ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನಾದ್ಯಂತ ವಾಸಿಸುತ್ತಿರುವ ಮಾಜಿ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ, ಸರ್ಕಾರದ ವಿವಿಧ ಯೋಜನೆಗಳನ್ನು ಆದ್ಯತೆಯ ಮೇರೆಗೆ ಮಂಜೂರು ಮಾಡುವಂತೆ ಆಗ್ರಹಿಸಿ ವಿಮುಕ್ತ ದೇವದಾಸಿ ಮಹಿಳಾ ಕರ್ನಾಟಕ ವೇದಿಕೆ ವತಿಯಿಂದ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
“ದಶಕಗಳಿಂದ ಶೋಷಣೆಗೆ ಒಳಗಾಗಿರುವ ಈ ಸಮುದಾಯವು ಇಂದಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಕಷ್ಟಪಡುತ್ತಿದೆ. ಅತ್ಯಂತ ಬಡತನ ಮತ್ತು ಸಾಮಾಜಿಕ ಅಸಮಾನತೆಯಲ್ಲಿ ಬದುಕುತ್ತಿರುವ ಈ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಸಂಘಟನೆಯು ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು” ಎಂದು ಒತ್ತಾಯಿಸಿದರು.
”ದೇವದಾಸಿ ಮಹಿಳೆಯರನ್ನು ಮತ್ತು ಅವರ ಮಕ್ಕಳನ್ನು ವಿಶೇಷ ಗುಂಪು ಎಂದು ಪರಿಗಣಿಸಿ ವಸತಿ (ಆಶ್ರಯ), ಪಡಿತರ ಚೀಟಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ವಿಳಂಬವಿಲ್ಲದೆ ನೀಡಬೇಕು. ಇವರ ಮಕ್ಕಳಿಗೆ ಸರ್ಕಾರದ ವಿವಿಧ ನಿಗಮಗಳ ಮೂಲಕ ನೀಡುವ ಸ್ವಯಂ ಉದ್ಯೋಗ ಸಾಲಗಳಲ್ಲಿ (Subsidy Loans) ಶೇ. 100 ರಷ್ಟು ಆದ್ಯತೆ ನೀಡಬೇಕು. ಮನೆ ಇಲ್ಲದ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರಿ ಜಮೀನು ಅಥವಾ ವಸತಿ ಯೋಜನೆಗಳಲ್ಲಿ ತಕ್ಷಣವೇ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
”ಈ ಸಮುದಾಯದ ಅರ್ಜಿಗಳನ್ನು ಸಾಮಾನ್ಯ ಅರ್ಜಿಗಳಂತೆ ಪರಿಗಣಿಸದೆ, ‘ವಿಶೇಷ ಘಟಕ ಯೋಜನೆ’ಯಡಿ (SCP) ತಕ್ಷಣವೇ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರು ಅಭಿಷೇಕ್ ಕೊಪ್ಪದ್, “ಮಾನವೀಯ ದೃಷ್ಟಿಯಿಂದ ಮತ್ತು ಸಂವಿಧಾನಬದ್ಧ ಹಕ್ಕುಗಳ ಅಡಿಯಲ್ಲಿ ಈ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಶೋಷಿತ ಮಹಿಳೆಯರು ಮತ್ತು ಅವರ ಮಕ್ಕಳ ಬದುಕಿಗೆ ದಾರಿ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಗೌರವ ಹಿರೇಮನಿ, ಸಿದ್ದವ್ವ ಮಾದರ ಮಂಜುಳಾ ತೆಗೀಮನಿ ಯಲ್ಲವ್ವ ತಗ್ಗಿನಮಣಿ, ಮುದುಕವ್ವ ಕೊತಬಾಳ, ಎಲ್ಲಮ್ಮ ಚಲವಾದಿ, ರೇವಪ್ಪ ಕೆಂಗರ ಸೇರಿದಂತೆ ಹಲವು ಮಹಿಳೆಯರು ಉಪಸ್ಥಿತರಿದ್ದರು.





