ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಅವರಿಗೆ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಪೌರತ್ವ ಮತ್ತು ಆ ದೇಶಗಳ ಪರವಾಗಿ ಆಡುವ ಅವಕಾಶಗಳು ಬಂದಿದ್ದವು. ಆದರೆ, ಅವರು ಈ ಅವಕಾಶಗಳನ್ನು ತಿರಸ್ಕರಿಸಿ, ತಮ್ಮ ಮಾತೃಭೂಮಿ ಅಫ್ಘಾನಿಸ್ತಾನದ ಪರವಾಗಿಯೇ ಆಡುವ ನಿರ್ಧಾರ ಕೈಗೊಂಡಿದ್ದರು ಎಂಬ ಕುತೂಹಲಕರ ಮಾಹಿತಿಯನ್ನು ನೂತನ ಪುಸ್ತಕವೊಂದು ಬಹಿರಂಗಪಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಂದು(ಏ.20) ಬಿಡುಗಡೆಯಾಗಲಿರುವ ‘ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್’ (Rashid Khan: From Streets to Stardom) ಎಂಬ ಪುಸ್ತಕದಲ್ಲಿ ಲೇಖಕ ಮೊಹಮ್ಮದ್ ಹಾಂಡ್ ಜಾಫರ್ ಅವರಿಗೆ ರಶೀದ್ ಖಾನ್ ಈ ವಿಷಯ ತಿಳಿಸಿದ್ದಾರೆ. “ನನಗೆ ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ದೇಶಗಳಿಂದ ಪೌರತ್ವ ಮತ್ತು ಆಡುವ ಅವಕಾಶದ ಅವಕಾಶಗಳು ಬಂದಿದ್ದವು. ಆದರೆ, ನಾನು ನನ್ನ ದೇಶಕ್ಕೆ ಆಡದಿದ್ದರೆ, ಬೇರೆ ಯಾವುದೇ ದೇಶಕ್ಕೂ ಆಡುವುದಿಲ್ಲ ಎಂದು ಅವರಿಗೆ ತಿಳಿಸಿದೆ” ಎಂದು 27 ವರ್ಷದ ಖಾನ್ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಟ್ರೇಲಿಯಾ ಅವಕಾಶದ ಬಗ್ಗೆ ಹೆಚ್ಚು ವಿವರಗಳನ್ನು ನೀಡದ ರಶೀದ್, 2023ರ ಐಪಿಎಲ್ ಆವೃತ್ತಿಯಲ್ಲಿ ಭಾರತ ಕೊಟ್ಟಿದ್ದ ಆಫರ್ ಬಗ್ಗೆ ಪುಸ್ತಕದಲ್ಲಿ ಕುಲಂಕುಶವಾಗಿ ವಿವರಿಸಿದ್ದಾರೆ. ಗುಜರಾತ್ ಟೈಟಾನ್ಸ್ ಆಟಗಾರನಾಗಿರುವ ರಶೀದ್ ಅವರನ್ನು, ಭಾರತದ ಕ್ರಿಕೆಟ್ ಮಂಡಳಿಯ (BCCI) ಉನ್ನತ ಅಧಿಕಾರಿಯೊಬ್ಬರು ಭೇಟಿಯಾಗಲು ಬಯಸಿದ್ದಾರೆ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದರು.
“ನಾನು ಹೋಗಿ ಅವರನ್ನು ಮಾತಾಡಿಸಿದೆ. ಅವರು, ‘ನಿಮ್ಮ ದೇಶದಲ್ಲಿ (ಅಫ್ಘಾನಿಸ್ತಾನ) ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಭಾರತದಲ್ಲಿಯೇ ಬಂದು ನೆಲೆಸಿ. ನಾವು ನಿಮಗೆ ಭಾರತದ ದಾಖಲೆಗಳನ್ನು ನೀಡುತ್ತೇವೆ, ಇಲ್ಲಿಯೇ ವಾಸ ಮಾಡಿ, ಇಲ್ಲಿಯೇ ಕ್ರಿಕೆಟ್ ಆಡಿ’ ಎಂದು ಅಧಿಕಾರಿ ಹೇಳಿದ್ದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು, ಹೇಗೆ ಉತ್ತರಿಸಬೇಕು ಎಂದು ತಿಳಿಯಲಿಲ್ಲ. ಆದರೆ ನಾನು ನಕ್ಕು, ‘ತುಂಬಾ ಧನ್ಯವಾದಗಳು. ನಾನು ನನ್ನ ದೇಶ ಅಫ್ಘಾನಿಸ್ತಾನದ ಪರವಾಗಿ ಆಡುತ್ತಿದ್ದೇನೆ’ ಎಂದು ಹೇಳಿದೆ,” ಎಂದು ಖಾನ್ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಇದು IPL ಇತಿಹಾಸದ ಅತ್ಯುತ್ತಮ ಕ್ಯಾಚ್; ಶ್ರೇಯಸ್ ಕ್ಯಾಚ್ ಕಂಡು ಕಕ್ಕಾಬಿಕ್ಕಿಯಾದ ರೋಹಿತ್, ಸೂರ್ಯ
ರಶೀದ್ ಖಾನ್ ಅವರಿಗೆ ಭಾರತದ ಪೌರತ್ವ ನೀಡುವ ಬಗ್ಗೆ ಚರ್ಚೆಯಾಗುತ್ತಿರುವುದು ಇದೇ ಮೊದಲೇನಲ್ಲ. ಪುಸ್ತಕದಲ್ಲಿ ಉಲ್ಲೇಖಿಸಿದಂತೆ, 2018ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಕೆಕೆಆರ್ ವಿರುದ್ಧ ಆಡುತ್ತಾ, ಕೇವಲ 10 ಎಸೆತಗಳಲ್ಲಿ 34 ರನ್ ಗಳಿಸಿ 3 ವಿಕೆಟ್ ಪಡೆದು ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದ ನಂತರ, ಅವರಿಗೆ ಭಾರತದ ಪೌರತ್ವ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಗ್ರಹಿಸಿದ್ದರು. ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಅಭಿಯಾನವೇ ನಡೆದಿತ್ತು. ಇದಕ್ಕೆ ಉತ್ತರಿಸಿದ್ದ ಸುಷ್ಮಾ ಸ್ವರಾಜ್, “ನಾನು ನಿಮ್ಮ ಟ್ವೀಟ್‌ಗಳನ್ನು ನೋಡಿದೆ. ಆದರೆ ಪೌರತ್ವ ವಿಚಾರಗಳು ಗೃಹ ಸಚಿವಾಲಯಕ್ಕೆ ಸಂಬಂಧಿಸಿದ್ದಾಗಿವೆ,” ಎಂದು ಟ್ವೀಟ್ ಮಾಡಿದ್ದರು.
ಈ ವಿಚಾರದ ಬಗ್ಗೆ ಆಗಿನ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಕೂಡ ಪ್ರತಿಕ್ರಿಯಿಸಿ, “ರಶೀದ್ ಖಾನ್ ನಮ್ಮ ದೇಶದ ಹೆಮ್ಮೆ, ಅವರನ್ನು ಬೇರೆ ಯಾವುದೇ ದೇಶಕ್ಕೆ ಬಿಟ್ಟುಕೊಡುವುದಿಲ್ಲ” ಎಂದಿದ್ದರು. ಇದಕ್ಕೆ ರಶೀದ್ ಧನ್ಯವಾದ ತಿಳಿಸಿದ್ದರು. ನಂಗರ್‌ಹಾರ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ವರೆಗಿನ ರಶೀದ್ ಖಾನ್ ಅವರ ಪಯಣ, ಅಂಡರ್ 19 ಪರೀಕ್ಷೆಯಲ್ಲಿ ಆಯ್ಕೆಯಾಗದೆ ಇರುವುದು, ಅದನ್ನು ಮೀರಿ 2020ರಲ್ಲಿ ‘ಐಸಿಸಿ ಪ್ಲೇಯರ್ ಆಫ್ ದಿ ಡಿಕೇಡ್’ ಪ್ರಶಸ್ತಿ ಗೆದ್ದದ್ದು ಸೇರಿದಂತೆ ಹಲವು ಸ್ವಾರಸ್ಯಕರ ಅಂಶಗಳು ಈ ಪುಸ್ತಕದಲ್ಲಿ ಅಡಗಿವೆ.





