ಗದಗ | ಬರ ನಿರ್ವಹಣೆ: ಗಂಭೀರತೆ ಅರಿತು ಸಮರ್ಥವಾಗಿ ನಿಭಾಯಿಸಲು ಡಿಸಿ ಸೂಚನೆ

Date:

ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬರನಿರ್ವಹಣೆ ಗಂಭೀರತೆಯನ್ನು ಅರಿತು ಸಮರ್ಥವಾಗಿ ನಿಭಾಯಿಸಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಪ್ರಥಮಾದ್ಯತೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಾ ಮಟ್ಟದಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ವಾರಕ್ಕೊಂದು ಸಲ ಬರನಿರ್ವಹಣೆ ಕುರಿತು ಸಭೆ ಜರುಗಿಸಬೇಕು. ಸಭೆಯಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡಲು ಆದ್ಯತೆ ಇರಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಎದುರಾದ ವಾರ್ಡ ಅಥವಾ ಗ್ರಾಮಗಳಲ್ಲಿ ಬೊರ್‍ವೆಲ್ ಕೊರೆಸುವ ಬದಲಾಗಿ ಖಾಸಗಿ ಬೋರ್‍ವೆಲ್‍ಗಳಲ್ಲಿ ನೀರಿನ ಲಭ್ಯತೆ ಇದ್ದಲ್ಲಿ ಅವರಿಂದ ನೀರನ್ನು ಪಡೆಯಲು ಮುಂದಾಗಬೇಕು. ಹತ್ತಿರದಲ್ಲಿ ನೀರಿನ ಲಭ್ಯತೆ ಇಲ್ಲದಿದ್ದರೆ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ವಾಲ್‍ಮನ್‍ಗಳ ಸಭೆ ಕರೆದು ನೀರಿನ ಅಪವ್ಯಯವಾಗದಂತೆ ನಿಗಾವಹಿಸಲು ಸೂಚನೆ ನೀಡಬೇಕು. ನೀರನ್ನು ವೃಥಾಕಾರಣ ವ್ಯರ್ಥ ಮಾಡದೇ ಮಿತವಾಗಿ ಬಳಸುವಂತೆ ಜೀವಜಲದ ಮಹತ್ವ ಕುರಿತು ರೈತರು ಸೇರಿದಂತೆ ಸಾರ್ವಜನಿಕರಿಗೆ ತಿಳಿಹೇಳಬೇಕು ಎಂದರು.

ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಯನ್ನು ಇರುವ ನೀರಿನ ಲಭ್ಯತೆಗನುಸಾರ ಅಧಿಕಾರಿಗಳು ಹಂಚಿಕೆ ಮಾಡಿ ಬರನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಬರನಿರ್ವಹಣೆಯಲ್ಲಿ ನಿಷ್ಕಾಳಜಿ ಹಾಗೂ ನಿಧಾನಗತಿ ಕಾರ್ಯವನ್ನು ಸಹಿಸಲಾಗದು. ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಡಿಸಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ  ಬರನಿರ್ವಹಣೆ ಕುರಿತು ಖಾಸಗಿ ಬೋರ್‍ವೆಲ್ ಗುರುತಿಸಿದ, ಹೊಸದಾಗಿ ಬೋರ್‍ವೆಲ್ ಕೊರೆಸಲು ಗುರುತಿಸಿದ ಪ್ರದೇಶಗಳ ಮಾಹಿತಿ,  ಪೈಪ್‍ಲೈನ್ ದುರಸ್ತಿಗೆ ಸಂಬಂಧಿಸಿದ ವಿವರವಾದ ವರದಿಯನ್ನು ವಾಟ್ಸ್‍ಅಪ್ ಮುಖಾಂತರ ಸಲ್ಲಿಸಬೇಕು. ತಮ್ಮ ಹಂತದಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ಸೂಚಿಸಿದಂತೆ ನದಿ ದಡದಲ್ಲಿ ಹಾಗೂ ಕೆರೆಗಳಲ್ಲಿನ ನೀರನ್ನು ರೈತರು ತಮ್ಮ ಬೆಳೆಗಳಿಗೆ ಮೋಟರ್ ಮೂಲಕ ನೀರೆತ್ತುವುದನ್ನು ತಡೆಯಬೇಕು. ಅದಕ್ಕಾಗಿ ಈಗಾಗಲೇ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿಯಲ್ಲಿ ಪೊಲೀಸ ಇಲಾಖೆಯ ಜಿಲ್ಲಾ ಮೀಸಲು ಪಡೆಯ ತುಕಡಿಯನ್ನು ತಾಲೂಕುವಾರು ನೀಡಲಾಗಿದೆ. ಅವುಗಳನ್ನು ಬಳಸಿಕೊಂಡು ರೈತರ ನೀರೆತ್ತುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು. ಇನ್ನೂ ಹೆಚ್ಚಿನ ಪೊಲೀಸ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು.

ಅನುದಾನದ ವಿವರ: ಬರ ನಿರ್ವಹಣೆಗಾಗಿ ಸರ್ಕಾರ ಅನುದಾನ ನೀಡಿದ್ದು ಅಗತ್ಯಕ್ಕನುಸಾರ ಬಳಕೆ ಮಾಡಿಕೊಳ್ಳಲು ಈ ಕೆಳಕಂಡಂತೆ ಅನುದಾನ ಲಭ್ಯವಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 2421.01 ಲಕ್ಷ ರೂ ಅನುದಾನ ಬರ ನಿರ್ವಹಣೆಗಾಗಿ ಲಭ್ಯವಿದ್ದು ತಾಲೂಕುವಾರು ಎಲ್ಲ ತಹಶೀಲ್ದಾರರ ಖಾತೆಯಲ್ಲಿ ಒಟ್ಟಾರೆ 274.74 ಲಕ್ಷ ರೂ. ಅನುದಾನ ಲಭ್ಯವಿದ್ದು, ತಾಲೂಕುವಾರು ವಿವರ. ಗದಗ-41.81 , ಗಜೇಂದ್ರಗಡ-21.06, ಲಕ್ಷ್ಮೇಶ್ವರ- 7.53, ಮುಂಡರಗಿ-52.05, ನರಗುಂದ-67.64,ರೋಣ-34.39, ಶಿರಹಟ್ಟಿ-50.26

ಪರಿಹಾರ ವಿತರಣೆ: ಜಿಲ್ಲೆಯಲ್ಲಿ 2023 ರ ಮುಂಗಾರು ಹಂಗಾಮಿನಲ್ಲಿ  ಮಳೆ ಕೊರತೆಯಿಂದ (ಬರಗಾಲದಿಂದ) ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿಗೆ 113778  ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂ.ಗಳಂತೆ ಒಟ್ಟು 22,41,78,565 ರೂ. ಪರಿಹಾರ ವಿತರಿಸಲಾಗಿದೆ. ತಾಲೂಕಾವಾರು ಫಲಾನುಭವಿಗಳ ವಿವರ ಇಂತಿದೆ:    ನರಗುಂದ ತಾಲೂಕಿನಲ್ಲಿ 25988, ರೋಣ- 10703, ಗದಗ -13818, ಶಿರಹಟ್ಟಿ- 17325, ಮುಂಡರಗಿ 12905, ಗಜೇಂದ್ರಗಡ –18680, ಲಕ್ಷ್ಮೇಶ್ವರ – 14269.

ಮೇವು ಬ್ಯಾಂಕ್:  ಜಾನುವಾರುಗಳಿಗೆ ಮೇವಿನ ಅಭಾವ ತಲೆದೂರದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯ 11  ಗ್ರಾಮಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಅವುಗಳೆಂದರೆ ಗದಗ ತಾಲೂಕಿನ ಬಿಂಕದಕಟ್ಟಿ, ಕುರ್ತಕೋಟಿ, ಮುಳಗುಂದ, ಗಜೇಂದ್ರಗಡ ತಾಲೂಕಿನ ರಾಜೂರು, ಲಕ್ಷ್ಮೇಶ್ವರ, ಬಾಲೆಹೊಸೂರು, ಶಿಗ್ಲಿ, ಬಟ್ಟೂರು, ಅಡರಕಟ್ಟಿ, ಮುಂಡರಗಿ ತಾಲೂಕಿನ ಡಂಬಳ, ರೋಣ ತಾಲೂಕಿನ ಕೊತಬಾಳಗಳಲ್ಲಿ ಮೇವು ಬ್ಯಾಂಕು ತೆರೆಯಲಾಗಿದೆ.

ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮ ಹಾಗೂ ನಗರ ಪ್ರದೇಶಗಳ ವಿವರ: ಜಿಲ್ಲೆಯ  ಒಟ್ಟು  76 ಗ್ರಾಮಗಳನ್ನು  ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳಾಗಿವೆ. ಗದಗ ತಾಲೂಕಿನ 14 , ಗಜೇಂದ್ರಗಡ – 4, ಲಕ್ಷ್ಮೇಶ್ವರ – 8, ಮುಂಡರಗಿ – 7, ನರಗುಂದ – 18, ರೋಣ-17, ಶಿರಹಟ್ಟಿ -8 ಗ್ರಾಮಗಳು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ವಾರ್ಡುಗಳನ್ನು ಗುರುತಿಸಲಾಗಿದ್ದು ಒಟ್ಟು 81 ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿದೆ.  ಅವುಗಳೆಂದರೆ ಬೆಟಗೇರಿ ನಗರಸಭೆಯ 21 ವಾರ್ಡುಗಳು, ಗಜೇಂದ್ರಗಡ ಪುರಸಭೆ- 14, ಲಕ್ಷ್ಮೇಶ್ವರ ಪುರಸಭೆಯ -5, ಮುಂಡರಗಿ ಪುರಸಭೆ-11 , ನರಗುಂದ ಪುರಸಭೆಯ -7, ರೋಣ ಪುರಸಭೆಯ–7, ಮುಳಗುಂದ-5, ನರೇಗಲ್ ಪಟ್ಟಣ ಪಂಚಾಯತ್-5, ಶಿರಹಟ್ಟಿ ಪಟ್ಟಣಪಂಚಾಯತ್ -6  ವಾರ್ಡುಗಳಲ್ಲಿ ಮುಂದಿನ ದಿನಮಾನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಗುರುತಿಸಲಾಗಿದೆ.

ಅಂತರ್ಜಲಮಟ್ಟ: ಬರಗಾಲದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಅಧೋಗತಿಗೆ ಸಾಗಿದ್ದು ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಅಧಿಕ ಆಗಬಹುದಾಗಿದೆ. ಗದಗ -9.84 ಮೀಟರ್, ಮುಂಡರಗಿ-7.12 ಮೀಟರ್, ಶಿರಹಟ್ಟಿ -13.58 ಮೀಟರ್, ಲಕ್ಷ್ಮೇಶ್ವರ –19.60 ಮೀಟರ್, ರೋಣ- 13.07 ಮೀಟರ್, ಗಜೇಂದ್ರಗಡ- 20.97  ಮೀಟರ್ , ನರಗುಂದ – 8.40 ಮೀಟರ್.

ಸಹಾಯವಾಣಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಸಾರ್ವಜನಿಕರಿಗಾಗಿ ಸಹಾಯವಾಣಿಗಳನ್ನು  ತಾಲೂಕಾವಾರು ತೆರೆಯಲಾಗಿದೆ ಸಂಖ್ಯೆಗಳು ಇಂತಿವೆ:  ಜಿಲ್ಲಾಧಿಕಾರಿಗಳ ಕಚೇರಿ- 08372-239177 ; ಗದಗ 08372-250009 ; ಗಜೇಂದ್ರಗಡ – 08381-262131 ; ಲಕ್ಷ್ಮೇಶ್ವರ- 08487-273273 ; ಮುಂಡರಗಿ- 08371-262237 ; ನರಗುಂದ- 08377- 245243 ; ರೋಣ- 08381-267239 ;  ಶಿರಹಟ್ಟಿ- 08487- 242100.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಡಿ.ಎಚ್.ಒ ಡಾ.ಎಸ್.ಎಸ್. ನೀಲಗುಂದ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಶಿಂಗಟಾಲೂರು ಏತನೀರಾವರಿ ಯೋಜನೆ ಕಾರ್ಯನಿರ್ವಾಹಕ ಅಭಿಯಂತರ ಶಿವಮೂರ್ತಿ, ಪಿಆರ್‌ಇಡಿ ಕಾರ್ಯಪಾಲಕ ಅಭಿಯಂತರ ಆರ್.ಎ.ಗೌಡರ್ ಸೇರಿದಂತೆ ಆಯಾ ತಾಲೂಕುಗಳ  ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...