ಕೇರಳದ ನೀಲಾಂಬುರ್ ಮತ್ತು ಕರ್ನಾಟಕದ ನಂಜನಗೂಡಿಗೆ ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ನೀಲಾಂಬುರ್ – ನಂಜನಗೂಡು ರೈಲ್ವೆ ಯೋಜನೆಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ‘ಬಂಡೀಪುರ ಉಳಿಸಿ’ ಎಂಬ ಅಭಿಯಾನ ಆರಂಭಿಸಿದ್ದಾರೆ.
ಕೇರಳ ಸರ್ಕಾರದ ಒತ್ತಡದ ತಂತ್ರಕ್ಕೆ ಕರ್ನಾಟಕ ಸರ್ಕಾರವು ಸೊಪ್ಪು ಹಾಕಬಾರದು ಎಂದು ಆಗ್ರಹಿಸಿ ಮೈಸೂರಿನಲ್ಲಿ ಗಂಧದ ಗುಡಿ ಫೌಂಡೇಶನ್, ಪರಿಸರವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಂದು ಮೈಸೂರಿನಲ್ಲಿ ನಡೆದ ಬಂಡೀಪುರ ಉಳಿಸಿ ಪ್ರತಿಭಟನೆ 🙏#SaveBandipura #ಬಂಡೀಪುರ_ಉಳಿಸಿ pic.twitter.com/LX7uEWcCQl
— Mysuru Memes (@MysuruMemes) February 4, 2024
ವನ್ಯಜೀವಿ ಸಂರಕ್ಷ ಣೆ ಹಾಗೂ ವನ್ಯಪ್ರಾಣಿಗಳ ಅಸ್ವಾಭಾವಿಕ ಸಾವು ತಡೆಯಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಹಿಂಪಡೆಯದಂತೆ ಹಾಗೂ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಿಸರ ತಜ್ಞ ಹಾಗೂ ವನ್ಯಜೀವಿ ಆಸಕ್ತ ಎಂ.ಕೆ.ಸಪ್ತ ಗಿರೀಶ್, “ರಾಜ್ಯದಲ್ಲಿ ಶೇ.13-16ರಷ್ಟು ಅರಣ್ಯ ಪ್ರದೇಶವಿದೆ. ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಪ್ರದೇಶವನ್ನು ಶೇ.33ಕ್ಕೆ ಹೆಚ್ಚಿಸುವ ಅಗತ್ಯವಿದೆ. ಬಂಡೀಪುರದಲ್ಲಿ ಟ್ರಾಫಿಕ್ ಕಾರಿಡಾರ್ ನಿರ್ಮಿಸಲು ಕೇರಳ ಸರ್ಕಾರ ಮುಂದಾಗಿತ್ತು. ಇದರಿಂದ ಕಾಡು ಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗುವುದಲ್ಲದೆ ಈಗಿರುವ ಆನೆ ಕಾರಿಡಾರ್‌ಗಳಿಗೂ ತೊಂದರೆಯಾಗಲಿದೆ. ಮಾನವ-ಪ್ರಾಣಿ ಸಂಘರ್ಷಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಗಂಧದ ಗುಡಿ ಪ್ರತಿಷ್ಠಾನದ ಅಧ್ಯಕ್ಷ ಆರ್ಯನ್, ಉಪಾಧ್ಯಕ್ಷ ಕುಮಾರಗೌಡ ಇತರರು ಇದ್ದರು.
ಸಾಮಾಜಿಕ ಜಾಲತಾಣದಲ್ಲಿ ‘ಬಂಡೀಪುರ ಉಳಿಸಿ’ ಅಭಿಯಾನ
ನೀಲಾಂಬುರ್-ನಂಜನಗೂಡು ರೈಲ್ವೆ ಯೋಜನೆಗಾಗಿ ವೈಮಾನಿಕ ಸಮೀಕ್ಷೆ ಪೂರ್ಣಗೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ‘ಬಂಡಿಪುರ ಉಳಿಸಿ’ ಪೋಸ್ಟ್‌ಗಳು ಟ್ರೆಂಡಿಂಗ್ ಆಗಿವೆ. ಪರಿಸರ ಪ್ರೇಮಿಗಳು ಬಂಡೀಪುರ ಉಳಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ನೆರೆ ರಾಜ್ಯವಾದ ಕೇರಳ ಸರ್ಕಾರದ ಮನವಿ ಪುರಸ್ಕರಿಸುವ ಸುಳಿವು ನೀಡಿದ್ದರು. ಈ ವೇಳೆ ಸಚಿವರು ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ಸಡಿಲಿಕೆಗೊಳಿಸುವ ಸುಳಿವನ್ನು ನೀಡಿದ್ದರು.
ಕೇರಳ ರಾಜ್ಯದ ನೀಲಾಂಬುರ್ ಮತ್ತು ಕರ್ನಾಟಕದ ನಂಜನಗೂಡಿಗೆ ರೈಲು ಮಾರ್ಗ ಕಲ್ಪಿಸಲಾಗುತ್ತಿದೆ. ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ನೀಲಾಂಬುರ್–ನಂಜನಗೂಡು ರೈಲ್ವೆ ಯೋಜನೆಗೆ ಅಂತಿಮ ಹಂತದ ವರದಿಯಾಗಿದೆ. ವರದಿ ಸಿದ್ದಪಡಿಸಲು ವೈಮಾನಿಕ ಸಮೀಕ್ಷೆಯು ಪೂರ್ಣಗೊಂಡಿದೆ.
ಸದ್ಯ ಈ ಯೋಜನೆಯು ಪರಿಸರ ಪ್ರೇಮಿಗಳು ಅಕ್ರೋಶಕ್ಕೆ ಗುರಿಯಾಗಿದ್ದು, ಕಾಡನ್ನು ನಾಶ ಮಾಡಿ ಯಾವುದೇ ಅಭಿವೃಧ್ಧಿ ಕೆಲಸಗಳನ್ನು ಮಾಡುವುದು ಬೇಡ ಎಂಬ ಆಕ್ರೋಶ ಹೊರಹಾಕುತ್ತಿದ್ದಾರೆ. ಜೊತೆಗೆ ‘ಬಂಡೀಪುರ ಉಳಿಸಿ’ ಎಂಬ ಅಭಿಯಾನವನ್ನು ಮಾಡುತ್ತಿದ್ದಾರೆ.