಿಕೆ ಪರಿಗಣಿಸಿ ಕನಿಷ್ಠ 100 ವಿದ್ಯಾರ್ಥಿಗಳಿರುವ 373 ಶಾಲೆಗಳಿಗೆ ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು.
ಬೆಂಗಳೂರು ದಕ್ಷಿಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಶಿರಸಿ, ಮೈಸೂರು, ಹಾಸನ, ವಿಜಯಪುರ ಮತ್ತು ಚಿಕ್ಕಮಗಳೂರಿನ ಶಾಲೆಗಳಿಗೆ ಅನುಮತಿ ನೀಡಲಾಗಿದೆ.
ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ ರಾಜ್ಯ ಸರ್ಕಾರ ಶೈಕ್ಷಣಿಕ ಮಧ್ಯೆಯೇ ಆರಂಭಿಸಿರುವುದರಿಂದ ಬಡ ಪಾಲಕರು ಬೇಸರಗೊಂಡಿದ್ದಾರೆ.
“ಈ ಬಗ್ಗೆ ಸರ್ಕಾರ ಮೊದಲೇ ಮಾಹಿತಿ ನೀಡಿದ್ದಿದ್ದರೆ, ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರಲಿಲ್ಲ. ನಾವು ಸಾಲ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತಹ ಸನ್ನಿವೇಶ ಬರುತ್ತಿರಲಿಲ್ಲ” ಎಂದು ಪೋಷಕರಾದ ಪೃಥ್ವಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕನ್ನಡ ಶಾಲೆಗಳು ಮುಚ್ಚುತ್ತಿವೆ. ರಾಜ್ಯ ಸರ್ಕಾರವು ಕನ್ನಡ ಕಲಿಕೆಯ ಶಾಲೆಗಳನ್ನು ಇಂಗ್ಲಿಷ್ ಕಲಿಕೆ ಶಾಲೆಗಳಾಗಿ ಬದಲಾಯಿಸುತ್ತಿವೆ. ಪರಿಸರದ ನುಡಿಯಲ್ಲಿ ಕಲಿಕೆ ಮಾಡೋದು ಬಹಳ ಅರಿಮೆ (scientific) ಅಂತ ಎಲ್ಲರಿಗೂ ಗೊತ್ತಿದೆ. ತಂದೆ-ತಾಯಿಗಳ ಅನಿಸಿಕೆಗಳಿಗೆ ಸರ್ಕಾರವು ಮಣಿದಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಸರ್ಕಾರವು ಸೋತಂತೆ ಕಾಣುತ್ತಿದೆ. ಆಳಿಕೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ” ಎಂದು ಕಾಗೆಪುರ ಚೇತನ್ ಎಂಬವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ಮದ್ದೂರಿನ ಬಿಇಓ ಕಾಳೀರಯ್ಯ ಮಾತನಾಡಿ, “2024-25ನೇ ಶೈಕ್ಷಣಿಕ ಸಾಲಿನ ಶುರುವಿಲ್ಲಿ 1,419 ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ಶುರು ಮಾಡಲು ಒಪ್ಪಿಗೆ ನೀಡಲಾಗಿತ್ತು. ಬೇಡಿಕೆ ಪರಿಗಣಿಸಿ 1ನೇ ತರಗತಿಯಲ್ಲಿ 16 ಮಕ್ಕಳಿಗಿಂತ ಹೆಚ್ಚಿರುವ, ಒಟ್ಟಾರೆ ಶಾಲೆಯಲ್ಲಿ ಕನಿಷ್ಠ 100 ವಿದ್ಯಾರ್ಥಿಗಳಿರುವ 373 ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಬೆಂಗಳೂರು ದಕ್ಷಿಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಶಿರಸಿ, ಮೈಸೂರು, ಹಾಸನ, ವಿಜಯಪುರ ಮತ್ತು ಚಿಕ್ಕಮಗಳೂರಿನ ಜಿಲ್ಲೆಗಳ ಶಾಲೆಗಳಿಗೆ ಅನುಮತಿ ನೀಡಲಾಗಿದೆ” ಎಂದರು.
“ಇಂಗ್ಲಿಷ್ ಕಲಿಕೆಗೆ ಸ್ಥಳೀಯ ಸಂಪನ್ಮೂಲ ಬಳಕೆ ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ. ಅಗತ್ಯವಿರುವ ಅತಿಥಿ ಶಿಕ್ಷಕರ ಸೇವೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಪಾಲಕರು, ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿಗಳಿಂದ ಹಾಗೂ ಅಧಿಕಾರಿಗಳಿಂದ ಇಂಗ್ಲಿಷ್ ಕಲಿಕೆ ಮಾಧ್ಯಮ ಬೋಧನೆಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೆಚ್ಚಿನ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿದೆ” ಎಂದು ಮಾಹಿತಿ ನೀಡಿದರು.
ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದಿನೇಶ್ ಬಿಳಗುಂಬ ಮಾತನಾಡಿ, “ಕನ್ನಡವನ್ನು ಭಾವನಾತ್ಮಕವಾಗಿ ನೋಡಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬಳಕೆಗೆ ಬರಬಲ್ಲ ಪರಿಹಾರ ಬೇಕಿದ. ಅರಿಮೆ ಆಯಾಮ ಬಿಟ್ಟು ಕನ್ನಡದಲ್ಲಿ ಕಲಿತವರಿಗೆ ಇಲ್ಲವೇ ಕನ್ನಡ ಬಲ್ಲವರಿಗೆ ಒಂದಷ್ಟು ಆಳಿಕೆ ಕೆಲಸ ಸಿಗುತ್ತದೆ ಅಂತ ಏನಾದರೂ ನಿಯಮ ಬಂದರೆ ಮಕ್ಕಳನ್ನು ಕನ್ನಡ ಕಲಿಕೆಗೆ ಕಳಿಸಲು ತಂದೆತಾಯಿಗಳಿಗೆ ಉತ್ತೇಜನ ಇರುತ್ತದೆ” ಎಂದರು.
ಸೋರುವ ಸೂರು, ಬೀಳುವ ಸ್ಥಿತಿಯಲ್ಲಿರುವ ಗೋಡೆಗಳು, ಸುತ್ತ ಕಲುಷಿತ ವಾತಾವರಣವಿರುವ ಕಟ್ಟಡಗಳಲ್ಲಿ ಯಾವ ನುಡಿಯಲ್ಲಿ ಪಾಠ ಮಾಡಿದರೂ ಉಪಯೋಗವಿಲ್ಲ. ಆಳಿಕೆಯು ‘ಇಂಗ್ಲಿಷ್ ಮೀಡಿಯಂ’ ಎಂಬ ಅರಿಮೆಗೇಡಿನ ಹಮ್ಮುಗೆಯ ಬದಲು, ಶಾಲೆಗಳನ್ನು ಸುಸ್ಥಿತಿಯಲ್ಲಿಡುವ, ಬೇಕಾದ ಸವಲತ್ತುಗಳನ್ನು ಒದಗಿಸಿ ಆಳಿಕೆಯ ಶಾಲೆಗಳದ್ದೇ ಒಂದು ಬ್ರಾಂಡ್ ಹುಟ್ಟು ಹಾಕುವ ಕಡೆ ಗಮನ ಕೊಡಲಿ ಎಂಬುದು ಎಲ್ಲರ ಆಶಯ.
