ಮಂಡ್ಯ ಜಿಲ್ಲೆಯ ಮಳವಳ್ಳಿಯ ರೈತರ ಬೇಸಾಯಕ್ಕೆ ಅನುಕೂಲವಾಗುವಂತೆ ಕೆರೆಕಟ್ಟೆಗಳಿಗೆ ಮೊದಲು ನೀರು ತುಂಬಿಸಬೇಕು. ಅದು ಆಗದೇ ಇದ್ದಲ್ಲಿ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳವಳ್ಳಿ ಅರೆ ನೀರಾವರಿ ಪ್ರದೇಶ ಆಗಿದೆ. ರೈತರ ದುಃಖವನ್ನು ಜಿಲ್ಲೆಯಲ್ಲಿ ಯಾರೂ ಪರಿಗಣಿಸುತ್ತಿಲ್ಲ. ಹಲಗೂರು ಹೋಬಳಿಗೆ ಸಂಪೂರ್ಣ ನೀರಾವರಿ ಇಲ್ಲ. ಬಿಜಿಪುರದಲ್ಲಿ ಶೇ.75ರಷ್ಟು ಹಾಗೂ ಕಸಬಾ ಹೋಬಳಿಯಲ್ಲಿ 50ರಷ್ಟಿ ಮಾತ್ರ ನೀರಾವರಿ ಪ್ರದೇಶ ಇದೆ. ಕನ್ನಂಬಾಡಿ ಕಟ್ಟೆಯಲ್ಲಿ 124 ಅಡಿ ನೀರಿದ್ದರೂ ತಮಿಳುನಾಡಿಗೆ ಹರಿದು ಹೋಯಿತು. ಆದರೆ ಇಲ್ಲಿನ ಕೆರೆಕಟ್ಟೆಗಳು ತುಂಬದೇ ವ್ಯವಸಾಯ ಸಾಧ್ಯವಾಗಿಲ್ಲ ಎಂದು ಆಪಾದಿಸಿದರು.
ಕಸಬಾದಲ್ಲಿ ಕೆರೆಗಳು ಸಂಪೂರ್ಣವಾಗಿ ಒಣಗಿ ನಿಂತಿವೆ. ಇಂಜಿನಿಯರುಗಳು ಕ್ರಮವಹಿಸಿದ್ದಿದ್ದರೆ ಮದ್ದೂರು ಮತ್ತು ಮಳವಳ್ಳಿ ತಾಲೂಕಿನ ಕೊನೆ ಭಾಗಕ್ಕೆ ನೀರು ಕೊಡಬಹುದಿತ್ತು. ಮಳವಳ್ಳಿ ತಾಲೂಕಿನಲ್ಲಿ ಶೇ.30ರಷ್ಟು ಮಾತ್ರ ನಾಟಿ ಮಾಡಲಾಗಿದೆ. ಆದರೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಮಳವಳ್ಳಿ ತಾಲೂಕಿಗೆ ನೀರು ಒದಗಿಸದ ನೀರಾವರಿ ಇಲಾಖೆ ಏಕೆ ಬೇಕು? ಎಂದು ಪ್ರಶ್ನಿಸಿದರು.
ಮಳವಳ್ಳಿಯಲ್ಲಿ ಜಲಪಾತೋತ್ಸವ ಮಾಡಿದರೆ ಬೇಡ ಅನ್ನುವುದಿಲ್ಲ. ಆದರೆ ಇದರ ನೆಪದಲ್ಲಿ ತಮಿಳುನಾಡಿಗೆ ನೀರು ಬಿಡುವ ಕುತಂತ್ರ ನಡೆಸುತ್ತಿದ್ದಾರೆ. ಜಲಪಾತೋತ್ಸವಕ್ಕೂ ಮುನ್ನ ಇಲ್ಲಿನ ಭಾಗಕ್ಕೆ ನೀರು ಕೊಡಲೇಬೇಕು. ಇಲ್ಲದಿದ್ದಲ್ಲಿ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ವಿಜಯಪುರ | ಮಹಾರಾಷ್ಟ್ರ ಮೂಲದ ಅಂತಾರಾಜ್ಯ ಕಳ್ಳರ ಬಂಧನ: 208 ಗ್ರಾಂ ಚಿನ್ನಾಭರಣ ವಶಕ್ಕೆ
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಜಯರಾಮ್, ಜೆಡಿಎಸ್ ಉಪಾಧ್ಯಕ್ಷ ಸಿದ್ದಾಚಾರಿ, ಮಳವಳ್ಳಿ ತಾಲೂಕು ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕಾಂತರಾಜ್, ಯುವ ಘಟಕದ ಅಧ್ಯಕ್ಷ ಶ್ರೀಧರ್, ಯುವ ಮುಖಂಡ ಅನಿಲ್, ಶಂಕರ್ ಭಾಗವಹಿಸಿದ್ದರು.
